ಕರ್ನಾಟಕ

ಮಾತೃಭಾಷೆಯಲ್ಲೇ ಶಿಕ್ಷಣ ಮಸೂದೆಗೆ ಆರಂಭದಲ್ಲೇ ವಿಘ್ನ

Pinterest LinkedIn Tumblr

Kannada-Education

ಬೆಂಗಳೂರು, ಏ.3-ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ  ನೀಡಬೇಕೆಂಬ ರಾಜ್ಯಸರ್ಕಾರದ ಉದ್ದೇಶಿತ ಹಾಗೂ ಬಹುನಿರೀಕ್ಷಿತ ಮಸೂದೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.  ಒಂದೆಡೆ ಈ ಮಸೂದೆಗೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಶಾಲಾ ಆಡಳಿತ ಮಂಡಳಿ ಸರ್ಕಾರದ ತೀರ್ಮಾನಕ್ಕೆ ಸಡ್ಡು ಹೊಡೆಯಲು ಮುಂದಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಬಹುಮತದಿಂದ ಅಂಗೀಕೃತಗೊಂಡಿದ್ದ ಕನ್ನಡ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ

ಕನ್ನಡದಲ್ಲೇ  ಪ್ರಾಥಮಿಕ ಶಿಕ್ಷಣ ನೀಡಬೇಕು. ಅಲ್ಲದೆ, ಹತ್ತನೇ ತರಗತಿವರೆಗೆ ಕನ್ನಡ ಭಾಷೆಯನ್ನು ಎಲ್ಲಾ ಶಾಲೆಗಳಲ್ಲೂ ಎರಡನೇ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕೆಂಬ ನಿಯಮ ಕಾಯ್ದೆಯಲ್ಲಿದೆ.

ಈ ಕಾಯ್ದೆ ಪ್ರಕಾರ ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲೆಗಳು ಇನ್ನು ಮುಂದೆ  ಒಂದರಿಂದ ಐದನೇ ತರಗತಿವರೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧನೆ ಮಾಡಲೇಬೇಕಿತ್ತು.  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ (ಕುಸುಮಾ)ಮುಂದಾಗಿದೆ.  ಕಾರಣವೇನು: ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂದು ಈ ಹಿಂದೆ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕುಸುಮಾ ಮಂಡಳಿಯ ಕೆಲವು ಸದಸ್ಯರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.  ವಾದ-ವಿವಾದ ನಡೆದ ಬಳಿಕ ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ಪೋಷಕರು ತೀರ್ಮಾನಿಸಬೇಕೇ ಹೊರತು ಸರ್ಕಾರಕ್ಕೆ ನಿರ್ಧರಿಸುವ ಹಕ್ಕಿಲ್ಲ ಎಂಬ ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅಂತಿಮವಾಗಿ ಸುದೀರ್ಘ ವಾದ ನಡೆದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಮಕ್ಕಳ ಶಿಕ್ಷಣ ಪೋಷಕರ ತೀರ್ಮಾನವಾಗಬೇಕೇ ಹೊರತು ಸರ್ಕಾರ ತೀರ್ಮಾನಿಸಲು ಅವಕಾಶವಿಲ್ಲ ಎಂದು  ಐತಿಹಾಸಿಕ ತೀರ್ಪು ನೀಡಿತ್ತು. ಕೊನೆಗೆ ಸರ್ಕಾರ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಕ್ಯೂರೇಟರ್ ಅರ್ಜಿ ಸಲ್ಲಿಸಿತ್ತು. ಅಂತಿಮವಾಗಿ ಇಲ್ಲಿ ಕೂಡ ಅರ್ಜಿ ವಜಾಗೊಂಡು ಸುಪ್ರೀಂಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಈಗ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಪ್ರಶ್ನಿಸಲು ಮುಂದಾಗಿದ್ದಾರೆ.  ಒಂದು ವೇಳೆ ರಾಜ್ಯ ಸರ್ಕಾರ ಮಸೂದೆಗೆ ರಾಜ್ಯಪಾಲರ ಅಂಗೀಕಾರ ಪಡೆಯಲು ಕಳುಹಿಸಿಕೊಟ್ಟರೆ ಸಹಿ ಹಾಕದಂತೆ ರಾಷ್ಟ್ರಪತಿಗಳ ಮೂಲಕ ಒತ್ತಡ ಹಾಕಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಶೀಘ್ರದಲ್ಲೇ ರಾಜ್ಯಪಾಲರನ್ನು ಮತ್ತು ರಾಷ್ಟ್ರಪತಿಗಳ ಬಳಿ ಕುಸುಮಾ ಮಂಡಳಿಯ ನಿಯೋಗ ತೆರಳಿ ಸುಪ್ರೀಂಕೋರ್ಟ್ ತೀರ್ಪನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿಯಾಗುವವರೆಗೂ  ಸರ್ಕಾರದ ಮಸೂದೆಗೆ ಅಂಕಿತ ಹಾಕದೆ ತಿರಸ್ಕರಿಸುವಂತೆ  ಮನವಿ ಮಾಡಲಿದ್ದಾರೆ.  ಒಂದು ವೇಳೆ ಸರ್ಕಾರ ಕಾಯ್ದೆ ಜಾರಿಗೊಳಿಸಿದರೆ ಇಂಗ್ಲೀಷ್ ವ್ಯಾಮೋಹಿಗಳಿಗೆ ಹೊಡೆತ ಬೀಳಲಿದೆ.  ಏಕೆಂದರೆ ಬಹುತೇಕ ಶಾಲೆಗಳಲ್ಲಿ ಆಂಗ್ಲಭಾಷೆಯೇ ಪ್ರಥಮ ಭಾಷೆಯಾಗಿದ್ದು, ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಬೋಧಿಸಲಾಗುತ್ತಿದೆ. ಇದರಿಂದ ಪೋಷಕರು ಐಸಿಎಸ್‌ಸಿ, ಸಿಬಿಎಸ್‌ಸಿ ಶಾಲೆಗಳತ್ತ ಮುಖ ಮಾಡಬಹುದೆಂಬ ಆತಂಕ ಆಡಳಿತ ಮಂಡಳಿಯದು.

Write A Comment