ಟೀಂ ಇಂಡಿಯಾ ಇಂದು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಎರಡನೇ ಪಂದ್ಯವನ್ನಾಡುತ್ತಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದಲ್ಲಿ ಕೊಹ್ಲಿ ಹೆಸರು ಹಾಗೂ ಅವರ ಜೆರ್ಸಿ ನಂಬರ್ನ ಉಡುಪು ಧರಿಸಿ ಬೈಕ್ ರೈಡಿಂಗ್ ಮಾಡುತ್ತಿರುವ ಕ್ರೀಡಾಭಿಮಾನಿಯೊಬ್ಬರ ಫೋಟೋ ಎಲ್ಲಡೆ ಹರಿದಾಡುತ್ತಿದೆ.
ಟೀಂ ಇಂಡಿಯಾ ನಾಯಕನಿಗೆ ವಿಶ್ವದೆಲ್ಲೆಡೆ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗನ ಜೆರ್ಸಿ ತೊಟ್ಟು ಅಥವಾ ಹಚ್ಚೆ ಬರೆಸಿ ಅಭಿಮಾನಿಗಳು ಪ್ರೀತಿ ವ್ಯಕ್ತ ಪಡಿಸುತ್ತಾರೆ. ಅಂತೆಯೆ ಲಾಹೋರ್ನಲ್ಲೊಬ್ಬ ಕೊಹ್ಲಿ ಅಭಿಮಾನಿ, ಪಾಕಿಸ್ತಾನದ ಜೆರ್ಸಿ ಮೇಲೆ ಕೊಹ್ಲಿಯ ಹೆಸರು ಹಾಗೂ ಅವರ ಜೆರ್ಸಿ ನಂಬರ್ ಇರುವ ಉಡುಪು ಧರಿಸಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನಾಡುತ್ತಿದ್ದು ಭರ್ಜರಿ ಪ್ರದರ್ಶನ ತೋರಿದೆ. ಕಾಂಗರೂ ಪಡೆಗೆ ಗೆಲ್ಲಲು 353 ರನ್ಗಳ ಕಠಿಣ ಸವಾಲು ನೀಡಿದೆ. ಕೊಹ್ಲಿ ಪಡೆ ಪಾಕಿಸ್ತಾನ ವಿರುದ್ಧ ವಿಶ್ವಕಪ್ನಲ್ಲಿ ಜೂನ್ 16 ರಂದು ಸೆಣೆಸಾಟ ನಡೆಸಲಿದೆ.