ಮನೋರಂಜನೆ

‘ಟೋನಿ’ ಮತ್ತು ‘ಒಲವೇ ಮಂದಾರ’ದ ಜಯಣ್ಣ ಈಗ ಬುಲೆಟ್ ಸವಾರಿ

Pinterest LinkedIn Tumblr

kbec02jayatirtha

-ಡಿ.ಎಂ.ಕುರ್ಕೆ ಪ್ರಶಾಂತ
ಕನ್ನಡದ ಪ್ರಮುಖ ಪ್ರಯೋಗಾತ್ಮಕ ನಿರ್ದೇಶಕರ ಸಾಲಿನಲ್ಲಿ ಗುರ್ತಿಸಿಕೊಂಡವರು ಜಯತೀರ್ಥ. ‘ಟೋನಿ’ ಮತ್ತು ‘ಒಲವೇ ಮಂದಾರ’ದ ಜಯಣ್ಣ ಈಗ ಬುಲೆಟ್ ಸವಾರಿ ಹೊರಟಿದ್ದಾರೆ. ಅಂದಹಾಗೆ ಅವರ ಕೈಯಲ್ಲಿರುವುದು ಶರಣ್ ಅಭಿನಯದ ‘ಬುಲೆಟ್ ಬಸ್ಯ’ ಚಿತ್ರ. ಗಂಭೀರ ಮತ್ತು ಸೂಕ್ಷ್ಮ ವಿಚಾರಗಳು ಅವರ ಸಿನಿಮಾದ ವಸ್ತು. ಅವರ ಇಲ್ಲಿನ ಮಾತುಗಳು ಗಂಭೀರವಾಗಿಲ್ಲ ನಿಜ, ಆದರೆ ಅವರ ಮಾತಿನ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗದ ಪ್ರಯೋಗಾತ್ಮಕ ಫಸಲಿಗೆ ಸೂಕ್ತ ಮನ್ನಣೆ ಇಲ್ಲದಿರುವ ಬಗ್ಗೆ ವಿಷಾದವಿದೆ. ಈ ನಡುವೆಯೇ ಪ್ರೇಕ್ಷಕನ ಅಭಿರುಚಿಗೆ ತಕ್ಕಂತೆ ರುಚಿಕಟ್ಟಾದ ಅಡುಗೆ ಉಣಬಡಿಸುವ ವಿಶ್ವಾಸ ತುಡಿತವಿದೆ.

*ಈ ವಯಸ್ಸಿನಲ್ಲಿ ಬುಲೆಟ್ ಸವಾರಿಯ ಆಸೆ ಏಕೆ?
20ಕ್ಕೆ ಪೆದ್ದು 70ಕ್ಕೆ ಬುದ್ಧಿ ಎಂದು ಗಾದೆ ಇದೆ. ನನಗೆ ಈಗ ಬುದ್ಧಿ ಬಂದಿದೆ! ಆ ಮುಂಚೆ ನಮ್ಮ ಹಾಯಿದೋಣಿಯೇ ಅದ್ಭುತ ಅಂದುಕೊಂಡಿದ್ದೆ. ಆದರೆ ಬುಲೆಟ್ ಸೌಂಡು, ಸವಾರಿ ಅದ್ಭುತ ಎನಿಸಿತು. ಈಗಾಗಲೇ 120ರ ಸ್ಪೀಡ್‌ನಲ್ಲಿ ಇದ್ದೇನೆ. ಜೂನ್‌ನಲ್ಲಿ ಪ್ರೇಕಕನ ಮುಂದೆ ಸ್ಟ್ಯಾಂಡ್ ಹಾಕುತ್ತೇನೆ.

*ಸೂಕ್ಷ್ಮ ವಿಷಯಗಳ ನಿರೂಪಕರು ನೀವು. ಈಗ ಕಾಮಿಡಿ ಸಿನಿಮಾ ಸಹವಾಸ ಮಾಡಿದ್ರಿ?ಈ ಹಿಂದಿನದ್ದೆಲ್ಲವನ್ನೂ ಒಎಲ್‌ಎಕ್ಸ್‌ನಲ್ಲಿ ಮಾರಿದ್ದೇನೆ. ಕೆಲವೊಂದಿಷ್ಟನ್ನು ಕೊಳ್ಳುವವರೂ ಯಾರು ಇಲ್ಲದೆ ಅಲ್ಲೇ ಬಿದ್ದಿವೆ. ಈಗ ಕಮರ್ಷಿಯಲ್ ತಕ್ಕಡಿ ಹಿಡಿದು ವ್ಯಾಪಾರ ಮಾಡುವುದಕ್ಕೆ ಹೊರಟಿರುವೆ.

