ಮನೋರಂಜನೆ

ಗಣಪ ಚಿತ್ರವಿಮರ್ಶೆ: ಮಚ್ಚು ಮೆಚ್ಚೋರಿಗೆ ಅಚ್ಚುಮೆಚ್ಚು

Pinterest LinkedIn Tumblr

ganapa

ರೌಡಿ ಕುಟುಂಬಗಳು; ಅವರ ನಡುವಿನ ದ್ವೇಷ; ಮಚ್ಚುಗಳ-ಲಾಂಗುಗಳ ಬೀಸಾಟ; ಮಕ್ಕಳ ಪೆದ್ದಾಟ; ಮುಗ್ಧ-ಅನಾಥ-ಸಂತ್ರಸ್ತ-ಶಕ್ತಿಯುತ ನಾಯಕ ನಟ; ಆಕಸ್ಮಿಕವಾಗಿ ರೌಡಿಸಂಗೆ ಆಗಮನ; ಸುಂದರ ಹುಡುಗಿ-ನಾಯಕ ನಟಿ; ಪ್ರೀತಿ; ಘರ್ಷಣೆ; ಸಂದಿಗ್ಧತೆ; ಭೀಕರ ಹೊಡೆದಾಟಗಳು; ಅಂತ್ಯ

ಯಾವುದೇ ರೌಡಿಸಂ ಆಧಾರಿತ ಸಿನೆಮಾಗಳು ಹೀಗೆಯೇ ಎಂದು ಶರಾ ಬರೆದುಬಿಡಬಹುದಾದರೂ, ಇಂತಹ ಸಿನೆಮಾಗಳನ್ನು ಮತ್ತೆ ಮತ್ತೆ ಅರಳಿಸುವುದರಲ್ಲಿ ಕನ್ನಡದ ಹಲವಾರು ಚಿತ್ರನಿರ್ದೇಶಕರಿಗೆ ಎಲ್ಲಿಲ್ಲದ ಉತ್ಸಾಹ. ರೌಡಿಸಂ ಕೇಂದ್ರಿತ ಸಿನೆಮಾ ಕಥೆಗಳು ಕನ್ನಡ ಚಿತ್ರರಂಗದಲ್ಲಿ ಎಂದೂ ಬತ್ತದ ಚಿಲುಮೆಯಾಗಿಬಿಟ್ಟಿವೆ. ಇದಕ್ಕೊಂದು ಹೊಸ ಸೇರ್ಪಡೆ ‘ಗಣಪ’. ಪ್ರಭು ಶ್ರೀನಿವಾಸ್ ನಿರ್ದೇಶನದ ‘ಗಣಪ’ ರೌಡಿಸಂ ಸಿನೆಮಾದಲ್ಲಿ ಹೊಸದಾಗಿ ಏನನ್ನಾದರೂ ಹೇಳಿದ್ದಾರೆಯೇ? ರೌಡಿಸಂ ಸಿನೆಮಾಗಳನ್ನು ಇಷ್ಟ ಪಡುವ ಮತ್ತು ಇಷ್ಟ ಪಡದ ಸಿನೆಮಾಸಕ್ತರನ್ನು ಸಮನಾಗಿ ರಂಜಿಸಲು ಸಿನೆಮಾಗೆ ಸಾಧ್ಯವಾಗಿದೆಯೇ?

