ಮನೋರಂಜನೆ

‘ಬಿಗ್ ಬಾಸ್’ ಮನೆಯಲ್ಲಿ ಔಟ್ ಆದ ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ ಚಂದ್ರಚೂಡ್; ಗರಂ ಆದ ವೀಕ್ಷಕರು

Pinterest LinkedIn Tumblr

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಹಾಗೂ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’. ಫ್ಯಾಮಿಲಿ ಕೂತು ನೋಡುವ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ತರ್ಲೆ, ತಮಾಷೆ, ಕಿತ್ತಾಟ ಎಲ್ಲಾ ಮಾಮೂಲು. ವ್ಯಕ್ತಿತ್ವಗಳ ಅನಾವರಣ ಮಾಡುವ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಅಸಭ್ಯ ಭಾಷೆ, ಅಶ್ಲೀಲ ವರ್ತನೆ ಹೆಚ್ಚಾಗಿ ಕಂಡುಬಂದಿಲ್ಲ.

ಮಾತಿನ ಚಕಮಕಿ ನಡೆಯುವಾಗ ವೈಯುಕ್ತಿಕ ವಿಚಾರ ಹೊರಗೆ ಬಾರದಂತೆ, ಆಕ್ಷೇಪಾರ್ಹ ಪದಗಳನ್ನು ಬಳಸದಂತೆ ಸ್ಪರ್ಧಿಗಳಿಗೆ ಅನೇಕ ಬಾರಿ ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಿದ್ದರೂ, ‘ಬಿಗ್ ಬಾಸ್’ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ವರ್ತನೆ ಎಲ್ಲೆ ಮೀರಿದೆ.

ವಾರದ ಹಿಂದೆಯಷ್ಟೇ ಪ್ರಶಾಂತ್ ಸಂಬರಗಿ ಜೊತೆಗೆ ಕಿತ್ತಾಡಿಕೊಂಡಿದ್ದ ಚಕ್ರವರ್ತಿ ಚಂದ್ರಚೂಡ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಚಕ್ರವರ್ತಿ ಚಂದ್ರಚೂಡ್ ಮಾಡಿದ ಪದ ಬಳಕೆಯಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಆಕ್ಷೇಪಾರ್ಹ ಪದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

”ಪ್ರಶಾಂತ್ ಮೇಲೆ ರೇಗಾಡುವಾಗ ಬಂದ ಭಾಷೆ ಏನು ಚಕ್ರವರ್ತಿ ಅವರೇ? ಮನೆಯಲ್ಲಿ ನಾವೂ ಕೂತು ಈ ಶೋ ನೋಡಬೇಕು. ಎಷ್ಟು ಸಲ ಬೀಪ್.. ಬೀಪ್? ಇದು ವಿದ್ಯೆನಾ ಹಾಗಾದರೆ?” ಎಂದು ಚಕ್ರವರ್ತಿ ಚಂದ್ರಚೂಡ್ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದರು. ಇಷ್ಟಾದರೂ ಚಕ್ರವರ್ತಿ ಚಂದ್ರಚೂಡ್ ಬದಲಾದಂತೆ ಕಾಣುತ್ತಿಲ್ಲ. ‘ಬಿಗ್ ಬಾಸ್’ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಅಶ್ಲೀಲ ಸನ್ನೆ ತೋರಿಸಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆದರು. ವೀಕ್ಷಕರಿಂದ ಕಡಿಮೆ ಮತವನ್ನು ಪಡೆದುಕೊಂಡ ಪ್ರಿಯಾಂಕಾ ತಿಮ್ಮೇಶ್ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಕಾಲಿಟ್ಟರು. ಹೊರಗೆ ಕಾಲಿಡುವ ಮುನ್ನ ಪ್ರಿಯಾಂಕಾ ತಿಮ್ಮೇಶ್‌ಗೆ ‘ಬಿಗ್ ಬಾಸ್’ ವಿಶೇಷ ಅಧಿಕಾರವನ್ನು ನೀಡಿದರು. ಮುಂದಿನ ವಾರದ ನಾಮಿನೇಷನ್‌ಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಪ್ರಿಯಾಂಕಾ ತಿಮ್ಮೇಶ್‌ಗೆ ‘ಬಿಗ್ ಬಾಸ್’ ನೀಡಿದರು. ಆಗ ಚಕ್ರವರ್ತಿ ಚಂದ್ರಚೂಡ್ ಹೆಸರನ್ನ ಪ್ರಿಯಾಂಕಾ ತಿಮ್ಮೇಶ್ ತೆಗೆದುಕೊಂಡರು. ಪರಿಣಾಮ, ಚಕ್ರವರ್ತಿ ಚಂದ್ರಚೂಡ್ ಇದೀಗ ನೇರವಾಗಿ ನಾಮಿನೇಟ್ ಆಗಿದ್ದಾರೆ.

