UAE

ದುಬೈನಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಸಮಾರಂಭ | ಪುನೀತ್ ರಾಜಕುಮಾರ್ ಸಂಸ್ಮರಣೆ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಒಂದಾಗಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎಇ. ಆಶ್ರಯದಲ್ಲಿ ನವೆಂಬರ್ 12ರಂದು ಶೇಖ್ ರಾಶೀದ್ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮನಡೆಯಿತು.

ಸಹಸ್ರ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಅನಿವಾಸಿ ಕನ್ನಡಿಗರ ಸಮ್ಮುಖದಲ್ಲಿ ಅನಿವಾಸಿ ಭಾರತೀಯ ಸಮಿತಿಯ ಆಶ್ರಯದಲ್ಲಿ ಭಾಗಿಯಾದ ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ, ಅಲ್ ಐನ್ ಕನ್ನಡ ಸಂಘ, ಅಂತರಾಷ್ಟ್ರೀಯ ಕನ್ನಡಿಗರ ಒಕ್ಕೂಟ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ರಾಕ್ ಬ್ರೇಕರ್ಸ್ ನೃತ್ಯ ಅಕಾಡೆಮಿ ತಂಡದ ಪ್ರತಿಭಾನ್ವಿತ ಕಲಾವಿದ ತಂಡದ ವೈವಿಧ್ಯಮಯ ನೃತ್ಯಗಳು ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಗಲಿದ ಪ್ರಖ್ಯಾತ ಕನ್ನಡ ಚಂದನವನದ ನಾಯಕ ನಟನಿಗೆ ನೃತ್ಯದ ಮೂಲಕ ಸಲ್ಲಿಸಿದ ಅಂತಿಮ ನಮನದ ನೃತ್ಯಗಳು ಹಾಗು ಇನ್ನಿತರ ನೃತ್ಯಗಳು ಪ್ರಥಮ ಹಂತದಲ್ಲಿ ಜನ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಖ್ಯಾತ ಗಾಯಕರು ಹಾಗೂ ಚಲನಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಚಂದನವನದ ಸಂಗೀತ ನಿರ್ದೇಶಕ ಗುರುಕಿರಣ್, ಅಕ್ಷತಾ ರಾವ್, ಸನ್ನಿಧಿ ವಿಶ್ವನಾಥ್ ಶೆಟ್ಟಿ ಇವರ ಸುಮಧುರ ಕಂಠಸಿರಿಯಲ್ಲಿ ನಡೆದ ಸಂಗೀತ ರಸಮಂಜರಿ ಜನಮನ ಸೂರೆಗೊಂಡಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ದುಬಾಯಿಯಲ್ಲಿ ಯಕ್ಷಗಾನ ಅಭ್ಯಾಸ ತರಗತಿಯ ಪ್ರಬುದ್ಧ ಕಲಾವಿದರಿಂದ ಹನುಮಾರ್ಜುನ ಯಕ್ಷಗಾನ ಪ್ರಸಂಗ ಅದ್ಭುತ ಪ್ರದರ್ಶವಾಗಿದ್ದು ಸಮಾರಂಭದ ಕಾರ್ಯಕ್ರಮ ಟಿ.ವಿ.ವಾಹಿನಿಯಲ್ಲಿ ನೇರಪ್ರಸಾರವಾಗಿದ್ದು ವಿಶ್ವದಾದ್ಯಂತ ವೀಕ್ಷಕರು ನೋಡುವಂತಾಯಿತು. ಸಮಾರಂಭದಲ್ಲಿ ವೀಕ್ಷಕರಾಗಿ ಆಗಿಮಿಸಿದ್ದ ಅರಬ್ ಪ್ರಜೆ ಬು ಅಬ್ದುಲ್ಲಾ ಗ್ರೂಪ್ ಚೇರ್ಮನ್, ಹಾಗೂ ಇಂಡಿಯನ್ ಕಾನ್ಸುಲೆಟ್ ಲೀಗಲ್ ಅಡ್ವೈಸರ್ ಡಾ|| ಬು ಅಬ್ದುಲ್ಲಾ ರವರನ್ನು ವೇದಿಕೆಗೆ ಬರಮಾಡಿ ಕೊಂಡು ಕನ್ನಡ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿವಧ್ವಜ್ ಶೆಟ್ಟಿ ಮತ್ತು ಈಶ್ವರ್ ದಾಸ್ ಶೆಟ್ಟಿ ನಿರ್ಮಾಣದ ಇ-ಮಣ್ಣು ಕನ್ನಡ ಚಲನ ಚಿತ್ರದ ಟೀಸರ್ ನ್ನು ಕರ್ನಾಟಕ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ರವರು ಚಾಲನೆ ನೀಡುವುದರ ಮೂಲಕ ಲೋಕಾರ್ಪಣೆ ಮಾಡಿದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷ, 2021ನೇ ಸಾಲಿನ ಪ್ರತಿಷ್ಠ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ. ಪ್ರವೀಣ್ ಕುಮಾರ್ ಶೆಟ್ಟಿಯವರು ಸಭಾಧ್ಯಕ್ಷತೆಯಲ್ಲಿ ಈ ಅದ್ಧೂರಿ ಸಮಾರಂಭ ನಡೆಯಿತು.