ಅನಾಥ ಮುಗ್ಧ ಹುಡುಗರು ರೌಡಿಯಿಸಂಗೆ ಆಕರ್ಷಿತರಾಗುವುದು ಅಥವಾ ಆಕಸ್ಮಿಕವಾಗಿ ಅದರಲಿ ಸಿಕ್ಕಿ ಬೀಳುವ ಕಥೆಗಳುಳ್ಳ ಸಿನೆಮಾಗಳು ಯಥೇಚ್ಛವಾಗಿವೆ. ದುನಿಯಾ, ಜೋಗಿಯಂತಹ ಸಿನೆಮಾಗಳು ಬಂದು ಪ್ರಖ್ಯಾತವಾಗಿ ಹೋಗಿವೆ. ಇಂತಹುದೇ ಒಂದು ಸನ್ನಿವೇಶದಲ್ಲಿ ಈ ಚಿತ್ರದ ನಾಯಕ ನಟನ ಆಗಮನ ಆಗುವುದು. ಜಯಣ್ಣ ಬೆಂಗಳೂರಿನ ತರಕಾರಿ-ಹೂವು-ಹಣ್ಣು ಮಾರುಕಟ್ಟೆಗೆ ಅಧಿಪತಿ-ಡಾನ್-ನಾಯಗನ್-ಭೂಗತ ದೊರೆ. ಅವನದ್ದೇ ಭದ್ರ ಕೋಟೆಯಲ್ಲಿ ಅನ್ಯ ಗುಂಪಿನ ಹುಡುಗರು ಬೇಟೆಯಾಡುವಾಗ, ‘ನಾಯಕ ನಟ’ ತಿನ್ನುತ್ತಿದ್ದ ಅನ್ನವನ್ನು ಚೆಲ್ಲಿದ್ದರ ಪರಿಣಾಮ ದಾಳಿ ಮಾಡಿದವರೆಲ್ಲಾ ನುಚ್ಚುನೂರಾಗುತ್ತಾರೆ. ಆಶ್ಚರ್ಯಚಕಿತನಾಗುವ ಜಯಣ್ಣ ತನ್ನನ್ನು ರಕ್ಷಿಸಿದ ಯುವಕನನ್ನು ಕರೆಸಿ, ಹೆಸರು ಕೇಳಿದಾಗ, ತಾನು ಚಿಕ್ಕವಯಸ್ಸಿನಲ್ಲಿ ಟೈರ್ ಓಡಿಸುತ್ತಿದ್ದರಿಂದ, ‘ಟೈರ್’ ಎಂದೇ ಎಲ್ಲ ಕರೆಯುವುದು ಎನ್ನುವ ಯುವಕನಿಗೆ  ‘ಗಣಪ’ ಎಂದು ನಾಮಕರಣ ಮಾಡಲಾಗುತ್ತದೆ. ಹೀಗೆ ಯಾವುದೇ ಅನುಭವವಿಲ್ಲದೆ ರೌಡಿಸಂಗೆ ಸೇರಿಕೊಳ್ಳುವ ಗಣಪ, ಜಯಣ್ಣನ ಮೇಲೆ ದಾಳಿ ಮಾಡಿದ ಹಿಂದಿನ ಗೆಳೆಯ ಆದರೆ ಸದ್ಯದ ಶತ್ರು ಮುತ್ತಣ್ಣನನ್ನು ಕೊಲ್ಲಲು ಮುಂದಾಗಿ, ರೌಡಿಸಂನಲ್ಲಿ ಯಾವುದೇ ಅನುಭವ ಇಲ್ಲದೆ ಹೋದರು ‘೪೦ ವರ್ಷಕ್ಕಿಂತ ಹೆಚ್ಚು ಬದುಕಿದ್ದರೆ ಅವನು ರೌಡಿಯೇ ಅಲ್ಲ’ ಎಂದು ಡೈಲಾಗ್ ಹೊಡೆದು ಮುತ್ತಣ್ಣನನ್ನು ಮುಗಿಸುತ್ತಾನೆ. (ಇಲ್ಲಿ ನಾಯಕನ ನಟನ ಎಸ್ಟಾಬ್ಲಿಶ್ಮೆಂಟ್ ಕೊರತೆಯಿಂದಾಗಿ ‘ಗಣಪ’ನಿಗೆ ಪುಡಿ ರೌಡಿಸಂ ಅನುಭವವಿತ್ತೇ ಅಥವಾ ಮುಗ್ಧನೇ ಎಂಬ ದ್ವಂಧ್ವ ಪ್ರೇಕ್ಷನನ್ನು ಕಾಡದೆ ಬಿಡದು.) ಜಯಣ್ಣನ ಮಗ ‘ಅರುಣ್’ ಪೊಲೀಸ್ ಒಬ್ಬನನ್ನು ಕೊಂದ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸಿ ಹಿಂದಿರುಗುತ್ತಾನೆ. ಹುಂಬ-ಹಲವು ಚಟಗಳುಳ್ಳ ಅರುಣ್ ಜಯಣ್ಣನ ಮುದ್ದಿನ ಮಗ. ಈ ಮಧ್ಯೆ ಬೃಂದಾಳ ಮೊಬೈಲ್ ಫೋನ್ ‘ಗಣಪ’ನಿಗೆ ಆಕಸ್ಮಿಕವಾಗಿ ಸಿಕ್ಕಿರುತ್ತದೆ ಮತ್ತು ಅದನ್ನು ಅವಳಿಗೆ ಹಿಂದಿರುಗಿಸಲು ಕಣ್ಣ-ಮುಚ್ಚಾಲೆ ಆಟ ನಡೆಯುತ್ತಿರುತ್ತದೆ. ದೂರವಾಣಿಯಲ್ಲೇ ಒಂದು ಅವ್ಯಕ್ತ ಪ್ರೇಮ ಈರ್ವರಲ್ಲೂ ಅಂಕುರವಾಗಿರುತ್ತದೆ. ಪ್ರೀತಿಸಿ ಒಪ್ಪದ ಹುಡುಗಿಯನ್ನು ರಸ್ತೆಯಲ್ಲಿ ಬಲವಂತಿಸುವಾಗ ತಡೆಯಲು ಬಂದ ಪೊಲೀಸನನ್ನು ಕೊಂದು ಅರುಣ್ ಜೈಲುಪಾಲಾಗಿದ್ದು ಎಂದು ತಿಳಿದ ‘ಗಣಪ’ ಆ ಹುಡುಗಿಯನ್ನು ಅಪಹರಿಸಿ ತಂದು ಮದುವೆ ಮಾಡುವುದಾಗಿ ಮಾತು ಕೊಟ್ಟು ಅವಳನ್ನು ಎತ್ತಿಕೊಂಡು ಬರುತ್ತಾನೆ. ಆ ಹುಡುಗಿ ಯಾರು? ಮುಂದೇನಾಗುತ್ತದೆ ಎಂಬುದೇ ಕಥೆ.