*ತಕ್ಕಡಿ ಸಹವಾಸ ಮತ್ತು ವಣಿಕ ಬುದ್ಧಿ ನಿಮಗೆ ಹೊಂದುತ್ತದೆಯೇ?
ಮೆದುಳು ಒಳ್ಳೆಯದ್ದನ್ನೇ ಆಲೋಚಿಸಿದರೂ ಹೊಟ್ಟೆ ಕೇಳುವುದಿಲ್ಲ. ಕೆಲವರಿಗೆ ಮಾಂಸ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ, ಕೆಲವರಿಗೆ ಬಾಯಲ್ಲಿ ನೀರು. ಈ ಮೊದಲು ನನಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ ಹೊಟ್ಟೆ ಕೇಳಬೇಕಲ್ಲ. ಆ ಕಾರಣಕ್ಕೆ ಬಾಯಲ್ಲಿ ನೀರು ತುಂಬಿಕೊಳ್ಳಬೇಕು ಎನಿಸಿದೆ.

*ನಿಮ್ಮನ್ನು ನಗಿಸುವುದೇ ಕಷ್ಟ ಎನ್ನುತ್ತಿದ್ದಾರಲ್ಲ ಗಾಂಧಿನಗರದ ಜನ?
ನಾನು ಮುಂಚೆ ಗಂಭೀರವಾಗಿಯೇ ಇದ್ದೆ. ಆದರೆ ಈಗ ಅದನ್ನೂ ಒಎಲ್‌ಎಕ್ಸ್‌ನಲ್ಲಿ ಮಾರಿದ್ದೇನೆ. ಅದಕ್ಕೆ ಕಾರಣ ಸಿನಿಮಾದ ಅಪಘಾತ! ಕರುಣೆ ಹುಟ್ಟುವುದು ಅಪಘಾತವಾದ ಮೇಲೆ ಎನ್ನುವ ಮಾತಿದೆ. ಈ ಹಿಂದಿನ ಸಿನಿಮಾ ಅಪಘಾತದಿಂದ ಹೊರ ಬಂದು ಬದುಕಬೇಕು ಎಂದುಕೊಂಡಿದ್ದೇನೆ. ‘ಬ್ಯೂಟಿಫುಲ್ ಮನಸ್ಸುಗಳು’ ಎನ್ನುವ ಚಿತ್ರಕ್ಕೆ ಕಥೆ ಮಾಡಿಕೊಂಡಿದ್ದೆ. ಸಮಾಜದ ಕೆಟ್ಟ ಅಂಶ ಗಳೆಲ್ಲ ತೋರುವಂತೆ ಮಾಡಿದ ಕಥೆ ಅದು. ಆದರೆ ಈಗ ಅದನ್ನೇ ‘ಬ್ಲಾಕ್ ಕಾಮಿಡಿ’ಯಾಗಿ ಹೇಳುತ್ತಿದ್ದೇನೆ. ಅಂದ್ರೆ ಚಾರ್ಲಿ ಚಾಪ್ಲಿನ್ ರೀತಿ! ನನ್ನ ಲೈಫು ಬ್ಲಾಕ್ ಕಾಮಿಡಿಯೇ.

