ಯಾವುದೇ ಫಿಲ್ಮಿ ಹಿನ್ನೆಲೆ ಇಲ್ಲದೇ ಚಿತ್ರರಂಗ ಪ್ರವೇಶಿಸಿ ಸ್ವಂತ ಪ್ರತಿಭೆಯ ಆಧಾರದಿಂದಲೇ ಬಾಲಿವುಡ್‌ನಲ್ಲಿ ನೆಲೆಯೂರುತ್ತಿರುವ ನಟ ಗುಲ್ಶಾನ್ ದೇವಯ್ಯ ಚಿತ್ರೋದ್ಯಮದಲ್ಲಿ ಸ್ನೇಹ ಸಂಬಂಧವೂ ಮುಖ್ಯ ಎಂದಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಐಎಎನ್‌ಎಸ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ‘ಹಂಟರ್ರ್’ ನಟ ಗುಲ್ಶಾನ್, ಚಿತ್ರರಂಗದಲ್ಲಿನ ಜನರೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿರಬೇಕಾದ ಅವಶ್ಯಕತೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ಸಿನಿಮಾ ರಂಗದಲ್ಲಿನ ಜನರೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಅವಶ್ಯಕ. ನಾನೂ ಕೂಡ ವಿವೇಕ್ ಅಗ್ನಿಹೋತ್ರಿ, ಅನುರಾಗ್ ಕಶ್ಯಪ್ ಅವರಂತಹ ಅನೇಕ ಸಿನಿಕರ್ಮಿಗಳೊಂದಿಗೆ ಉತ್ತಮ ಸ್ನೇಹಸಂಬಂಧ ಹೊಂದಿದ್ದೇನೆ.’ ಎಂದು ಅವರು ಹೇಳಿದ್ದಾರೆ. ಆದರೆ ಗೆಳೆತನದಿಂದಲೇ ಎಲ್ಲವೂ ನಡೆಯುತ್ತದೆ ಎಂಬುದನ್ನೂ ಗುಲ್ಶಾನ್ ಒಪ್ಪುವುದಿಲ್ಲ.
ಗೆಳೆತನದ ಬಲ ಎಷ್ಟೇ ಇದ್ದರೂ ವೃತ್ತಿ ಯಶಸ್ಸಿನಲ್ಲಿ ಅದಕ್ಕಿಂತ ಕಲಾವಿದನ ಪರಿಶ್ರಮ ಮತ್ತು ಬದ್ಧತೆಯೇ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗುಲ್ಶಾನ್ ಅವರ ಅಭಿಮತ. ‘ಕೆಲಸದ ವಿಷಯಕ್ಕೆ ಬಂದರೆ ಎಲ್ಲವೂ ನಿಮ್ಮ ಪ್ರತಿಭೆಯನ್ನು ಅವಲಂಭಿಸಿರುತ್ತದೆ. ಪ್ರತಿಭೆ ಮಾತ್ರವೇ ಈ ವಿಷಯದಲ್ಲಿ ನಿಮಗೆ ಸಹಾಯ ಮಾಡಬಲ್ಲದು’ ಎಂದೂ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಗುಲ್ಶಾನ್ ತಮ್ಮ ವೃತ್ತಿಬದುಕಿನ ಯಶಸ್ಸಿನಲ್ಲಿ ತಮ್ಮ ಪತ್ನಿಯ ಪಾತ್ರವನ್ನೂ ಸ್ಮರಿಸಿಕೊಂಡಿದ್ದಾರೆ.
‘ನಾನು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲು ನನ್ನ ಪತ್ನಿಯೊಂದಿಗೆ ಚರ್ಚಿಸುತ್ತೇನೆ. ಅವಳ ಸಲಹೆ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡೇ ನಿರ್ಧಾರ ಕೈಗೊಳ್ಳುತ್ತೇನೆ. ಯಾಕೆಂದರೆ ನನ್ನ ಪತ್ನಿ ಕಲ್ಲಿರಾಯ್ ಝಿಯಾಫೆಟಾ ಕೂಡ ನಟಿ. ನಾನು ಯಾವುದೇ ವಿಷಯದ ಬಗ್ಗೆ ನನ್ನಲ್ಲಿ ಗೊಂದಲವಾದರೂ ಅವಳ ಬಳಿ ಚರ್ಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ತಮಗೆ ಚಿತ್ರನಿರ್ದೇಶನದ ಕನಸಿಲ್ಲ ಎಂದೂ ಅವರು ಹೇಳಿದ್ದಾರೆ. ‘ನಿರ್ದೇಶನದಲ್ಲಿ ನನಗೆ ಆಸಕ್ತಿಯಿಲ್ಲ. ನನ್ನ ಆಸಕ್ತಿ ಏನಿದ್ದರೂ ನಟನೆಯ ಬಗ್ಗೆ. ನಾನು ಮೂಲತಃ ನಟ ಮತ್ತು ನಾನು ನನ್ನ ತನವನ್ನು ಸಾಬೀತು ಮಾಡಿಕೊಳ್ಳುವುದೂ ನಟನೆಯ ಮೂಲಕವೇ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.