ಕರ್ನಾಟಕ

ಚಾಲಕನೋರ್ವನನ್ನು ಅಪಹರಿಸಿ ಜೀವಂತ ಹೂಳಲು ಹೊರಟಿದ್ದ ಯುವಕರ ಬಂಧನ

Pinterest LinkedIn Tumblr

ಬೆಂಗಳೂರು: ಸ್ಕೂಟರ್‌ಗೆ ಡಿಕ್ಕಿ ಮಾಡಿದ ಕಾರಣಕ್ಕೆ ಶಾಲಾ ವಾಹನದ ಚಾಲಕನನ್ನು ಅಪಹರಿಸಿ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದ ಆರು ಮಂದಿಯನ್ನು ಪ್ರಕರಣ ದಾಖಲಾದ ಆರು ತಾಸುಗಳಲ್ಲೇ ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು, ಆರೋಪಿಗಳ ವಶದಲ್ಲಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಬನಶಂಕರಿಯ ಮುತ್ತು, ಮುರಳಿ, ಜೀವ, ಅರ್ಜುನ್, ಜಯನಗರ 9ನೇ ಬ್ಲಾಕ್‌ನ ಸಂತೋಷ್ ಹಾಗೂ ಇನ್ನೊಬ್ಬ 16 ವರ್ಷದ ಬಾಲಕನನ್ನು ಬಂಧಿಸಿದ್ದೇವೆ. ಆರೋಪಿಗಳು ಶಾಲಾ ವಾಹನದ ಚಾಲಕ ಪ್ರದೀಪ್ (23) ಅವರನ್ನು ಶುಕ್ರವಾರ ಸಂಜೆ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ವಾಹನದ ಮಾಲೀಕ ಕೆಂಚೇಗೌಡ ದೂರು ಕೊಟ್ಟಿದ್ದರು. ಜಯನಗರ ಉಪವಿಭಾಗದ ಎಸಿಪಿ ಶ್ರೀನಿವಾಸ್ ನೇತೃತ್ವದ ಮೂರು ವಿಶೇಷ ತಂಡಗಳು, ಅದೇ ದಿನ ರಾತ್ರಿ 12 ಗಂಟೆಗೆ ಯಾರಬ್‌ನಗರದ ಸ್ಮಶಾನದಲ್ಲಿ ಅರೋಪಿಗಳನ್ನು ಪತ್ತೆ ಮಾಡಿವೆ.

ಆಗಿದ್ದೇನು: ಪ್ರದೀಪ್ ಅವರು ಶುಕ್ರವಾರ ಸಂಜೆ ಮಕ್ಕಳನ್ನು ಮನೆಗಳಿಗೆ ಬಿಟ್ಟು, ಇಸ್ರೊಲೇಔಟ್‌ ಮಾರ್ಗವಾಗಿ ಕಾರು ಮಾಲೀಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಸಹ ಅದೇ ಹಾದಿಯಲ್ಲಿ ಮೂರು ಸ್ಕೂಟರ್‌ಗಳಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಹಾಗೂ ಜೀವ ಇದ್ದ ಸ್ಕೂಟರ್‌ಗೆ ವಾಹನ ಡಿಕ್ಕಿಯಾಯಿತು. ಆಗ ಗಲಾಟೆ ಪ್ರಾರಂಭಿಸಿದ ಆರೋಪಿಗಳು, ಪ್ರದೀಪ್ ಹಾಗೂ ಕ್ಲೀನರ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಆ ನಂತರ ಪ್ರದೀಪ್ ತಮ್ಮ ವಾಹನದ ಮಾಲೀಕರಿಗೆ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದ್ದರು.

ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪ್ರದೀಪ್ ಅವರನ್ನು ಅದೇ ವಾಹನದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಆಗ ಮಾಲೀಕರು ಕುಮಾರಸ್ವಾಮಿ ಲೇಔಟ್ ಠಾಣೆಯ ಮೆಟ್ಟಿಲೇರಿದ್ದರು.