*ರಂಗಭೂಮಿಯಿಂದ ರಂಗುರಂಗಾದ ಸಿನಿಮಾ ಸಂಗಕ್ಕೆ ಬಂದಿದ್ದು ಏಕೆ?
ರಂಗಭೂಮಿಯ ರೀತಿ–ನೀತಿ, ಉದ್ದೇಶ ಗಳನ್ನು ಸಿನಿಮಾದಲ್ಲಿ ಜಾರಿಮಾಡೋಣ ಎಂದುಕೊಂಡು ಬಂದೆ ಆದರೆ ಈಗ ಸಿನಿಮಾದಿಂದಲೇ ರಂಗಭೂಮಿಗೆ ಒಂದಿಷ್ಟು ವಿಷಯಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆಯೇನೋ ಎನ್ನುವ ಸ್ಥಿತಿ ಬಂದಿದೆ. ಹಾಲನ್ನು ಮನೆ ಬಾಗಿಲಿಗೆ ತಂದುಕೊಟ್ಟರೂ ಚೌಕಾಸಿ ಮಾಡುತ್ತೇವೆ, ಆದರೆ ಗಾಂಧಿಜಯಂತಿಯಂದು ಆಲ್ಕೋಹಾಲ್‌ ಅನ್ನು ಬ್ಲಾಕ್‌ನಲ್ಲಿ  ಎಷ್ಟು ದೊಡ್ಡು ಕೊಟ್ಟಾದರೂ ಕುಡಿಯುತ್ತೇವೆ. ಜನರಿಗೆ ಎಂಜಾಯ್ ಬೇಕು, ರಿಲ್ಯಾಕ್ಸ್ ಆಗಬೇಕು ಎಂದು ಸಿನಿಮಾಕ್ಕೆ ಬರುತ್ತಾರೆ. ಆ ಸತ್ಯ ಅರ್ಥವಾಗಿದೆ.

*‘ಟೋನಿ’ ಚಿತ್ರಕಥೆಗೆ ರಾಜ್ಯ ಪ್ರಶಸ್ತಿಯೂ ಬಂದಿತು?
ಅದೇ ಆಗಿದ್ದು ನೋಡಿ…ಯಾವುದೇ ಫೋನ್, ಶಿಫಾರಸು ಇಲ್ಲದೇ ಪ್ರಶಸ್ತಿ ಬಂದಿತು. ನಮ್ಮನ್ನೂ ಗುರ್ತಿಸುವವರು ಇದ್ದಾರಲ್ಲ ಎಂದು ಆಶ್ಚರ್ಯವಾಯಿತು.

*ಫಸ್ಟ್‌ಲವ್ವು, ಸೆಕೆಂಡ್ ಲವ್ವು… ಬದುಕಿನಲ್ಲಿ ನಡೆದಿತ್ತೇ?
ಸ್ಕೂಲ್‌ನಲ್ಲಿ ಡವ್ವು ಹಾಕೋಣ ಅಂದ್ರೆ ಮನೆಯಲ್ಲಿ ಬಡತನ. ಆ ಬಗ್ಗೆ ಯೋಚನೆಯೇ ಬರಲಿಲ್ಲ. ಕಾಲೇಜು ಮೆಟ್ಟಿಲನ್ನು ನಾನು ಕಾಣಲಿಲ್ಲ. 21 ವರ್ಷಕ್ಕೆ ಜವಾಬ್ದಾರಿ ಬಂತು. ಲವ್ವು, ಡವ್ವಿಗೆ ಲೈಫು ಅವಕಾಶ ಇರಲಿಲ್ಲ. ಸಿನಿಮಾಕ್ಕೆ ಬರುವಷ್ಟರಲ್ಲಿ ವಯಸ್ಸಾಗಿತ್ತು! ನನ್ನ ಒಬ್ಬಳೇ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಒಂದು ಮಾತು ಕೆಲವರು ಬದುಕು ನವಲತ್ತರ ನಂತರ  ಆರಂಭವಾಗುತ್ತದೆಯಂತೆ ನನಗಿನ್ನೂ 37.

*21 ಕೆ.ಜಿ. ದೇಹ ತೂಕವನ್ನು ಕಡಿಮೆ ಮಾಡಿಕೊಂಡಿದ್ದೀರಲ್ಲ. ಸಿನಿಮಾದಲ್ಲಿ ನಾಯಕಿ ಜತೆ ಡ್ಯುಯೆಟ್ ಹಾಡುವ ದೂರದ ಆಲೋಚನೆ, ಆಸೆಗೋ?
ನಾನು ಅಷ್ಟೊಂದು ಕ್ರೂರಿ ಅಲ್ಲ ಸಾರ್‌…ನನ್ನ ಕ್ಲಾಸಿನಿಂದ ಮಾಸಿಗೆ ತಂದರು ಎಂದು ಪ್ರೇಕ್ಷಕರ ಮೇಲೆ ದ್ವೇಷ ತೀರಿಸಿಕೊಳ್ಳುವುದಿಲ್ಲ. ನಿರ್ದೇಶಕನಾಗಿಯೇ ಇರುವೆ.

