ಮನೋರಂಜನೆ

ನಟನೆಗೂ ಸೈ ಹಾಡೋಕೂ ಜೈ; ಶರಣ್‌ ಗಾನ ಬಜಾನ

Pinterest LinkedIn Tumblr

Sharan-Newನಟ ಶರಣ್‌ ಈಗ ಗಾಯಕರಾಗಿ ಫೇಮಸ್‌! ಅರೇ, ಹೀಗೆಂದಾಕ್ಷಣ ಅಚ್ಚರಿ ಆಗೋದು ಸಹಜ. ಅವರು ನಟಿಸ್ತಾರೆ, ಹಾಡ್ತಾರೆ. ಇದು ಹಂಡ್ರೆಡ್‌ ಪರ್ಸೆಂಟ್‌ ನಿಜಾ ಕಣ್ರೀ. ಅವರೀಗ ನಟನೆಗೂ ಸೈ ಹಾಡೋಕೂ ಜೈ. ಶರಣ್‌ ಯೋಗರಾಜ ಭಟ್‌ ನಿರ್ದೇಶನದ “ದನ ಕಾಯೋನು’ ಚಿತ್ರದಲ್ಲಿ “ಹಾಲು ಕುಡಿದ ಮಕ್ಕಳೇ…’ ಎಂಬ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಈಗ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡು ಮಾಡಿದೆ. ಅದರಲ್ಲೂ ಶರಣ್‌ ವಾಯ್ಸನಲ್ಲಿ ಮೂಡಿ ಬಂದಿರುವ ಹಾಡು ಅದಾಗಿರುವುದರಿಂದ ಡಿಮ್ಯಾಂಡ್‌ ಜಾಸ್ತೀನೇ ಇದೆ. ಒಂದರ್ಥದಲ್ಲಿ ಶರಣ್‌ ಈಗ ಫ‌ುಲ್‌ ಟೈಮ್‌ ಗಾಯಕರು ಅಂದರೆ ತಪ್ಪಿಲ್ಲ. ಯಾಕೆಂದರೆ, ಬಹುತೇಕ ಹೊಸಬರು ನಮ್ಮ ಸಿನಿಮಾಗೊಂದು ಹಾಡು ಹಾಡಿಕೊಡಿ ಅಂತ ಶರಣ್‌ ಅವರ ಹಿಂದೆ ಬಿದ್ದಿದ್ದಾರಂತೆ.

ಹಾಗಾಗಿ, ಅವರು ಮೈಕ್‌ ಮುಂದೆ ನಿಂತು ಹಾಡಬೇಕೋ, ಕ್ಯಾಮೆರಾ ನಿಂತು ನಟಿಸಬೇಕೋ ಎಂಬ ಗೊಂದಲ್ಲಿದ್ದಾರಂತೆ. ಹಾಗೆ ಹೇಳುವುದಾದರೆ, ಶರಣ್‌ ಹೆಚ್ಚು ಹಾಡಿಲ್ಲ. ಅವರು ಹಾಡಿದ ಮೊದಲು ಹಾಡು “ರಾಜ ರಾಜೇಂದ್ರ’ ಚಿತ್ರದ “ಮಧ್ಯಾಹ್ನ ಕನಸಿನಲ್ಲಿ…’ ಅದಕ್ಕೆ ಕಾರಣ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರಂತೆ. ಚಿತ್ರದ ಎಲ್ಲಾ ಹಾಡುಗಳನ್ನು ಸಂಯೋಜಿಸಿ, ಒಂದು ಹಾಡಿಗೆ ನಿಮ್ಮ ದನಿಯೇ ಬೇಕು ಅಂದರಂತೆ. ಕೊನೆಗೆ ಶರಣ್‌, ನಾನು ಹಾಡೋದಿಲ್ಲ ಅಂತ ಹೇಳಿದರೂ, ಅರ್ಜುನ್‌ ಫೋನಾಯಿಸುತ್ತಲೇ ಇದ್ದರಂತೆ. ಫೋನ್‌ ಪಿಕ್‌ ಮಾಡದಿದ್ದಾಗಲೂ ಮೆಸೇಜ್‌ ಹಾಕೋಕೆ ಶುರುಮಾಡಿದರಂತೆ.

