UAE

ಹಣ ಪಡೆಯದೆ 25 ವರ್ಷಗಳಿಂದ ನಾಟಿ ಔಷಧ ನೀಡುತ್ತಿರುವ ತ್ರಾಸಿಯ ಮಾಕ್ಷಿಮ್ ಒಲಿವೆರಾ‌ | ದುಬೈನಲ್ಲಿ ಅ.29ಕ್ಕೆ ಸನ್ಮಾನ: ಮೊದಲ ಬಾರಿ ವಿಮಾನ ಪ್ರಯಾಣ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಎಲ್ಲೂ ಗುಣವಾಗದೆ ಇವರನ್ನರಿಸಿ ಬಂದು ಚಿಕಿತ್ಸೆ ಪಡೆದವರ ಅದೆಷ್ಟೋ ಸಮಸ್ಯೆಗಳು ಬಗೆಹರಿದಿದೆ. ಲಕ್ಷಾಂತರ ಖರ್ಚು ಮಾಡಿದರೂ ಪರಿಹಾರ ಕಂಡುಕೊಳ್ಳಲಾಗದ ರೋಗಗಳು ರೂಪಾಯಿ ಖರ್ಚಿಲ್ಲದೆ ಇವರಿಂದ ವಾಸಿಯಾಗಿದೆ. ಇವರು ನೀಡುವ ನಾಟಿ ಔಷದದಿಂದ ಸಹಸ್ರಾರು ಮಂದಿ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಕುಂದಾಪುರ ತಾಲೂಕಿನ ತ್ರಾಸಿ ಸಮೀಪದ ಆನಗೋಡು ನಿವಾಸಿ ಮಾಕ್ಷಿಮ್ ಒಲಿವೆರಾ ತಮ್ಮ 64ನೇ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿದ್ದಾರೆ. ತಮ್ಮನ್ನು ಹುಡುಕಿ ಮನೆಗೆ ಬರುವ ಬೇರೆಬೇರೆ ಭಾಗದ ರೋಗಿಗಳಿಗೆ ನಾಟಿ ಪದ್ಧತಿ ಔಷಧ ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಮಾಡುತ್ತಾರೆ. ಪಿಲಿಪ್ ಒಲಿವೆರಾ- ಎವ್ಜಿನ್ ದಂಪತಿಗಳ ಏಳು ಮಕ್ಕಳ ಪೈಕಿ ಮಾಕ್ಷಿಮ್ ಎರಡನೇಯವರು. ಪ್ರಾಥಮಿಕ ಶಿಕ್ಷಣದ ಬಳಿಕ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿಕನಾಗಿಯೂ ಗುರುತಿಸಿಕೊಂಡರು. ಇದೀಗಾ ಹೈನುಗಾರಿಕೆ, ಭತ್ತ ಕೃಷಿ, ಕೋಳಿ ಸಾಕಣಿಕೆ, ತೋಟ ನೋಡಿಕೊಂಡು ಮನೆಗೆ ಬರುವ ರೋಗಿಗಳಿಗೆ ಪಾರಂಪರಿಕ ಗಿಡಮೂಲಿಕೆ ಚಿಕಿತ್ಸೆ ಕೊಡುತ್ತಿದ್ದಾರೆ.

ತಂದೆಯೇ ಗುರು: ನಾಟಿ ಔಷಧ ಕೊಡುತ್ತಿದ್ದ ತಂದೆಯೊಂದಿಗೆ 20ನೇ ವಯಸ್ಸಿನಿಂದಲೇ ಪ್ರಕೃತಿಯಲ್ಲಿ ಸಿಗುವ ಔಷಧಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧ ನೀಡಲು ಪ್ರಾರಂಭಿಸಿದರು. ದೂರದ ಕೇರಳ, ಗೋವಾ, ಮಂಗಳೂರು, ಶಿವಮೊಗ್ಗ, ಸಾಗರ, ಉತ್ತರಕನ್ನಡ ಸಹಿತ ಉಡುಪಿ, ಬೈಂದೂರು, ಕುಂದಾಪುರ ಭಾಗದ ಜನರು ಇಲ್ಲಿಗೆ ನಾಟಿ ಔಷಧಿ ಪಡೆಯಲು ಬರುತ್ತಾರೆ. ಸುತ್ತಮುತ್ತ ಪರಿಸರ, ಕಾಡುಗಳಲ್ಲಿ ಸಿಗುವ ಸೊಪ್ಪು, ಬೇರು, ತೊಗಟೆ ಸಂಗ್ರಹಿಸಿ ತಂದು ಅಗತ್ಯ ಔಷಧ ತಯಾರು ಮಾಡಲಾಗುತ್ತದೆ. ಇವರ ಅಜ್ಜ ಕೂಡ ಗಿಡಮೂಲಿಕೆ ಔಷಧ ನೀಡುತ್ತಿದ್ದು, ಬಳಿಕ ತಂದೆಯಿಂದ ಇವರು ಈ ವಿದ್ಯೆ ಬಳುವಳಿಯಾಗಿ ಪಡೆದು ತಮ್ಮ ಕಿರಿಯ ಮಗ ಬಿ.ಬಿ.ಎ ಪದವಿಧರ ಜಾಕ್ಸನ್ ಅವರಿಗೂ ಚಿಕಿತ್ಸಾ ಪದ್ಧತಿ ಹೇಳಿಕೊಟ್ಟಿದ್ದಾರೆ. ಪತ್ನಿ ರೀಟಾ, ಪುತ್ರ ಜಾಕ್ಸನ್ ಇವರ ಚಿಕಿತ್ಸಾ ಕಾರ್ಯಕ್ಕೆ ಬೆನ್ನೆಲುಬಾಗಿದ್ದಾರೆ. ಹಿರಿಯ ಪುತ್ರ ಜೆಸನ್, ಸೊಸೆ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

