UAE

ಜನಾನುರಾಗಿಯಾಗಿದ್ದ ದಿ. ದೇವೇಶ್ ಆಳ್ವರಿಗೆ ಯುಎಇಯ ನೂರಾರು ಮಂದಿಯಿಂದ ನುಡಿ ನಮನ; ಸಂತಾಪ ಸೂಚಕ ಸಭೆ

Pinterest LinkedIn Tumblr

ದುಬೈ: ಯು.ಎ.ಇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಯುಎಇ ತುಳು ಕನ್ನಡಿಗರ ಜನಾನುರಾಗಿಯಾಗಿದ್ದ ದಿ. ದೇವೇಶ್ ಆಳ್ವರವರ ಸಂತಾಪ ಸೂಚಕ ಕಾರ್ಯಕ್ರಮವು ಜ.14 ರಂದು ನಗರದ ಬರ್ ದುಬೈಯ ಫಾರ್ಚೂನ್ ಅಟ್ರ್ಯೂಂ ಹೋಟೆಲ್ ರೂಫ್ ಟವರ್ ನಲ್ಲಿ ನಡೆಯಿತು.

ಡಿ.30 ರಂದು ದುಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದೇವೇಶ್ ಆಳ್ವರವರ ಯುಎಇಯಲ್ಲಿ ಇರುವ ನೂರಾರು ಆತ್ಮೀಯರು ಪಾಲ್ಗೊಂಡು ಆತ್ಮೀಯ ಮಿತ್ರನಾದ ದೇವೇಶ್ ಆಳ್ವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಮೊದಲಿಗೆ ಯುಎಇಯ ಬಂಟ್ಸ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿ ನಮ್ಮನ್ನು ಅಗಲಿದ ದೇವೆಶ್ ರವರು ನೆನಪು ಚಿರಸ್ಥಾಯಿ. 2001 ರಲ್ಲಿ ದುಬೈಗೆ ಬಂದು ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಊರಿನ ಯುವಕರಿಗೆ ಉದ್ಯೋಗಾತರಾಗಿದ್ದರು. ಯುಎಇ ಬಂಟ್ಸ್ ಸಂಘದ ಪ್ರದಾನ ಕಾರ್ಯದರ್ಶಿಯಾದ ಮೇಲೆ ‌ಹಲವಾರು ಕಾರ್ಯಕ್ರಮಗಳು ಯಶಸ್ವಿಗೆ ಕಾರಣಕರ್ತರಾಗಿದ್ದರು. ಬಂಟ ಕ್ರೀಡಾ ಅಭಿಮಾನಿಗಳಿಗೆ ಬಿ.ಪಿ.ಎಲ್ (ಬಂಟ್ಸ್ ಪ್ರೀಮಿಯರ್ ಲೀಗ್) ಆರಂಭಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ವಿಷಯಗಳನ್ನು ನೆನಪಿಸಿ ದೇವೆಶ್ ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಕೆ.ಎನ್.ಆರ್ ಐ. ಫೋರಂನ‌ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮಾತನಾಡಿ, ಸದಾ ನಗುಮುಖದ ವ್ಯಕ್ತಿಯಾಗಿದ್ದು ಸದಾ ಚೈತನ್ಯದ ಚಿಲುಮೆಯಂತೆ ಇದ್ದ ದೇವೆಶ್ ಇಂದಿಗೂ ನಮ್ಮೊಂದಿಗಿದ್ದಾರೆ. ಸಾವು ಬದುಕಿನ ನಡುವೆ ಹಲವು ತಿಂಗಳ ಕಾಲ ಹೋರಾಟ ಮಾಡಿ ಗೆಲುವನ್ನು ಕಾಣದೆ ಬಾರದ ಲೋಕಕ್ಕೆ ಹೋದ ದೇವೆಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ‌ ಹಾಗೂ ‌ಅವರ ದುಃಖವನ್ನು ಸಹಿಸುವಂತಹ ಶಕ್ತಿಯನ್ನು ಪರಮಾತ್ಮನು ಮಡದಿ ರೇಶ್ಮ ದೇವೆಶ್, ಮಗ ಲಕ್ಷ್ ಆಳ್ವ ,ತಂದೆ ತಾಯಿಗೆ ಹಾಗೂ ಸ್ನೇಹಿತರಿಗೆ ನೀಡಲಿ ಎಂದು ಪ್ರಾರ್ಥಿಸಿದರು.

ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್ ರವರು ಮಾತನಾಡುತ್ತಾ ಹಿರಿಯವರಲಿ ಕಿರಿಯವನಾಗಿ ಕಿರಿಯವರಲಿ ಹಿರಿಯಣ್ಣನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ದೇವೆಶ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಸುಂದರ ಶೆಟ್ಟಿ ಅಬುಧಾಬಿ, ಮನೋಹರ ತೋನ್ಸೆ ಅಬುಧಾಬಿ, ದೇವೆಶ್ ರವರ ಕಂಪನಿ ಪಾಲುದಾರರಾದ ಅರವಿಂದ ಕಾಮತ್,ಸ್ನೇಹಿತರಾದ ವಿಘ್ನೇಶ್ವ್ ರವರು ಮಾತನಾಡಿದರು.

ಉದ್ಯಮಿ, ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಉದ್ಯಮಿ ಜೋಸೆಫ್ ಮಥಾಯಿಸ್,ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ, ಕರ್ನಾಟಕ ಸಂಘದ ದುಬೈಯ ಶಶಿಧರ್ ನಾಗರಾಜಪ್ಪ, ದಯಾ ಕಿರೋಡಿಯಾನ್, ನಾಗರಾಜ ರಾವ್, ಯಕ್ಷಗಾನ ಅಭ್ಯಾಸ ಕೇಂದ್ರದ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷ ಮಿತ್ರರು ದುಬೈಯ ಜಯಂತ್ ಶೆಟ್ಟಿ,ಪಟ್ಲ ಘಟಕ ದುಬೈಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಚಿತ್ರ ನಿರ್ಮಾಪಕ ಈಶ್ವರಿದಾಸ್ ಶೆಟ್ಟಿ, ಉದ್ಯಮಿಗಳಾದ ಪ್ರೇಮ್ ನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ, ರತ್ನಾಕರ ಶೆಟ್ಟಿ, ಗಮ್ಮತ್ ಕಲಾವಿದರು ದುಬೈಯ‌ ವಿಶ್ವನಾಥ ಶೆಟ್ಟಿ, ವಾಸು ಶೆಟ್ಟಿ ಹಾಗೂ ಯುಎಇಯಲ್ಲಿ ಇರುವ ತುಳು ಕನ್ನಡದ ಐವತ್ತಕ್ಕೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ದೇವೆಶ್ ಆಳ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Comments are closed.