ಮನೋರಂಜನೆ

ಆದ್ಯ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಜೊತೆ ಶೃತಿ ಹರಿಹರನ್ ನಟನೆ

Pinterest LinkedIn Tumblr


ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದು, ಈ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಆದರೆ ಇದರ ಬೆನ್ನಲ್ಲೇ ಶ್ರುತಿ ಹರಿಹರನ್ ಸರ್ಜಾ ಕುಟುಂಬದ ಕುಡಿಯಾದ ಚಿರಂಜೀವಿ ಸರ್ಜಾ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಹೌದು.ಕೆ.ಎಂ.ಚೈತನ್ಯ ನಿರ್ದೇಶನದ ‘ಆದ್ಯ’ ಸಿನಿಮಾ ಕಾರಣಾಂತರದಿಂದ ನಿಂತು ಹೋಗಿತ್ತು. ತೆಲುಗಿನ ‘ಕ್ಷಣಂ’ ಸಿನಿಮಾವನ್ನೇ ಕನ್ನಡದಲ್ಲಿ ‘ಆದ್ಯ’ ಎಂದು ರೀಮೇಕ್ ಮಾಡಲಾಗುತ್ತಿದೆ. ಕಳೆದ ವರ್ಷವೇ ಈ ಸಿನಿಮಾಗೆ ನಟ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿಗೆ ಸೂಚಿಸಿದ್ದರು. ಅದರಂತೆಯೇ ಕೆಲವು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಅರ್ಧಕ್ಕೆ ಸಿನಿಮಾ ನಿಂತು ಹೋಗಿತ್ತು. ಈಗ ಮತ್ತೆ ಈ ಸಿನಿಮಾವನ್ನು ಮಾಡಲು ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ನಿರ್ಧಾರ ಮಾಡಿದ್ದಾರೆ.

‘ಆದ್ಯ’ ಸಿನಿಮಾದಲ್ಲಿ ಈಗಾಗಲೇ ಶೃತಿ ಹರಿಹರನ್ ಪಾತ್ರದ ಚಿತ್ರೀಕರಣ ಮುಗಿದಿದೆ. ಆದರೆ ಡಬ್ಬಿಂಗ್ ಬಾಕಿ ಇದ್ದು, ಅದಕ್ಕಾಗಿ ಸಿನಿಮಾ ಶೂಟಿಂಗ್‍ನಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಚಿರಂಜೀವಿ ಸರ್ಜಾ ಅವರ ಕೆಲವು ದಿನಗಳ ಶೂಟಿಂಗ್ ಇನ್ನೂ ಬಾಕಿ ಉಳಿದಿದೆ. ಮಾರ್ಚ್ ತಿಂಗಳಿನಲ್ಲಿ ಚಿರಂಜೀವಿ ಸರ್ಜಾ ಐದು ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಅವರು ಹೇಳಿದ್ದಾರೆ.

ಇಬ್ಬರ ಶೂಟಿಂಗ್ ಮುಗಿದ ಬಳಿಕ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದ್ದು, ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಪ್ರಕಟವಾಗಿಲ್ಲ.

Comments are closed.