ಕರಾವಳಿ

ಕೋಟೇಶ್ವರ: ವೈಜ್ಞಾನಿಕ ಹೈನುಗಾರಿಕೆ ಅಭಿವೃದ್ಧಿ ಬಗ್ಗೆ ಮಾಹಿತಿ ಕಾರ್ಯಗಾರ | ಹೈನುಗಾರಿಕೆಯಲ್ಲಿ ಉತ್ಸಾಹ ಬೆಳೆಸಿಕೊಂಡರೆ ಉತ್ತಮ ಅವಕಾಶಗಳಿದೆ: ಎಸ್.ಪ್ರಕಾಶ್ಚಂದ್ರ ಶೆಟ್ಟಿ (Video)

Pinterest LinkedIn Tumblr

ಕುಂದಾಪುರ: ಗ್ರಾಮೀಣ ಭಾಗದ ಅಭಿವೃದ್ಧಿಯ ಜೊತೆಗೆ ಆರ್ಥಿಕತೆಗೆ ಕೊಡುಗೆ ನೀಡುವಲ್ಲಿ ಕೃಷಿಪತ್ತಿನ ಸಂಘಗಳು ಹಾಗೂ ಹಾಲು ಉತ್ಪಾದಕರ ಸಂಘಗಳು ಮುಂಚೂಣಿಯಲ್ಲಿದೆ. ರೈತರಿಗಾಗಿಯೇ ಆರಂಭಗೊಂಡ ಸಹಕಾರಿ ಪತ್ತಿನ ಸಂಘಗಳಿಂದ ರೈತರ ಅಭ್ಯುದಯವಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ರವಿವಾರ ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಯ ಕಲ್ಯಾಣ‌ಮಂಟಪದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡ ‘ವೈಜ್ಞಾನಿಕ ಹೈನುಗಾರಿಕೆ ಅಭಿವೃದ್ಧಿ ಬಗ್ಗೆ ಮಾಹಿತಿ ಕಾರ್ಯಗಾರ’ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘಗಳು ಜನರಿಗೆ ಸೇವಾ ರೂಪದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದು ಜನರ ಸೊತ್ತಾಗಿದೆ. ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕೃಷಿ ಮತ್ತು ಕೃಷಿಪೂರಕ ಉದ್ಯೋಗ ಮಾಡಿದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಸಮಗ್ರ ಕೃಷಿ ಪದ್ದತಿ, ಹೈನುಗಾರಿಕೆಯಲ್ಲಿ ಉತ್ಸಾಹ ಬೆಳೆಸಿಕೊಂಡರೆ ಉತ್ತಮ ಅವಕಾಶಗಳು ಲಭಿಸುತ್ತದೆ. ಮಹಿಳೆಯರು ಗಂಡಸರಂತೆ ದುಡಿಮೆ ಮಾಡಿ ಕುಟುಂಬ ನಿರ್ವಹಣೆ ಮಾಡಲು ಹೈನುಗಾರಿಕೆ ಸಹಕಾರಿ. ಆದರೆ ಹೈನುಗಾರಿಕೆ ಆತಂಕದ ಸ್ಥಿತಿಯಲ್ಲಿರುವ ಕಾಲಘಟ್ಟದಲ್ಲಿ ಪ್ರೊತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿ‌ ಮಾತನಾಡಿ, ಹೈನುಗಾರಿಕೆ ಅಂತರಾಷ್ಟ್ರೀಯ ಉದ್ಯಮವಾಗುವ ಮೂಲಕ ಹಲವರು ಉದ್ಯೋಗ ಕಂಡುಕೊಂಡಿದ್ದು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಹೈನುಗಾರಿಕೆ ಉತ್ತಮ ಪ್ರೋತ್ಸಾಹ ಹಾಲಿಗೆ ಉತ್ತಮ ಬೆಲೆ ಸಿಕ್ಕಾಗ ಯುವಜನತೆ ಆಕರ್ಷಿತರಾಗುತ್ತಾರೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

ಕುಂದಾಪುರ ತಾಲೂಕು ಪಶು ವೈದ್ಯಾಧಿಕಾರಿ ಬಾಬಣ್ಣ ಪೂಜಾರಿ, ಕೆ.ಎಂ.ಎಫ್ ಒಕ್ಕೂಟದ ಪಶುವೈದ್ಯಾಧಿಕಾರಿ ಅನೀಲ್ ಕುಮಾರ್ ಶೆಟ್ಟಿ, ಕೈಲ್ಕೆರೆ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೇಖಾ ಶೆಟ್ಟಿಯವರಿಂದ ಮಾಹಿತಿ ಕಾರ್ಯಗಾರ ನಡೆಯಿತು.

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಾದಿರಾಜ ಹೆಬ್ಬಾರ್, ನಿರ್ದೇಶಕರಾದ ಮೋಹನದಾಸ್ ಶೆಟ್ಟಿ, ಶರತ್ ಕುಮಾರ್ ಹೆಗ್ಡೆ, ನವೀನ್ ಕುಮಾರ್ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಸುರೇಶ್ ಕೆ.ವಿ., ನರಸಿಂಹ ಪೂಜಾರಿ, ಆಶಲತಾ, ಸುಧಾ, ಚಿಕ್ಕು, ಗೋಪಾಲ ಪೂಜಾರಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿಶ್ವೇಶ್ವರ ಐತಾಳ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ರಾಜಶೇಖರ ಶೆಟ್ಟಿ ನಿರೂಪಿಸಿ, ಮಾಜಿ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ ವಂದಿಸಿದರು.

Comments are closed.