ಕರಾವಳಿ

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರಿಯವಾದ ಹೆಮ್ಮಾಡಿಯ ನಾಟಿ ಸೇವಂತಿ

Pinterest LinkedIn Tumblr

ಈ ಬಾರಿ ಚಳಿ ಅಭಾವದಿಂದ ನಿರೀಕ್ಷೆಯಂತೆ ಅರಳದ ಹೂ..

(ವರದಿ: ಯೋಗೀಶ್ ಕುಂಭಾಸಿ)
ಕುಂದಾಪುರ: ಹೊಸ ವರ್ಷದ ಜನವರಿ ತಿಂಗಳಿನ ಸಮಯದಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಆಸುಪಾಸಿನ ಕೆಲ ಊರುಗಳ ಗದ್ದೆಗಳಿಗೆ ಬಂದರೆ ಸೇವಂತಿ ಹೂವಿನ ಘಮಘಮ ಸುವಾಸನೆ ಮನಸ್ಸಿಗೆ ಮುದ ನೀಡುತ್ತೆ. ಆದರೆ ಈ ವರ್ಷ ಚಳಿಯನ್ನೇ ಅವಲಂಬಿಸಿ ಬೆಳೆಯುವ ಸೇವಂತಿ ಫಸಲು ಚಳಿಯ ಕೊರತೆಯಿಂದ ಕಡಿಮೆಯಾಗಿದೆ. ಸೊಳ್ಳೆ-ಕೀಟದ ಕಾಟವೂ ಉತ್ತಮ ಬೆಳೆಗೆ ಅಡ್ಡಿಯಾಗಿದೆ.

ಹೆಮ್ಮಾಡಿ ಗ್ರಾಮ ಸೇವಂತಿಗೆ ಹೂವಿನ ಬೆಳೆಗೆ ತುಂಬಾ ಪ್ರಸಿದ್ಧಿ. ಹೆಮ್ಮಾಡಿ ಗ್ರಾಮದ ಹೆಮ್ಮಾಡಿ, ಸುಳ್ಸೆ, ಹೊಸ್ಕಳಿ, ಹರೆಗೋಡು, ಕಟ್ಟು ಸೇರಿದಂತೆ ಈ ಭಾಗದಲ್ಲಿ 25 ಎಕ್ರೆಗೂ ಅಧಿಕ ಭೂಮಿಯಲ್ಲಿ ಸೇವಂತಿಗೆ ಹೂವನ್ನು ವರ್ಷವೂ ಬೆಳೆಯಲಾಗುತ್ತೆ. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯಲ್ಲಿ ಹೇರಳವಾಗಿ ಸಿಗುತ್ತದೆ. ಸೇವಂತಿಗೆ ಹೂವಿನ ಸಾಮ್ರಾಜ್ಯವೇ ಧರೆಗಿಳಿದಂತೆ ಈ ಗದ್ದೆಗಳನ್ನು ಕಂಡು ಕಣ್ತುಂಬಿಕೊಳ್ಳುವುದೇ ಒಂದು ಆನಂದವಾದರೆ ಇವುಗಳನ್ನು ಸೂಜಿ ಹಾಗೂ ಬಾಳೆ ಬಳ್ಳಿ ದಾರದ ಮೀಳ ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಮಹಿಳೆಯರ ಕುಸುರಿ ಕೆಲಸ ಮತ್ತೊಂದು ಅಪರೂಪದ ಕೈಚಳಕ. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ’ಹೆಮ್ಮಾಡಿ ಶ್ಯಾವಂತಿ’ ಎಂದು ಕರಿತಾರೆ. ಪಕ್ಕಾ ನಾಟಿ ಸೇವಂತಿ ಹೂ ಇದಾಗಿದ್ದು ಗಾತ್ರದಲ್ಲಿ ಸಣ್ಣದಾಗಿ, ಪರಿಮಳದಲ್ಲಿ ವೈಶಿಷ್ಟ್ಯವಾಗಿರುತ್ತದೆ. 20 ಗಂಟುಗಳಿಗೆ 1000 ಹೂವಿನ ಮಾಲೆಯಂತೆ ಮಾರಾಟ ಮಾಡಲಾಗುತ್ತದೆ.