 

ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇಂಡಿಯನ್ ಕಾನ್ಸುಲೆಟ್ ನಿಂದ ಕಾನ್ಸುಲ್ ಜೆನರಲ್ ಅಫ್ ಇಂಡಿಯದ ಗೌರವಾನ್ವಿತ ಅಮನ್ ಪುರಿಯವರು ಗೌರವ ಅತಿಥಿಯಾಗಿದ್ದರು. ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಪತ್ರಕರ್ತರು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಚಲನಚಿತ್ರ ನಟ ನಿರ್ಮಾಪಕರಾದ ಶಿವಧ್ವಜ್ ಶೆಟ್ಟಿ ಸಮಾರಂಭದಲ್ಲಿ ಭಾಗಿಗಳಾಗಿದ್ದರು. ಜ್ಯೋತಿ ಬೆಳಗಿಸಿ ಧ್ವಜರೋಹಣ ಹಾಗೂ ಕನ್ನಡಿಗರು ದುಬಾಯಿ ಮಹಿಳಾ ಹಾಗೂ ಪುರುಷರ ತಂಡದ ಹಚ್ಚೇವು ಕನ್ನಡದ ದೀಪ ಹಾಗೂ ಕನ್ನಡ ರಾಜ್ಯ ಗೀತೆಯೋಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಇತ್ತಿಚೆಗೆ ಕನ್ನಡ ಕುಲಕೋಟಿಯನ್ನು ಅಗಲಿದ ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್ ಕುಮಾರ್ ರವರಿಗೆ ಮೌನ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಯಿತು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲ್ತೆರೆ ಸ್ವಾಗತಿಸಿದರು.

ಇದೇ ಸಂದರ್ಭ 2021ನೇ ಸಾಲಿನ ಪ್ರತಿಷ್ಠ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಪ್ರವೀಣ್ ಕುಮಾರ್ ಶೆಟ್ಟಿಯರನ್ನು ಅನಿವಾಸಿ ಕನ್ನಡಿಗರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ತಮ್ಮ ಸನ್ಮಾನಕ್ಕೆ ಉತ್ತರಿಸುವ ಸಂದರ್ಭದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ನಡೆದು ಬಂದ ಹಾದಿಯ ಬಗ್ಗೆ ವಿವರಣೆ ನೀಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಪಾಠಶಾಲೆ ದುಬಾಯಿ ಸುಗ್ಗಿ 8 ಗಿಡನೆಟ್ಟು ಕನ್ನಡ ಅಕ್ಷರಭ್ಯಾಸದ ಮೂಲಕ ಸಚಿವರು ಹಾಗೂ ಅತಿಥಿಗಳು ಉದ್ಘಾಟಿಸಿದರು. ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಕನ್ನಡ ಪಾಠಶಾಲೆಯ ಹೆಜ್ಜೆ ಗುರುತಿನ ಬಗ್ಗೆ ವಿವರಿಸಿದರು.

