ಮನೋರಂಜನೆ

ಯಲ್ಲಾಪುರದ ಪೇಟೆ – ಕಾಡಿನಲ್ಲಿ ವೀರಪ್ಪನ್!

Pinterest LinkedIn Tumblr

crec26KILLING2_0ನಿರ್ದೇಶಕ ರಾಮ್‌ಗೋಪಾಲ್ ವರ್ಮ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ರೂಪುಗೊಳ್ಳುತ್ತದೆ ಎನ್ನುವ ವಿಷಯ ಹೊರಬಿದ್ದ ತಕ್ಷಣ ಶಿವಣ್ಣ ಅಭಿಮಾನಿಗಳಷ್ಟೇ ಅಲ್ಲದೆ ಇತರ ಭಾಷೆಗಳ ಸಿನಿಪ್ರಿಯರು ಕಣ್ಣರಳಿಸಿದ್ದರು.

ಅದಕ್ಕೆ ಕಾರಣ ವರ್ಮ ನಿರ್ದೇಶನ ಎನ್ನುವುದು ಒಂದು ಅಂಶವಾದರೆ, ಈ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುತ್ತಿರುವುದು ಮತ್ತೊಂದು ಕಾರಣ. ಸದ್ಯ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕಾಡು ಮತ್ತು ಪೇಟೆಯಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರೀಕರಣ ಸಾಗುತ್ತಿದೆ. ಇದಕ್ಕೂ ಮುನ್ನ ಮಾಧ್ಯಮಗಳ ಎದುರು ‘ಕಿಲ್ಲಿಂಗ್ ವೀರಪ್ಪನ್‌’ ವಿವರಗಳನ್ನು ಒಪ್ಪಿಸಿದರು ರಾಮ್‌ಗೋಪಾಲ್ ವರ್ಮ.

ಆರ್‌ಜಿವಿ ಹಾಜರಿಯ ಹಿನ್ನೆಲೆಯಲ್ಲಿ ಸಭಾಂಗಣದ ತುಂಬಾ ಗಿಜಿಗುಡುವ ಜನ. ಒಬ್ಬರ ಹಿಂದೆ ಒಬ್ಬರಂತೆ ಬಂದ ರಾಜಕಾರಣಿಗಳು, ಸಿನಿಮಾ ನಟ–ನಟಿಯರು. ಎಲ್ಲರ ಬಾಯಲ್ಲೂ ಆರ್‌ಜಿವಿಯದ್ದೇ ಮಾತು! ಅವರೇ ಕಾರ್ಯಕ್ರಮದ ಕೇಂದ್ರಬಿಂದು. ವೇದಿಕೆಯಲ್ಲಿ ಮೈಕು ಹಿಡಿದ ಎಲ್ಲರಿಂದಲೂ ಆರ್‌ಜಿವಿಯ ನಿರ್ದೇಶನ ವೈಖರಿಯ ಪ್ರಶಂಸೆ, ಗುಣಗಾನ.

ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ವರ್ಮ ಅವರ ಅವರಿಗೆ ಗೌರವ ಸಮರ್ಪಣೆಯೂ ನಡೆಯಿತು. ಶಿವರಾಜ್‌ ಕುಮಾರ್, ಪುನೀತ್ ರಾಜ್‌ಕುಮಾರ್, ಉಪೇಂದ್ರ ಮತ್ತಿತರರು ನೆಚ್ಚಿನ ನಿರ್ದೇಶಕನಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಆರ್‌ಜಿವಿ ಅವರಷ್ಟೇ ಎಲ್ಲರ ಗುಣಗಾನಕ್ಕೆ ಒಳಗಾದುದು ಶಿವರಾಜ್‌ಕುಮಾರ್. ‘ವ್ರಜಕಾಯ ಶೂಟಿಂಗ್‌ನಲ್ಲಿದ್ದಾಗಲೇ ಎರಡು ಬೇರೆ ಬೇರೆ ಟ್ರಾಕ್‌ಗಳ ಕಥೆಯನ್ನು ವರ್ಮ ಅವರಿಂದ ನಾನು ಕೇಳಿದ್ದೆ. ಒಂದು ಟ್ರಾಕ್ ಇಬ್ಬರಿಗೂ ಇಷ್ಟವಾಯಿತು.