ಐತಿಹಾಸಿಕ ಪುರಾಣ:
ಹೆಮ್ಮಾಡಿಯಲ್ಲಿ ಬೆಳೆಯುವ ಅಪರೂಪದ ಸೇವಂತಿಗೆ ಹೂವಿಗೆ ಐತಿಹಾಸಿಕ ಪುರಾಣವಿದೆ. ತುಳುನಾಡ ಜಿಲ್ಲೆಯ ಕಾರಣಿಕ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಈ ಸೇವಂತಿಗೆ ಪ್ರಿಯ ಎನ್ನಲಾಗುತ್ತದೆ. ಜನವರಿ ತಿಂಗಳಿನಲ್ಲಿ ಜರುಗುವ ಮಕರ ಸಂಕ್ರಮಣ ಕಾಲದಲ್ಲಿ ಶ್ರೀ ಬ್ರಹ್ಮಲಿಂಗ ದೇವರ ಕೆಂಡಸೇವೆಯ ಸಮಯದಲ್ಲಿ ಸೇವಂತಿಗೆ ಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆ ನಂಬಿಕೆಯಿದೆ. ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರ ಹೆಮ್ಮಾಡಿ ಸೇವಂತಿ ರಾಜ್ಯದ ವಿವಿದೆಡೆಗಳಿಗೆ ಮಾರಾಟಕ್ಕಾಗಿ ಕಳುಹಿಸಲಾಗುತ್ತೆ. ತಮ್ಮ ಗದ್ದೆಗಳಲ್ಲಿ ಮೊದಲು ಬೆಳೆದ ಹೂವನ್ನು ಇಲ್ಲಿಗರ ಸಮರ್ಪಿಸಿದ ಬಳಿಕವೇ ವಿವಿಧ ದೈವಸ್ಥಾನಗಳ ಉತ್ಸವಗಳಿಗೆ ಮಾರಾಟ ಮಾಡುವುದು ಇಲ್ಲಿನ ಕೃಷಿಕರ ರೂಢಿ. ಮಾರಣಕಟ್ಟೆಯಲ್ಲಿ ಹೂ ಮಾರಾಟದ ದರ ನಿಗದಿಯಂತೆ ಬೇರೆಡೆಗೂ ಒಂದಷ್ಟು ಹೆಚ್ಚು-ಕಮ್ಮಿಯಂತೆ ಮಾರಾಟವಾಗುತ್ತದೆ.

6 ತಿಂಗಳ ಶ್ರಮ:
ನೂರಾರು ವರ್ಷಗಳಿಂದಲೂ ಇಲ್ಲಿ ಸೇವಂತಿಗೆ ಬೆಳೆಯುವ ಮೂಲಕ ಕೃಷಿಕರು ಇದನ್ನೊಂದು ಸಾಂಪ್ರದಾಯಿಕ ಬೆಳೆಯನ್ನಾಗಿಸಿಕೊಂಡಿದ್ದು ಒಂದಷ್ಟು ಗದ್ದೆಗಳನ್ನು ಇದಕ್ಕೋಸ್ಕರ ಬಿಟ್ಟಿದ್ದಾರೆ. ಜುಲೈ-ಆಗಸ್ಟ್ (ಸೋಣೆ) ತಿಂಗಳಿಂದ ಸೇವಂತಿ ಗಿಡಗಳನ್ನು ಒಗ್ಗು ಹಾಕಬೇಕು. ಬೇರು‌ಬಂದ ಬಳಿಕ ನೆಟ್ಟು, ನೀರುಣಿಸಿ ಹಗಲಿರುಳು ತಮ್ಮ ಗದ್ದೆಗಳಲ್ಲಿ ಗಿಡಗಳನ್ನು ಪೋಣಿಸಿ ಬೇಕಾದ ರಸಗೊಬ್ಬರಗಳನ್ನು ಹಾಕಿ ಬೆಳೆಸಿದ ಸೇವಂತಿ ಕೃಷಿಯ ಫಸಲು ಚೆನ್ನಾಗಿ ಬೆಳೆಯಲು ಇಲ್ಲಿನ ಜನರು ಬಿಸಿಲು, ಮಳೆ ಗಾಳಿ ಎನ್ನದೇ ನಿತ್ಯ ಪರಿಶ್ರಮ ಪಡುತ್ತಾರೆ. ಒಟ್ಟು ಆರು ತಿಂಗಳ ಬೆಳೆ ಇದಾಗಿದ್ದು ಎರಡನೇ ಬೆಳೆ ಸಲಯವಾಗಿ ಕೆಲವರು ಭತ್ತದ ಕೃಷಿ ಬಳಿಕ ಖಾಲಿ ಬೀಳುವ ಗದ್ದೆಯಲ್ಲಿ ಸೇವಂತಿ ಹೂವನ್ನು ಬೆಳೆಯುತ್ತಾರೆ.