ಕಾನ್ಸುಲ್ ಜೆನರಲ್ ಅಫ್ ಇಂಡಿಯದ ಗೌರವಾನ್ವಿತ ಅಮನ್ ಪುರಿಯವರು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಚಿವ ಬಿ.ಸಿ.ನಾಗೇಶ್ ರವರಿಗೆ ಸನ್ಮಾನ ಗೌರವ ಸಲ್ಲಿಸಿದ ನಂತರ ಮಾನ್ಯ ಸಚಿವರು ದುಬಾಯಿಯಲ್ಲಿ ನಡೆಯುತ್ತಿರುವ ನೈಜ್ಯ ಅಭಿಮಾನಿ ಕನ್ನಡಿಗರ ಕನ್ನಡ ಪ್ರೇಮಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿ ಶುಭವನ್ನು ಹಾರೈಸಿದರು. ಅತಿಥಿಗಳಾದ ಗುರುಕಿರಣ್ ಹಾಗೂ ವಿಶ್ವೇಶ್ವರ ಭಟ್ ಹಾಗೂ ಶಿವಧ್ವಜ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ತಮ್ಮ ಭಾಷಣದಲ್ಲಿ, ಹಲವು ವರ್ಷಗಳಿಂದ ನೇಮಕ ಮಾಡದಿರುವ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರ ಉಪಾಧ್ಯಕ್ಷರನ್ನು ನೇಮಿಸುವಂತೆ ಹಾಗೂ ಗಲ್ಫ್ ನಾಡಿನಲ್ಲಿ ಕನ್ನಡ ಸೇವೆಯನ್ನು ಮಾಡಿದ ಕನ್ನಡಿಗರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಹಾಗೂ ಕರ್ನಾಟಕ ಸರ್ಕಾರದ ಪ್ರಧಾನ ಕಚೇರಿಗಳಲ್ಲಿ ಕನ್ನಡ ಮಾತನಾಡುವ ಅಧಿಕಾರಿಗಳನ್ನು ನೇಮಿಸಿ ಕನ್ನಡ ಭಾಷೆಯಲ್ಲೆ ವ್ಯವಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮಾನ್ಯ ಸಚಿವರ ಮೂಲಕ ತಮ್ಮ ಹಕ್ಕೊತ್ತಾಯವನ್ನು ಸಭೆಯಲ್ಲಿ ಮಂಡಿಸಿದರು.

ವೇದಿಕೆಯಲ್ಲಿ ಆಸೀನರಾಗಿದ್ದ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಎಂ.ಇ. ಮೂಳೂರ್, ಕನ್ನಡಿಗರು ದುಬಾಯಿ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್, ಅಲ ಐನ್ ಕನ್ನಡ ಸಂಘದ ಅಧ್ಯಕ್ಷ ವಿಮಲ್ ಕುಮಾರ್, ಅಂತರಾಷ್ಟ್ರೀಯ ಕನ್ನಡಿಗ ಒಕ್ಕೂಟದ ಸಂಚಾಲಕ ಹಿದಾಯತ್ ಅಡ್ಡೂರ್ ಮಾತನಾಡಿದರು.

ಸಹಾಯ ಹಸ್ತ ನೀಡಿರುವ ಎಲ್ಲಾ ಪ್ರಾಯೋಜಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಶ್ವನಾಥ್ ಶೆಟ್ಟಿ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಆರತಿ ಆಡಿಗ ಹಾಗೂ ವಿಘ್ನೇಶ್ ಕುಂದಾಪುರ ಮಾಡಿದರು. ಸಭಾಕಾರ್ಯಕ್ರಮವನ್ನು ಬಿ. ಕೆ. ಗಣೇಶ್ ರೈ ಮತ್ತು ಕಾವ್ಯಶ್ರೀ ಯುವರಾಜ್ ನಿರ್ವಹಿಸಿ, ಮೋಹನ್ ನರಸಿಂಹಮೂರ್ತಿ ವಂದಿಸಿದರು.

ಹರೀಶ್ ಶೇರಿಗಾರ್ ಅವರಿಂದ ಪುನೀತ್ ಗಾನ..
ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ, ಉದ್ಯಮಿ ಹರೀಶ್ ಶೇರಿಗಾರ್ ಅವರು ಡಾ. ರಾಜಕುಮಾರ್ ಅಭಿನಯದ ಬಡವರ ಬಂಧು ಚಿತ್ರದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ…ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿದೆ..ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ..’ ಗೀತೆ ಹಾಡಿ ಪುನೀತ್ ಸಂಸ್ಮರಣೆ ಮಾಡಿದ್ದು ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು.

ವಿಶ್ವೇಶ್ವರ ಭಟ್ ಟ್ವೀಟ್…
ಕನ್ನಡದ ಹಿರಿಯ ಪತ್ರಕರ್ತ, ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಟ್ವೀಟ್ ಮಾಡಿದ್ದಾರೆ. ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಯುಎಇ, ನಿನ್ನೆ ದುಬೈಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ ಸ್ಮರಣೆಯ ಪುಟ್ಟ ಝಲಕ್. ಹಾಡಿದವರು ಉದ್ಯಮಿ ಹರೀಶ್ ಶೇರಿಗಾರ್’ ಎಂದು ಅಭಿಮಾನದಿಂದ ಬರೆದುಕೊಂಡಿದ್ದಾರೆ.

ವರದಿ- ಬಿ. ಕೆ. ಗಣೇಶ್ ರೈ ದುಬೈ (ಚಿತ್ರಗಳು- ಅಶೋಕ್ ಬೆಳ್ಮಣ್)

Comments are closed.