”ಪ್ರಿಯಾಂಕಾ ತಿಮ್ಮೇಶ್ ಆಯ್ಕೆಯ ಅನುಸಾರ ಚಕ್ರವರ್ತಿ ಚಂದ್ರಚೂಡ್ ನೇರವಾಗಿ ನಾಮಿನೇಟ್ ಆಗಿದ್ದಾರೆ” ಎಂದು ‘ಬಿಗ್ ಬಾಸ್’ ಘೋಷಿಸಿದ ಕೂಡಲೆ ಚಕ್ರವರ್ತಿ ಚಂದ್ರಚೂಡ್ ಅಶ್ಲೀಲ ಸನ್ನೆ ಮಾಡಿದರು. ಸಾಲದಕ್ಕೆ ಬಾತ್‌ರೂಮ್‌ ಏರಿಯಾಗೂ ತೆರಳಿ ಚಕ್ರವರ್ತಿ ಚಂದ್ರಚೂಡ್ ಅಶ್ಲೀಲ ಸನ್ನೆ ಮಾಡಿದರು.

ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆದಾಗ ದಿವ್ಯಾ ಸುರೇಶ್ ಕಣ್ಣೀರು ಹಾಕಿದರು. ಶುಭಾ ಪೂಂಜಾ, ಮಂಜು ಪಾವಗಡ ಬೇಸರ ಮಾಡಿಕೊಂಡರು. ಎಲ್ಲಾ ಸ್ಪರ್ಧಿಗಳು ಪ್ರಿಯಾಂಕಾ ತಿಮ್ಮೇಶ್ ಜೊತೆ ಕ್ಯಾಮರಾ ಮುಂದೆ ಪೋಸ್ ಕೊಟ್ಟರು. ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿ ಹೊರ ಹೋಗುತ್ತಿದ್ದರೂ, ಚಕ್ರವರ್ತಿ ಚಂದ್ರಚೂಡ್ ಮಾತ್ರ ಒಂದು ಮಾತನ್ನೂ ಆಡಲಿಲ್ಲ. ಸೋಫ ಮೇಲೆ ಕೂತಲ್ಲೇ ಕುಳಿತಿದ್ದರು. ಪ್ರಿಯಾಂಕಾ ತಿಮ್ಮೇಶ್ ಕೂಡ ಅವರೊಂದಿಗೆ ಮಾತನಾಡಲಿಲ್ಲ.

‘ಬಿಗ್ ಬಾಸ್’ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಮಧ್ಯೆ ಎಲ್ಲವೂ ಸರಿ ಇರಲಿಲ್ಲ. ಆಗಾಗ ಇಬ್ಬರ ಮಧ್ಯೆ ಜಟಾಪಟಿ ನಡೆಯುತ್ತಲೇ ಇತ್ತು. ಶಮಂತ್ ಹಾಗೂ ದಿವ್ಯಾ ಸುರೇಶ್ ಜೊತೆ ಆತ್ಮೀಯವಾಗಿರುವುದಕ್ಕೆ ಚಕ್ರವರ್ತಿ ಕೋಪಿಸಿಕೊಂಡಿದ್ದರು ಎಂಬುದು ಪ್ರಿಯಾಂಕಾ ವಾದವಾಗಿತ್ತು. ಫೇಕ್, ಅನ್‌ರಿಯಲ್ ಅಂತ ಚಕ್ರವರ್ತಿ ಹೇಳಿದ್ದು ಪ್ರಿಯಾಂಕಾಗೆ ಬೇಸರ ತರಿಸಿತ್ತು. ಚಕ್ರವರ್ತಿ ಚಂದ್ರಚೂಡ್ ವ್ಯಂಗ್ಯ ತಮಾಷೆ, ಲೇವಡಿ ಮಾಡುವುದು, ಕಾಮೆಂಟ್ ಪಾಸ್ ಮಾಡುವುದು ಪ್ರಿಯಾಂಕಾಗೆ ಇಷ್ಟವಾಗುತ್ತಿರಲಿಲ್ಲ.

ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ‘ಬಿಗ್ ಬಾಸ್’ ವೀಕ್ಷಕರು ಕೆಂಡಾಮಂಡಲವಾಗಿದ್ದಾರೆ. ”ಹೆಣ್ಣು ಮಕ್ಕಳಿಗೆ ಗೌರವ, ಮರ್ಯಾದೆ ಕೊಡದ ಚಕ್ರವರ್ತಿ ಚಂದ್ರಚೂಡ್‌ರನ್ನ ಎಲಿಮಿನೇಟ್ ಮಾಡಬೇಕು” ಎಂದು ವೀಕ್ಷಕರು ಆಗ್ರಹಿಸುತ್ತಿದ್ದಾರೆ.

Comments are closed.