40 ವರ್ಷದಿಂದ ಸೇವಂತಿಗೆ ಬೆಳೆಯುತ್ತಿದ್ದೇವೆ. ಚಳಿಗಾಲದಲ್ಲಿ ಬೀಳುವ ಇಬ್ಬನಿಯಿಂದಲೇ ಹೂವುಗಳು ಅತಿ ಹೆಚ್ಚಾಗಿ ಅರಳುತ್ತದೆ. ಈ ವರ್ಷ ಸೇವಂತಿಗೆ ಗಿಡಗಳು ಉತ್ತಮವಾಗಿ ಬೆಳವಣಿಗೆ ಕಂಡಿತ್ತು. ಆದರೆ ಈ ವರ್ಷ ಚಳಿಯ ಅಭಾವವಿರುವ ಹಿನ್ನೆಲೆಯಲ್ಲಿ ಬೆಳೆಯಲ್ಲಿ ಹಿನ್ನಡೆಯಿದೆ. ಅಲ್ಲದೆ ಹುಳು-ಸೊಳ್ಳೆ ಕಾಟ ಹೆಚ್ಚಿದ್ದು ಔಷದೋಪಚಾರ ಅನಿವಾರ್ಯ. 6 ತಿಂಗಳು ನಿತ್ಯ ಪರಿಶ್ರಮವಿದೆ. ಇದಕ್ಕಾಗಿ ಬಹಳಷ್ಟು ಹಣ ವ್ಯಯಿಸಬೇಕಾಗುತ್ತದೆ. ನಿತ್ಯ ಕೂಲಿ, ನಿರ್ವಹಣೆ ಮೊದಲಾದ ಖರ್ಚುವೆಚ್ಚ ಬಹಳಷ್ಟು. ಉತ್ತಮ ಬೆಲೆ ಸಿಕ್ಕರೆ ಶ್ರಮಕ್ಕೂ ಪ್ರತಿಫಲ ಸಿಕ್ಕಂತಾಗುತ್ತದೆ.
– (ಸೋಮ ದೇವಾಡಿಗ, ಹೆಮ್ಮಾಡಿಯ ಕಟ್ಟು ಭಾಗದ ಹಿರಿಯ ಸೇವಂತಿಗೆ ಬೆಳೆಗಾರ)

ಪ್ರಸಿದ್ಧವಾದ ಹೆಮ್ಮಾಡಿ ಸೇವಂತಿಗೆ ಹೂವಿನ ಬೆಳೆಗೆ ವರ್ಷಕ್ಕೊಂದು ಸಮಸ್ಯೆ ಕಾಡುತ್ತದೆ. ಕೆಲವು ವರ್ಷ ಅವಧಿಗೆ ಮುನ್ನ ಹೂ ಅರಳುತ್ತದೆ. ಇತ್ತೀಚಿನ 7-8 ವರ್ಷದಿಂದ ಸೊಳ್ಳೆರೋಗದಿಂದ ಬೆಳೆಗಾರರು ನಷ್ಟವಾಗಿದೆ. ಈ ಬಾರಿ ಗರ್ಕ್ (ಗಿಡದ ಬುಡದಿಂದ ಒಣಗುವ ಸಮಸ್ಯೆ) ಎಂಬ ಸಮಸ್ಯೆ ಕಾಡುತ್ತಿದೆ. ಅಲ್ಲದೆ ಡಿಸೆಂಬರ್-ಜನವರಿ ತಿಂಗಳಿನಲ್ಲಿ ನೀರಿನ ಸಮಸ್ಯೆಯೂ ಇದ್ದು ಬೆಳೆಗಾರರು ಆಸಕ್ತಿ‌ ಕಳೆದುಕೊಂಡಿದ್ದಾರೆ. ಚಳಿ ಇಲ್ಲದ ಕಾರಣ ಮೊಗ್ಗು ಅರಳಿಲ್ಲ. ಔಷಧ ದರ ಹೆಚ್ಚು, ಸರಕಾರದಿಂದ ಯಾವುದೇ ಸಹಕಾರವಿಲ್ಲ.
– ರವಿ ದೇವಾಡಿಗ (ಸೇವಂತಿಗೆ ಬೆಳೆಗಾರ)

Comments are closed.