ಕರಾವಳಿ

ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ: ಆರೋಪಿ ವಿರುದ್ಧ ನ್ಯಾಯಾಲಯಕ್ಕೆ 2,202 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Pinterest LinkedIn Tumblr

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್‌ ಚೌಗುಲೆ ವಿರುದ್ಧ ಉಡುಪಿಯ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಶನಿವಾರ ರಜಾದಿನವಾದ ಕಾರಣ ನ್ಯಾಯಾಧೀಶರ ವಸತಿ ಕಚೇರಿಯಲ್ಲಿ ಸಲ್ಲಿಕೆ ಮಾಡಲಾಯಿತು. ಚಾರ್ಜ್‌ಶೀಟ್‌ ಅಂತಿಮ ಪರಿಶೀಲನೆಗೊಳಪಡಿಸಿ ಫೆ.15ಕ್ಕೆ ಅಂತಿಮಗೊಳಿಸಿ ಆರೋಪಿ ಪರ ವಕೀಲರಿಗೆ ನೀಡಲಾಗುತ್ತದೆ. ಬಳಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 244 ಸಾಕ್ಷಿಗಳ ಸಹಿತ 2,202 ಪುಟಗಳು ಹಾಗೂ 15 ಸಂಪುಟಗಳು ದೋಷಾರೋಪಣ ಪಟ್ಟಿಯಲ್ಲಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಲಾಗಿದ್ದು, ಎಲ್ಲ ಸಾಕ್ಷ್ಯಗಳು ಹಾಗೂ ಎಫ್ಎಸ್‌ಎಲ್‌ ವರದಿಗಳು ಬಂದಿವೆ. ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿ ವಿಶೇಷ ಸರಕಾರಿ ಅಭಿಯೋಜಕರ ಸಲಹೆ ಪಡೆದು ತನಿಖಾಧಿಕಾರಿ ಮಂಜುನಾಥ್‌ ಗೌಡ ಅವರು ಶನಿವಾರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ವಿಚಾರಣೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ.ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
2023 ರ ನ.12 ರಂದು ನೇಜಾರಿನ ತೃಪ್ತಿ ನಗರದ ಮನೆಯಲ್ಲಿ ಬೆಳಗ್ಗೆ ನಾಲ್ವರ ಕೊಲೆ ನಡೆದಿತ್ತು. ನ.15 ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Comments are closed.