ವಾಣಿಜ್ಯ

ಕಡಿಮೆ ಬೆಲೆಯ ನ್ಯಾನೊ ಕಾರಿಗೆ ‘ಟಾಟಾ’ ಹೇಳಲು ಮುಂದಾದ ಕಂಪೆನಿ; ದೇಶದ ಹಲವೆಡೆ ಬುಕಿಂಗ್ ಸ್ಥಗಿತ

Pinterest LinkedIn Tumblr

ಅಹಮದಾಬಾದ್: ಕಡಿಮೆ ಬೆಲೆಯ ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೊ ಕಾರು ಉತ್ಪಾದನೆ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿದೆ. ಹೀಗಾಗಿ ದೇಶದ ಅನೇಕ ಕಡೆಗಳಲ್ಲಿ ಡೀಲರ್‌ಗಳು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನ್ಯಾನೊ ಕಾರು ಕಾಯ್ದಿರಿಸುವಿಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್‌ ವರದಿ ಮಾಡಿದೆ.

ತಿಂಗಳೊಂದರಲ್ಲಿ ಅತಿ ಕಡಿಮೆ ಉತ್ಪಾದನೆಯಾಗುತ್ತಿರುವ ಕಾರು ಮಾಡೆಲ್‌ಗಳಲ್ಲಿ ನ್ಯಾನೊ ಸಹ ಒಂದಾಗಿದೆ. ಗುಜರಾತ್‌ನ ಸನದ್ ಘಟಕದಲ್ಲಿ ದಿನವೊಂದಕ್ಕೆ ಸರಾಸರಿ ಕೇವಲ ಎರಡು ಕಾರುಗಳಷ್ಟೇ ಉತ್ಪಾದನೆಯಾಗುತ್ತವೆ. ನ್ಯಾನೊಗೆ ಬದಲಾಗಿ ಸಮಕಾಲೀನ ಕಾರು ಮಾಡೆಲ್‌ಗಳಾದ ಟಿಯಾಗೊ, ಟಿಗೋರ್, ಹೆಕ್ಸಾ ಆ್ಯಂಡ್ ನೆಕ್ಸಾನ್‌ಗಳನ್ನೇ ಷೋರೂಮ್‌ಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ಷ ಆಗಸ್ಟ್‌ನಲ್ಲಿ ದೇಶದ 630 ಷೋರೂಮ್‌ಗಳಿಗೆ 180 ಕಾರುಗಳನ್ನು ಮಾರಾಟಕ್ಕಾಗಿ ಪೂರೈಲಾಗಿತ್ತು. (2016ರ ಆಗಸ್ಟ್‌ನಲ್ಲಿ 711 ಕಾರುಗಳನ್ನು ಪೂರೈಲಾಗಿತ್ತು). ಸೆಪ್ಟೆಂಬರ್‌ನಲ್ಲಿ 124 ಕಡೆಗಳಲ್ಲಿ ಕಾರಿನ ಬೇಡಿಕೆ ಕಡಿಮೆಯಾಗಿತ್ತು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ಹಬ್ಬದ ಸೀಸನ್‌ನಲ್ಲಿಯೂ ಮತ್ತೆ 57 ಕಡೆಗಳಲ್ಲಿ ಕಾರಿನ ಬೇಡಿಕೆ ಇಳಿಕೆಯಾಗಿತ್ತು. ಈ ಮಧ್ಯೆ, ಟಾಟಾ ಮೋಟರ್ಸ್ ಕಂಪೆನಿ ಕೊಯಮತ್ತೂರು ಮೂಲದ ಜಯೇಮ್ ಅಟೊಮೋಟಿವ್ಸ್ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರಲಿದೆ. ಇದು ನ್ಯಾನೊ ಉತ್ಪಾದನೆಗೆ ಇನ್ನಷ್ಟು ಹೊಡೆತ ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Comments are closed.