ಈ ಸಿನಿಮಾದ ಬಗ್ಗೆ ವರ್ಮ ಅವರ ಜತೆ ನಿತ್ಯ ಚರ್ಚಿಸಿದ್ದೇನೆ. ಈ ಪೋನ್ ಮಾತುಕತೆಯಲ್ಲಿ ಒಂದು ರೀತಿ ನನಗೆ ಗರ್ಲ್ ಫ್ರೆಂಡ್ ಆಗಿದ್ದರು’ ಎಂದು ಮುಗುಳ್ನಕ್ಕರು ಶಿವಣ್ಣ. ವರ್ಮ ಅವರ ‘ರಕ್ತಚರಿತ’ ಅವರ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಒಂದಂತೆ. ಪರೂಲ್ ಯಾದವ್ ಹಾಗೂ ಯಜ್ಞಾ ಶೆಟ್ಟಿ ಚಿತ್ರದ ನಾಯಕಿಯರು. ‘ಮೊದಲ ಬಾರಿ ಡಿಗ್ಲಾಮರಸ್ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ’ ಎಂದು ಪರೂಲ್ ಹೇಳಿದರೆ, ಯಜ್ಞಾ ಶೆಟ್ಟಿ ನೈಜ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಬಗ್ಗೆ ಹೇಳಿಕೊಂಡರು.

ಪರೂಲ್ ಯಾದವ್, ಯಜ್ಞಾಶೆಟ್ಟಿ, ಸಂಚಾರಿ ವಿಜಯ್, ಬ್ಯಾಂಕ್ ಜನಾರ್ದನ್, ವಿಜಯ್ ರಮೇಶ್, ನಟರಾಜ್, ರಾಕ್‌ಲೈನ್ ವೆಂಕಟೇಶ್ ಮತ್ತಿತರರು ಶಿವರಾಜ್ ಕುಮಾರ್ ಅವರ ಜತೆ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸಾಹಸ ನಿರ್ದೇಶಕ ಅಲ್ಲಾನ್ ಅಮೀನ್ ಅವರ ಸಾಹಸ ಚಿತ್ರಕ್ಕಿದೆ.

ಶಿವರಾಜ್ ಕುಮಾರ್ ಅವರ ಜನ್ಮದಿನವಾದ ಜುಲೈ 12ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ಅಕ್ಟೋಬರ್‌ನಲ್ಲಿ ಚಿತ್ರವನ್ನು ತೆರೆಕಾಣಿಸಲು ಚಿತ್ರತಂಡ ಉದ್ದೇಶಿಸಿದೆ. ಜಿ.ಆರ್. ಪಿಚ್ಚರ್ಸ್‌ ಸಂಸ್ಥೆ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ‘ನಾನು ರಾಮ್‌ ಗೋಪಾಲ್ ವರ್ಮ ಅವರ ಅಭಿಮಾನಿ ಸಹ. ಶಬ್ದದಲ್ಲಿಯೇ ಒಂದು ಸಿನಿಮಾ ಕ್ರಿಯೇಟ್ ಮಾಡಬಹುದು ಎಂದರೆ ಅದು ವರ್ಮ ಅವರಿಂದ ಮಾತ್ರ ಸಾಧ್ಯ’ ಎಂದರು ರವಿಚಂದ್ರನ್. ಹಿನ್ನೆಲೆ ಸಂಗೀತದ ಅಡಿಯಲ್ಲಿ ಸಿದ್ಧವಾಗಿರುವ ಟ್ರೇಲರ್‌ ಅನ್ನು ಇದೇ ವೇಳೆ ಕೇಳಿಸಲಾಯಿತು.

Write A Comment