ಕರ್ನಾಟಕ

ಮೋದಿಯವರೇ ನಮ್ಮ ಖಾತೆಗೆ 15ಲಕ್ಷ ರೂ.ಯಾವಾಗ ಬರುತ್ತೆ ..?

Pinterest LinkedIn Tumblr

Modi-PM

ಬೆಂಗಳೂರು, ಏ.3- ಅಧಿಕಾರ ಕೊಟ್ಟರೆ ಮೂರೇ ದಿನದಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿರುವ 90 ಸಾವಿರ ಕೋಟಿ ಕಪ್ಪು ಹಣವನ್ನು ಮೂರೇ ದಿನದಲ್ಲಿ ವಾಪಾಸ್ ತಂದು ದೇಶದ ಎಲ್ಲಾ ನಾಗರೀಕರ ಖಾತೆಗಳಿಗೂ 15 ಲಕ್ಷದಂತೆ ಹಂಚುವುದಾಗಿ ನರೇಂದ್ರ ಮೋದಿ ಹೇಳಿದ್ದರು. ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ನಮ್ಮ ಖಾತೆಗೆ ಇನ್ನೂ  ಹಣ ಬಂದಿಲ್ಲ ಯಾಕೆ ಎಂದು ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಶ್ನಿಸಿದರು. ನಗರದ ಆನಂದ ರಾವ್ ವೃತ್ತದ ಬಳಿಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು,

ಮೆರವಣಿಗೆಯಲ್ಲಿ ತೆರಳಿ ಸಮೀಪದಲ್ಲೇ ಇರುವ ಅಶೋಕ ಹೊಟೇಲ್‌ನಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ನಮ್ಮ ಖಾತೆಗೆ ಇನ್ನೂ 15 ಲಕ್ಷ ಹಣ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಲು ಮುಂದಾದರು.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶಾದ್ಯಂತ ಭರ್ಜರಿ ಪ್ರಚಾರ ನಡೆಸಿದ ನರೇಂದ್ರ ಮೋದಿಯವರು, ನನಗೆ ಅಧಿಕಾರ ನೀಡಿ ಮೂರೇ ದಿನದಲ್ಲಿ ದೇಶದ ಸಂಪತ್ತನ್ನು ಕೊಳ್ಳೇ ಹೊಡೆದು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ವಾಪಾಸ್ ತಂದು ದೇಶದ ಎಲ್ಲಾ ನಾಗರೀಕರ ಖಾತೆಗಳಿಗೆ ಹಂಚುತ್ತೇನೆ ಎಂದು ಹೇಳಿದ್ದರು. ದೇಶದ ಬಡವರ ಹಾಗೂ ಕೃಷಿಕರ ಹಿತರಕ್ಷಣೆಗೆ ಬದ್ಧನಾಗಿರುತ್ತೇನೆ ಎಂದಿದ್ದರು.

ಆದರೆ ಅಧಿಕಾರಕ್ಕೆ ಬಂದು ಮೂನ್ನೂರು ದಿನಗಳಾದರೂ ಇನ್ನೂ ಏಕೆ ನಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬಂದಿಲ್ಲ ಎಂಬುದನ್ನು ನಾವು ಮೋದಿಯನ್ನೇ ಕೇಳಿ ತಿಳಿದುಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಪೊಲೀಸರು ಭದ್ರತೆಯನ್ನು ಭೇಧಿಸಿ ಮುನ್ನುಗ್ಗಲು ಯತ್ನಿಸಿದರು. ಮೋದಿ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲ, ನಮಗೂ ಅವರನ್ನು ಭೇಟಿ ಮಾಡುವ ಅಧಿಕಾರವಿದೆ, ಅವಕಾಶ ಮಾಡಿಕೊಡಿ ಎಂದು ಕಾರ್ಯಕರ್ತರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ತಿಳಿಗೊಳಿಸಲು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅತ್ಯುನ್ನತ ಭೂ ಸ್ವಾಧೀನ ಕಾಯ್ದೆಯನ್ನು ಮಾರ್ಪಡಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಬಂಡವಾಳಶಾಹಿಗಳ, ಕಾಪೋರೆಟ್ ಸಂಸ್ಥೆಗಳ ತಾಳಕ್ಕೆ ತಕ್ಕಂತೆ ಕಾಯ್ದೆ ಬದಲಾವಣೆ ಮಾಡಿದೆ. ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಚರ್ಚೆಗೆ ಒಳಪಡಿಸದೆ ನೇರವಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೊಸಿ ಬಡ ರೈತರನ್ನು ಬೀದಿ ಪಾಲು ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.

ಈಗಲಾದರೂ ತಪ್ಪು ತಿದ್ದಿಕೊಳ್ಳಿ ಇಲ್ಲವಾದರೆ ನಿಮಗೆ ಭವಿಷ್ಯವಿಲ್ಲ. ಕಾಂಗ್ರೆಸ್ ದೇಶಾದ್ಯಂತ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಎಐಸಿಸಿ ಮುಖಂಡ ಸೂರಜ್ ಹೆಗ್ಡೆ ಮಾತನಾಡಿ, ಸರ್ಕಾರದ ಸ್ವತ್ತಾಗಿದ್ದ ಅಶೋಕ್ ಹೊಟೇಲನ್ನು ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಿತ್ತು. ಈಗ ಅಲ್ಲೇ ಕುಳಿತು ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ದಿನ ಬೆಳಗಾಗುವುದರೊಳಗಾಗಿ ಎಲ್ಲರ ಬಾಳು ಬೆಳಗುವುದಾಗಿ ಹೇಳಿದ್ದ ಮೋದಿ ಈಗ ಏನು ಮಾಡಿದ್ದಾರೆ. 15 ಲಕ್ಷ ರೂ.ಗಳು ಎಲ್ಲಿವೆ. ಎಲ್ಲರಿಗೂ ಉದ್ಯೋಗ ಕೊಡುವುದಾಗಿ ಹೇಳಿದ್ದ ಮೋದಿಯವರಿಗೆ ಮಾತ್ರ ಈಗ ಪ್ರಧಾನಿ ಕೆಲಸ ಸಿಕ್ಕಿದೆ ಎಂದು ಲೇವಡಿ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Write A Comment