ಕೊನೆಗೆ ಅದಕ್ಕೂ ರಿಪ್ಲೆ ಮಾಡದಿದ್ದಾಗ, ನಿರ್ಮಾಪಕರ ಕಡೆಯಿಂದ ಹೇಳಿಸಿದರಂತೆ. ಆಡಿಯೋ ರಿಲೀಸ್‌ ಆಗಬೇಕಾದರೆ, ಶರಣ್‌ ಒಂದು ಹಾಡು ಹಾಡಬೇಕು. ಆಗ ಆಲ್ಬಂ ಕಂಪ್ಲೀಟ್‌ ಆಗುತ್ತೆ ಅಂದರಂತೆ ಅರ್ಜುನ್‌. ಕೊನೆಗೆ ಶರಣ್‌ ಅವರ ಸ್ಟುಡಿಯೋಗೆ ಹೋಗಿ ಹಾಡಿದರಂತೆ. ಆ ಹಾಡು ಹೊರಬರುತ್ತಿದ್ದಂತೆಯೇ ಎಲ್ಲರಿಂದಲೂ ಮೆಚ್ಚುಗೆ ಬಂತು. ಪುನಃ “ವಜ್ರಕಾಯ’ ಚಿತ್ರದಲ್ಲಿ ಹಾಡೊಂದನ್ನು ಹಾಡಿದರು ಅದೂ ಹಿಟ್‌ ಆಯ್ತು.

ಆಮೇಲೆ “ಬುಲೆಟ್‌ ಬಸ್ಯಾ’ ಚಿತ್ರದಲ್ಲಿ “ಕಾಲ್‌ಕೇಜಿ ಕಡ್ಲೆಕಾಯಿ…’ ಹೀಗೆ ಹಾಡುತ್ತಾ ಹೋದರು. ಭಟ್ಟರ ಕಿವಿಗೂ ಶರಣ್‌ ವಾಯ್ಸ ಬಿದ್ದಿದ್ದೇ ತಡ, ಅವರೂ “ದನ ಕಾಯೋನು’ ಚಿತ್ರಕ್ಕೆ ಹಾಡಬೇಕು ಅಂತ ಶರಣ್‌ಗೆ ಹೇಳಿದರಂತೆ. ಶರಣ್‌ ಫೋನ್‌ ಮೆಸೇಜ್‌ನಲ್ಲಿ “ನಾನಾ …’ ಅಂತ ಕಳಿಸಿದರಂತೆ. ಅತ್ತ ಭಟ್ಟರು “ನೀವೇ…’ ಅಂತ ಮರು ಸಂದೇಶ ಕಳುಹಿಸಿದರಂತೆ. ಮನೆಯಲ್ಲಿ ಗುನುಗಿದಂತೆ, ಸ್ಟುಡಿಯೋಗೆ ಬಂದು ಗುನುಗಿ ಹೋಗಿ ಅಂದರಂತೆ. ಅವರ ಮಾತಿಗೆ ಒಪ್ಪಿದ ಶರಣ್‌, “ಹಾಲು ಕುಡಿದ ಮಕ್ಕಳೇ …’ ಹಾಡು ಹಾಡಿ ಬಂದರಂತೆ. ಈಗ ನೋಡಿದರೆ ಹಾಡು ಸೂಪರ್‌ ಹಿಟ್‌ ಆಗಿದೆ. ಎಲ್ಲಾ ಕ್ರೆಡಿಟ್‌ ಆ ಸಿನಿಮಾ ತಂಡಕ್ಕೇ ಹೋಗಬೇಕು ಅನ್ನುತ್ತಾರೆ ಶರಣ್‌.

ಅಂದಹಾಗೆ, ಶರಣ್‌ ಹೇಳುವಂತೆ, “ನಾನು ಗಾಯಕನಲ್ಲ. ಒಬ್ಬ ನಟನಷ್ಟೇ. ನನಗೆ ಯಾವುದೇ ಶಾಸ್ತ್ರೀಯ ಸಂಗೀತ ಗೊತ್ತಿಲ್ಲ. ರಂಗಭೂಮಿಯಲ್ಲಿದ್ದಾಗಲೂ ನಾನು ಸಿನಿಮಾ ಹಾಡುಗಳನ್ನೇ ಹಾಡುತ್ತ ನಾಟಕ ಮಾಡುತ್ತಿದ್ದೆ. ನಮ್ಮ ದೇವರಾಣೆ, ನಾನು ಗಾಯಕನಂತೂ ಅಲ್ಲ. ನಿಜಕ್ಕೂ ಹಾಡೋದು ಕಷ್ಟವಾದ ಕೆಲಸ. ಹಾಡುವುದರಲ್ಲಿ ನನಗೆ ನಂಬಿಕೆಯೇ ಇಲ್ಲ. ಹೇಳಿಕೊಳ್ಳುವಂತಹ ವಾಯ್ಸು ನಂಗಿಲ್ಲ. ಆದರೂ ನೀವೇ ಹಾಡಿ ಅಂತಾರೆ. ನನಗೆ ಮುಜುಗರ ಆಗುತ್ತೆ. ಏನ್ಮಾಡ್ಲಿ? ಅನ್ನುತ್ತಲೇ ಒಂದೊಂದೇ ಚಿತ್ರದಲ್ಲಿ ಹಾಡೋಕೆ ಶುರುಮಾಡಿದ್ದಾರೆ ಶರಣ್‌.
-ಉದಯವಾಣಿ

Write A Comment