ಉಚಿತ ಚಿಕಿತ್ಸೆ; ಯಾವುದಕ್ಕೆಲ್ಲಾ ಪರಿಹಾರ..?
ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು, ಸರ್ಪಸುತ್ತು, ಬಾವು, ಹೊಟ್ಟೆಯ ಸಮಸ್ಯೆ, ವಿಷದ ಹಾವು ಕಟ್ಟಿದರೆ, ಮೂಲವ್ಯಾದಿ, 6 ರೀತಿಯ ಜಾಂಡಿಸ್ ಖಾಯಿಲೆಗಳು, ಗರ್ಭಕೋಶದ ಸಮಸ್ಯೆ, ಸೋರಿಯಾಸಿಸ್ ಹಾಗೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಮುಂತಾದ ಹಲವಾರು ಖಾಯಿಲೆಗಳಿಗೆ ಇವರ ಬಳಿ ನಾಟಿ ಮದ್ದು ಸಿಗುತ್ತೆ. ಸೆಪ್ಟಿಸಿಮೆಯಾ ಎಂಬ ಸಮಸ್ಯೆಗೆ ಮದ್ದು ನೀಡಿ 6 ತಿಂಗಳಿನಲ್ಲಿ ರೋಗಿ ಗುಣಮುಖರಾಗುವಂತೆ ಮಾಡಿದ್ದು ದೊಡ್ಡ ಸಂಗತಿ. ಕಿಡ್ನಿ ಕಲ್ಲುಗಳ ವಿಚಾರದಲ್ಲಿ ಕಲ್ಲಿನ ಗಾತ್ರದ ಆಧಾರದಲ್ಲಿ ಚಿಕಿತ್ಸೆ ನೀಡುತ್ತಾರೆ. ಆಯಾಯ ರೋಗಗಳಿಗೆ ಸಂಬಂಧಿಸಿ ಪಥ್ಯ, ಆಹಾರ ಕ್ರಮದ ಬಗ್ಗೆಯೂ ತಿಳುಸುತ್ತಾರೆ. ಕಿಡ್ನಿ ಸ್ಟೋನ್ ಪರಿಹಾರಕ್ಕೆ ಹಾಗೂ ನೋವಿನೆಣ್ಣೆಗೆ ಖರ್ಚಿರುವ ಕಾರಣ ಇವರೆಡಕ್ಕೆ‌ ಮಾತ್ರವೇ ಜನರಿಗೆ ಹೊರೆಯಾಗದಂತೆ ಕೊಂಚ ಹಣ ಪಡೆಯುವ ಇವರು ಮತ್ತೆಲ್ಲಾ ಗಿಡಮೂಲಿಕೆ, ನಾಟಿ ಔಷಧಿ ಯಾವುದೇ ಹಣ ಪಡೆಯದೆ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.

