ಅಸ್ಸಾಂ: ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೊ ಮರಡೋನಾ ಅವರ ಕಳವಾಗಿದ್ದ ದುಬಾರಿ ಬೆಲೆಯ ಹೆರಿಟೇಜ್ ಹ್ಯೂಬ್ಲೋಟ್ ವಾಚ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಸ್ಸಾಂ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ದುಬೈನ ಅಂಗಡಿಯೊಂದರಿಂದ ಈ ವಾಚ್ ಅನ್ನು ಕಳುವು ಮಾಡಲಾಗಿತ್ತು. ಈ ಬಗ್ಗೆ ದುಬೈನಲ್ಲಿ ಕೇಸು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷ ಪ್ರಾಯದ ವಾಜಿದ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಪೂರ್ವ ಅಸ್ಸಾಂನ ಶಿವಸಾಗರ್ ಮೂಲದವನು. ಈತ ದುಬೈನ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೆಲ ತಿಂಗಳ ಹಿಂದೆ ಕುಟುಂಬಿಕರ ಅನಾರೋಗ್ಯದ ನೆಪವೊಡ್ಡಿ ಅಸ್ಸಾಂಗೆ ವಾಪಾಸ್ಸಾಗಿದ್ದ. ವಾಚ್ ಕಳವಿನ ಬಗ್ಗೆ ವಾಜಿದ್ ಮೇಲೆ ಸಂಶಯವಿದ್ದು ಆತನ ಮೇಲೆ ನಿಗಾ ಇಡಲಾಗಿತ್ತು.
ಕೇಂದ್ರದ ಅಪರಾಧ ಸಂಸ್ಥೆಗಳೊಂದಿಗೆ ದುಬೈ ಪೊಲೀಸರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಶನಿವಾರ ಮುಂಜಾನೆ 4 ಗಂಟೆಗೆ ಬಂಧಿಸಲಾಗಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಟ್ವೀಟ್ ಮಾಡಿ ಅಧೀಕೃತ ಮಾಹಿತಿ ನೀಡಿದ್ದಾರೆ. ಅಸ್ಸಾಂ ಹಾಗೂ ದುಬೈ ಪೊಲೀಸ್ ನಡುವಿನ ಅಂತರರಾಷ್ಟ್ರೀಯ ಸಮನ್ವಯತೆ ನಡುವೆ ನಡೆದ ಕಾರ್ಯಾಚರಣೆ ಇದಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 2020ರಲ್ಲಿ ಹೃದಯಾಘಾತದಿಂದ ಡಿಯಾಗೋ ಮರಡೋನಾ ಮೃತಪಟ್ಟಿದ್ದರು.
Comments are closed.