ರಾಷ್ಟ್ರೀಯ

ನಟಿಯ ಪತಿಯೊಂದಿಗೆ ವಿವಾಹ : ಐಎಎಸ್‌ ಅಧಿಕಾರಿ ರೇಖಾ ರಾಣಿಗೆ ಸಂಕಟ

Pinterest LinkedIn Tumblr

Rekha Raniಹೈದರಾಬಾದ್‌: ಆಂಧ್ರ ಪ್ರದೇಶದ ಕ್ರೀಡಾ ಪ್ರಾಧಿಕಾರದ ಆಡಳಿತ ನಿರ್ದೇಶಕಿಯಾಗಿರುವ ಐಎಎಸ್‌ ಅಧಿಕಾರಿ ಜಿ. ರೇಖಾ ರಾಣಿ ಅವರನ್ನು “ಕಾನೂನು ಬಾಹಿರವಾಗಿ’ ವಿವಾಹವಾಗಿರುವುಕ್ಕೆ ಪೊಲೀಸರು ಮಾಜಿ ಪತ್ರಕರ್ತ ಪಿ. ವಿಜಯ್‌ ಗೋಪಾಲ್‌ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

“ವಿಜಯ್‌ ಗೋಪಾಲ್‌ ಅವರು ಹದಿನೈದು ವರ್ಷಗಳ ಹಿಂದೆ ನನ್ನನ್ನು ಬಿರ್ಲಾ ದೇವಸ್ಥಾನದ ಶ್ರೀ ವೆಂಕಟೇಶ್ವರ ಗರ್ಭಗುಡಿಯಲ್ಲಿ ವಿವಾಹವಾಗಿದ್ದಾರೆ. ಅವರೊಂದಿಗಿನ ವಿವಾಹದಲ್ಲಿ ನನಗೆ ಒಂದು ಮಗು ಕೂಡ ಇದೆ. ಇದೀಗ ವಿಜಯ್‌ ಗೋಪಾಲ್‌ ಅವರು ರೇಖಾ ರಾಣಿ ಅವರನ್ನು ವಿವಾಹವಾಗುವ ಮೂಲಕ ನನ್ನನ್ನೂ ಆಕೆಯನ್ನೂ ವಂಚಿಸಿದ್ದಾರೆ. ನನ್ನ ಮತ್ತು ವಿಜಯ್‌ ನಡುವಿನ ವಿವಾಹ ಮುರಿದು ಹೋಗಿಲ್ಲ; ಅದಿನ್ನೂ ಊರ್ಜಿತದಲ್ಲಿದೆ, ಆದುದರಿಂದ ವಿಜಯ್‌ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ; ಎಂದು ನಟಿ ಪೂಜಿತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಆಕೆ ಪೊಲೀಸರಿಗೆ 1994ರಲ್ಲಿ ವಿಜಯ್‌ ಜತೆಗೆ ನಡೆದಿದ್ದ ತನ್ನ ಮದುವೆಯನ್ನು ದೃಢಪಡಿಸುವ ಅರ್ಚಕರ ಪತ್ರ, ತನ್ನ ರೇಶನ್‌ ಕಾರ್ಡ್‌, ಮತದಾರರ ಗುರುತು ಪತ್ರ ಮತ್ತು ತಾನು ಮಗು ಹೆತ್ತ ಬಗೆಗಿನ ದಾಖಲೆ ಪತ್ರಗಳನ್ನು ನೀಡಿದ್ದಾಳೆ.

ಡೆಕ್ಕನ್‌ ಕ್ರೋನಿಕಲ್‌ ಪ್ರಕಟಿಸಿರುವ ವರದಿಯ ಪ್ರಕಾರ ಮಾಜಿ ಪತ್ರಕರ್ತ ವಿಜಯ್‌ ಗೋಪಾಲ್‌ ಅವರು ಪ್ರಕೃತ ಅರಕು ಸಂಸದೆ ಕೋತಪಳ್ಳಿ ಗೀತಾ ಅವರ ಆಪ್ತ ಸಹಾಯಕರಾಗಿದ್ದಾರೆ.

ಐಎಎಸ್‌ ಅಧಿಕಾರಿಯಾಗಿರುವ ರೇಖಾ ರಾಣಿ ಅವರು ಈ ಹಿಂದೆ 2014ರಲ್ಲಿ ಜಂಟಿ ಕಲೆಕ್ಟರ್‌ ಆಗಿದ್ದಾಗ ನೆಲ್ಲೂರಿನ ಒಂದು ಗ್ರಾಮವನ್ನು ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರು ದತ್ತು ತೆಗೆದುಕೊಳ್ಳುವಂತೆ ಅವರ ಮನವೊಲಿಸುವಲ್ಲಿ ಸಫ‌ಲರಾಗಿ ಸುದ್ದಿಯಲ್ಲಿದ್ದರು.

ರೇಖಾ ರಾಣಿ ಹೇಳಿರುವ ಪ್ರಕಾರ, ನಟಿ ಪೂಜಿತಾಳನ್ನು ವಿಜಯ್‌ ವಿವಾಹವಾದದ್ದೇ ಇಲ್ಲ; ಆಕೆಯೊಂದಿಗೆ ಆತ ಲಿವ್‌ ಇನ್‌ ರಿಲೇಶನ್‌ಶಿಪ್‌ ಹೊಂದಿದ್ದರು. ವಿಜಯ್‌ ಗೋಪಾಲ್‌ ಕೂಡ ಇದೇ ಮಾತನ್ನು ಹೇಳಿದ್ದಾರೆ.
-ಉದಯವಾಣಿ

Write A Comment