ವಾಣಿಜ್ಯ

ನೋಟ್‌ ಬ್ಯಾನ್‌ ಲಾಭ: ಶೇ.6-7 ಬಡ್ಡಿಗೆ 50 ಲಕ್ಷ ರೂ. ಗೃಹ ಸಾಲ

Pinterest LinkedIn Tumblr

home-loan-2

ಹೊಸದಿಲ್ಲಿ : ನೋಟು ನಿಷೇಧದ ಕ್ರಾಂತಿಕಾರಿ ಕ್ರಮದಿಂದ ಸರಕಾರಕ್ಕೆ ಆಗಲಿರುವ ಅಪಾರ ಪ್ರಮಾಣದ ನಗದು ಲಾಭವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಶೇ.6-7ರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 50 ಲಕ್ಷ ರೂ.ವರೆಗೆ ಗೃಹ ಸಾಲವನ್ನು ಒದಗಿಸುವ ವಿಶಿಷ್ಟ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ರೂಪಿಸುತ್ತಿದೆ.

ಆರ್‌ಬಿಐ ಜತೆಗೆ ಸಮಾಲೋಚಿಸಿ, ಚರ್ಚಿಸಿ, ಶ್ರೀಸಾಮಾನ್ಯರ ಈ ವಿಶಿಷ್ಟ ಗೃಹ ನಿರ್ಮಾಣ ಯೋಜನೆಯನ್ನು ಮೋದಿ ಸರಕಾರ ಇದೀಗ ರೂಪಿಸುತ್ತಿದ್ದು ಫೆಬ್ರವರಿ 1ರಂದು ಮಂಡಿಸಲ್ಪಡುವ 2017ರ ಕೇಂದ್ರ ಬಜೆಟ್‌ನಲ್ಲಿ ಇದು ಅನಾವರಣಗೊಳ್ಳಲಿದೆ.

ಈ ವರ್ಷ ಡಿ.30ರ ಬಳಿಕ ನೋಟು ಅಪನಗದೀಕರಣದಿಂದ ಸರಕಾರಕ್ಕೆ ಒದಗುವ ನಗದು ಲಾಭದ ಸರಿಯಾದ ಚಿತ್ರಣ ಸಿಕ್ಕಾಗ ಅತ್ಯಂತ ಕಡಿಮೆ ಬಡ್ಡಿದರದ ಈ ಗೃಹ ಸಾಲ ಯೋಜನೆಯ ಪೂರ್ಣ ವಿವರಗಳು ಅಂತಿಮಗೊಳ್ಳಲಿವೆ.

ಮೂಲಗಳ ಪ್ರಕಾರ 50 ಲಕ್ಷ ರೂ. ವರೆಗಿನ ಗೃಹ ಸಾಲಗಳನ್ನು ಶೇ.6ರಿಂದ ಶೇ.7ರ ಬಡ್ಡಿ ದರದಲ್ಲಿ ಜನರಿಗೆ ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಲಾಭವು ಮೊದಲ ಬಾರಿಗೆ ಗೃಹ ನಿರ್ಮಾಣ ಕೈಗೊಳ್ಳುವವರಿಗೆ ಸಿಗಲಿದೆ.

ಜನ ಸಾಮಾನ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಮೂಲಕ ದೇಶದ ಗೃಹ ನಿರ್ಮಾಣ ಕ್ಷೇತ್ರಕ್ಕೆ ವಿಶೇಷ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.

Comments are closed.