*ತೂಕ ಇಳಿಸಿಕೊಂಡಿರುವ ನಿಮ್ಮ ಫಿಟ್‌ನೆಸ್‌ ಗುಟ್ಟು?
ಹ್ಹ ಹ್ಹ ಹ್ಹ…ಬಾಲ್ಯದಿಂದ 18 ವರುಷಗಳ ಕಾಲ ಸೈಕಲ್‌ ತುಳಿದಿದ್ದೆ. ಈಗ ಮರಳಿ ಗೂಡಿಗೆ ಎನ್ನುವಂತೆ ಮತ್ತೆ ಕ್ಯಾರಿಯರ್‌ನ ಅಟ್ಲಾಸ್ ಸೈಕಲ್‌ ತೆಗೆದುಕೊಂಡೆ. ಎಲ್ಲರೂ ಡೈರೆಕ್ಟರ್ ಆದ ಮೇಲೆ ಕಾರು ತೆಗೆದುಕೊಳ್ಳುತ್ತಾರೆ. ಆದರೆ ನಾನು ಬುಲೆಟ್ ಮಾರಿ ಸೈಕಲ್ ಖರೀದಿಸಿದೆ. ಈ ಬೈಸಿಕಲ್ಲೇ ನನ್ನ ಬೆಂಡ್ ಮಾಡಿದ್ದು.
*

ನನಗೆ ಇಂಗ್ಲಿಷ್ ಅಂದ್ರೆ ಕಷ್ಟವಾಗಿದ್ದ ದಿನಗಳವು. ಒಮ್ಮೆ ರಂಗಭೂಮಿಯಲ್ಲಿ ಇಬ್ಬರು ನಟರು ಪರಸ್ಪರ ಜೋರಾಗಿ ಕಿತ್ತಾಡುತ್ತಿದ್ರು. ನಾನು ಅವರ ಜಗಳ ಬಿಡಿಸುವುದಕ್ಕೆ ಹೋದೆ. ‘ಕಾಂಪ್ರಮೈಸ್ ಬೇಡ, ಕಾಂಪ್ಲಿಕೇಶನ್‌ ಮಾಡಿ ಬಿಟ್ಟುಬಿಡಿ’ ಎಂದೆ. ಎಲ್ಲರೂ ನಕ್ಕರು. ಏಳನೇ ಕ್ಲಾಸಿಗೆ ಶಾಲೆ ಬಿಟ್ಟಿದ್ದೆ. ನಮ್ಮ ಅಮ್ಮನ ಬಲವಂತಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡೆ. ಆದರೆ ಒಂದು ದಿನವೂ ಶಾಲೆಗೆ ಹೋಗಲಿಲ್ಲ. ಪರೀಕ್ಷಾ ಪ್ರವೇಶ ಪತ್ರವೂ ಬಂದಿತು. ಇವನು ಪರೀಕ್ಷೆಗೆ ತಯಾರಿಯಾಗಿದ್ದಾನೆ ಎಂದು ಅಮ್ಮ ತಿಳಿದಿದ್ದರು. ಪರೀಕ್ಷೆಯ ಮೊದಲ ದಿನವೇ ಸಂಜೆ ‘ಸಿದ್ದ’ ಎನ್ನುವ ಬೀದಿನಾಟಕವಿತ್ತು. ನಾನು ಆ ನಾಟಕದ ಡೈಲಾಗುಗಳನ್ನೇ ಉತ್ತರ ಪತ್ರಿಕೆಯಲ್ಲಿ ಬರೆದುಕೊಟ್ಟು ಬಂದೆ. ಆ ನನ್ನ ಉತ್ತರವನ್ನೂ ನಕಲು ಮಾಡಿದವರು ಇದ್ದರು.

Write A Comment