ಸ್ಮಶಾನದಲ್ಲಿ ಸಿಕ್ಕಿಬಿದ್ದರು: ‘ಪ್ರದೀಪ್ ಅವರ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ, ಅದು ಬನಶಂಕರಿಯಲ್ಲಿ ಸ್ವಿಚ್ಡ್‌ ಆಫ್ ಆಗಿತ್ತು. ಕ್ಲೀನರ್‌ನನ್ನು ವಿಚಾರಿಸಿದಾಗ, ‘ಅಪಹರಣಕಾರರು ತಮಿಳಿನಲ್ಲಿ ಮಾತನಾಡುತ್ತಿದ್ದರು. ಆ ಭಾಷೆ ನನಗೆ ಗೊತ್ತಿಲ್ಲ. ಆದರೆ, ಅವರ ಸಂಭಾಷಣೆಯ ನಡುವೆ ಸಂತು ಹಾಗೂ ಮುತ್ತು ಎಂಬ ಹೆಸರುಗಳು ಕೇಳಿಸಿದವು. ಎಲ್ಲರೂ, ಕೊಳೆಗೇರಿ ನಿವಾಸಿಗಳಂತೆ ಕಾಣಿಸುತ್ತಿದ್ದರು’ ಎಂದು ಹೇಳಿಕೆ ಕೊಟ್ಟ. ಆ ಸುಳಿವುಗಳನ್ನೇ ಆಧರಿಸಿ ಕಾರ್ಯಾಚರಣೆ ಶುರು ಮಾಡಿದೆವು’ ಎಂದು ಕುಮಾರಸ್ವಾಮಿಲೇಔಟ್ ಪೊಲೀಸರು ಹೇಳಿದರು.

‘ಮೊದಲು ಬನಶಂಕರಿ ಕೊಳೆಗೇರಿ ಪ್ರದೇಶಕ್ಕೆ ತೆರಳಿ ವಿಚಾರಿಸಿದಾಗ, ಮುತ್ತು ಅಲ್ಲಿನ ನಿವಾಸಿ ಎಂಬುದು ಗೊತ್ತಾಯಿತು. ಸ್ಥಳೀಯರಿಂದ ಆತನ ಮೊಬೈಲ್ ಸಂಖ್ಯೆ ಪಡೆದು ಪರಿಶೀಲಿಸಿದಾಗ, ಅದು ಬನಶಂಕರಿಯ ಟವರ್‌ನಿಂದಲೇ ಸಂಪರ್ಕ ಪಡೆಯುತ್ತಿತ್ತು. ಕೊನೆಗೆ, ಪರಿಚಿತರಿಂದ ಮುತ್ತುವಿಗೆ ಕರೆ ಮಾಡಿಸಿದಾಗ, ಎಲ್ಲರೂ ಯಾರಬ್‌ನಗರದ ಸ್ಮಶಾನದಲ್ಲಿರುವುರುವು ಗೊತ್ತಾಯಿತು.’

‘ಸ್ಮಶಾನಕ್ಕೆ ತೆರಳಿದಾಗ ಐದು ಮಂದಿ ಸಿಕ್ಕಿಬಿದ್ದರಾದರೂ, ಸಂತೋಷ್ ತಪ್ಪಿಸಿಕೊಂಡು ಓಡಿದ. ಆದರೆ, ಶನಿವಾರ ಬೆಳಿಗ್ಗೆ ನೈಸ್ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ್ದ ಆತನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಹೂಳಲು ಗುಂಡಿ ತೋಡಿದ್ದರು

ಪ್ರದೀಪ್ ಅವರ ಕೈಕಾಲುಗಳನ್ನು ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿದ್ದ ಅರೋಪಿಗಳು, ಅವರನ್ನು ಜೀವಂತವಾಗಿ ಹೂಳಲು ಗುಂಡಿಯನ್ನೂ ತೋಡಿದ್ದರು. ನಾವು ದಾಳಿ ನಡೆಸಿದಾಗ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಮೂಗು ಬಾಯಿಯಿಂದ ರಕ್ತ ಸೋರುತ್ತಿತ್ತು. ತಕ್ಷಣ ಅವರಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿದೆವು ಎಂದು ಪೊಲೀಸರು ಹೇಳಿದರು.

Comments are closed.