ದುಬೈನಲ್ಲಿ ಅ.29ಕ್ಕೆ ಸನ್ಮಾನ: ಮೊದಲ ಬಾರಿ ವಿಮಾನ ಪ್ರಯಾಣ..!
ನಮ್ಮ ಕುಂದಾಪ್ರ ಕನ್ನಡ ಬಳಗ, ಗಲ್ಫ್ ವತಿಯಿಂದ ಅ.29ಕ್ಕೆ ದುಬೈನ ಅಜ್ಮಾನ್ ನಲ್ಲಿ ನಡೆಯಲಿರುವ ‘ಕುಂದಗನ್ನಡ ಉತ್ಸವ-2023’ ಕಾರ್ಯಕ್ರಮದಲ್ಲಿ ಮಾಕ್ಷಿಮ್ ಒಲಿವೆರಾ ಅವರಿಗೆ ಸನ್ಮಾನಿಸಲಾಗುತ್ತಿದೆ. ಪ್ರಥಮ ಬಾರಿ ವಿಮಾನ ಪ್ರಯಾಣದ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ ಅವರು, ಕನಸಲ್ಲೂ ಎಣಿಸಿರಲಿಲ್ಲ, ಬಯಸದೆ ಬಂದ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

2017ರಲ್ಲಿ ನಮ್ಮ ಕುಂದಾಪ್ರ ಬಳಗ, ಗಲ್ಫ್ ಎಂಬ ಸಂಘಟನೆ ಆರಂಭವಾಗಿದ್ದು ಎಲೆಮರೆಕಾಯಿಗಳಂತೆ ಯಾವುದೇ ಪ್ರಚಾರವಿಲ್ಲದೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡವರಿಗೆ ‘ಕುಂದಾಪ್ರ ಕನ್ನಡ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕುಂದಾಪುರದ ಊರಿನಲ್ಲಿದ್ದು ಉತ್ತಮ ಸೇವಾ ಕಾರ್ಯ ಮಾಡುತ್ತಿರುವ ಮಾಕ್ಷಿಮ್ ಒಲಿವೆರಾ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನಿಸುತ್ತಿರುವುದು ನಮಗೂ ಹೆಮ್ಮೆ ವಿಚಾರ.
– ಸದನ್ ದಾಸ್ ಶಿರೂರು (ನಮ್ಮ ಕುಂದಾಪ್ರ ಕನ್ನಡ ಬಳಗ, ಗಲ್ಫ್‌ ಹಾಗೂ ಕನ್ನಡ ಕೂಟ ದುಬೈ ಅಧ್ಯಕ್ಷ)

ಹಣದ ಹಿಂದೆ ಬಿದ್ದಿಲ್ಲ, ಜನರ ಸೇವೆ ಮಾಡುತ್ತಿರುವೆ
ಕಳೆದ 25 ವರ್ಷದಿಂದ ಈ ಕಾರ್ಯ ಮಾಡುತ್ತಿದ್ದು ತೃಪ್ತಿಯಿದೆ. ಹುಡುಕಿ ಬರುವವರಿಗೆ ಜಾತಿ ಬೇಧವಿಲ್ಲದೆ ಸೇವಾ ಮನೋಭಾವನೆಯಿಂದ ಚಿಕಿತ್ಸೆ ನೀಡುತ್ತೇವೆ. ಯಾವುದೇ ನಿರ್ದಿಷ್ಟ ಶುಲ್ಲವಿಲ್ಲ. ಹಣದ ಹಿಂದೆ ಹೋಗಬೇಡ. ಜನರಿಂದ ಗಳಿಸಿದ ಪ್ರೀತಿ ಶಾಶ್ವತ ಎಂಬುದು ತಂದೆ ಹೇಳಿಕೊಟ್ಟಿದ್ದು ಅದನ್ನು ಪಾಲಿಸುತ್ತಿದ್ದು ನನ್ನ ಮಗನಿಗೂ ಅದರಂತೆ ನಡೆಯಲು ಹೇಳಿರುವೆ. ಗಿಡಮೂಲಿಕೆ, ನಾಟಿ ಔಷಧಗಳ ಬಗ್ಗೆ ಅರಿವು, ನಂಬಿಕೆ ಹೊಂದಿದವರು ಬರುತ್ತಾರೆ. ಅವರವರು ನಂಬುವ ದೇವರ ಮೇಲಿನ ನಂಬಿಕೆ ಜೊತೆಗೆ ನಾವು ನೀಡುವ ಔಷಧ, ಪಥ್ಯ (ಆಹಾರ) ಕ್ರಮ ರೂಢಿಸಿಕೊಳ್ಳಲು ಹೇಳುತ್ತೇವೆ. ಸಹಸ್ರಾರು ಜನರು ಗುಣಮುಖರಾಗಿದ್ದಾರೆ. ಇತ್ತೀಚಿನ ಆಹಾರ ಪದ್ಧತಿ ಜನರನ್ನು ರೋಗಗ್ರಸ್ಥರನ್ನಾಗಿ ಮಾಡುತ್ತಿದೆ.
– ಮಾಕ್ಷಿಮ್ ಒಲಿವೆರಾ, ಆನಗೋಡು (ನಾಟಿ ಔಷಧ ನೀಡುವವರು)

Comments are closed.