ಮತ್ತೊಮ್ಮೆ ಅಂಡರ್ ವರ್ಲ್ಡ್-ರೌಡಿಸಂ ಚಿತ್ರವನ್ನು ಉಣಬಡಿಸಿರುವ ಪ್ರಭು ಶ್ರೀನಿವಾಸ್ ಕೆಲವು ಕಡೆ ಸೂಕ್ಷ್ಮತೆಗಳನ್ನು ಮೆರೆದಿದ್ದರೆ ಕೆಲವು ಕಡೆ ಅದನ್ನು ಮರೆತಂತೆಯೂ ಇದೆ. ರೌಡಿಸಂಅನ್ನು ಸಾರ್ವಜನಿಕರ ಮಧ್ಯೆ ವೈಭವೀಕರಿಸದೆ ಹೋದರು, ಫೈಟ್ಗಳು-ಆಕ್ಷನ್-ಹಿರೋಯಿಸಂ ಇವುಗಳಿಗೆ ನಿಷ್ಠವಾಗಿ ಸಿನೆಮಾ ನಿರ್ದೇಶಿಸಿದ್ದಾರೆ. ಆಸ್ಪತ್ರೆಯ ನರ್ಸ್ ಜೊತೆ ಸೌಮ್ಯವಾಗಿ ವರ್ತಿಸುವ ಜಯಣ್ಣನನ್ನು ಕಂಡರೆ ಪೊಲೀಸರು ಗಡಗಡ ನಡುಗುತ್ತಾರೆ. ಹೀಗೆ ಕೆಲವು ವಿರೋಧಾಭಾಸಗಳು ಸಿನೆಮಾದಲ್ಲಿ ಉಳಿದುಕೊಂಡಿವೆ. ಜಯಣ್ಣನ ಪಾತ್ರಧಾರಿ ‘ಡಾನ್’ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ತನ್ನ ವಿರೋಧಿ ಮುತ್ತಣ್ಣನನ್ನು ಕೊಂದಿದ್ದು ಸರಿಯೇ ಅಲ್ಲವೇ ಎಂಬ ಜಿಜ್ಞಾಸೆಯ ದೃಶ್ಯಗಳು ಪಾತ್ರಕ್ಕೆ ಸೂಕ್ಷ್ಮತೆ ತಂದಿವೆ. ಮೊದಲಾರ್ಧ ಕಥೆ ಬೆಳೆಯುತ್ತಾ ಹೋದಂತೆ ಮಧ್ಯಂತರದಲ್ಲಿ ಸಿಗುವ ಟ್ವಿಸ್ಟ್ ಕತೆಯನ್ನು ಪೂರ್ಣಗೊಳಿಸಿದಂತೆ ಭಾಸವಾದರೂ, ಇತರ ಹಲವು ಘಟನೆಗಳು-ಟ್ವಿಸ್ಟ್ ಗಳು ಪ್ರೇಕ್ಷಕನಿಗೆ ಬೇಸರವಾಗದಂತೆ ಕಾಯುತ್ತವೆ. ತಮ್ಮ ರೌಡಿ ಗಂಡಂದಿರಿಗೆ ಬೈಯ್ಯುವ-ಎಚ್ಚರಿಕೆ ನೀಡುವ ಹೆಂಡತಿಯ ಪಾತ್ರಗಳು ಕ್ಲೀಶೆಯಂತಿದ್ದರೂ, ನಿರ್ವಹಣೆಯಲ್ಲಿ ಗತಿ ಕಾಯ್ದುಕೊಂಡಿರುವುದರಿಂದ ಇವುಗಳು ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಿವೆ. ಭೂಗತಲೋಕದವರು ಬೆದರುವುದು ಪ್ರೀತಿಗೆ ಎಂಬುದನ್ನು ಮತ್ತೆ ಸಾರಲು ನಿರ್ದೇಶಕರು ಈ ಉಪಕಥೆಗಳನ್ನು ಹೆಣೆದಿದ್ದಾರೆ. ಜಯಣ್ಣನ ಸಹಚರ ‘ಅಂಕಲ್’ ತಾನು ಚೆನ್ನೈಗೆ ತೆರಳಿದ್ದಾಗ ಅಲ್ಲಿನ ತಮಿಳು ಅಯ್ಯಂಗಾರಿ ಹುಡುಗಿಯನ್ನು ಮದುವೆಯಾಗಿ ಕರೆತಂದಿದ್ದು, ಅವಳು ಇವನಿಗೆ ಮಾಂಸಾಹಾರಿ ಅಡುಗೆಯನ್ನು ಪ್ರೀತಿಯಿಂದ ಬೇಯಿಸಿ ಹಾಕುವುದು ಇಂತಹ ಸೂಕ್ಷ್ಮ ಮಾನವೀಯ ವಿಚಾರಗಳನ್ನು ಸೇರಿಸಿರುವುದಕ್ಕೆ ನಿರ್ದೇಶಕ ಮೆಚ್ಚುಗೆಗೆ ಪಾತ್ರ! ಪಾತ್ರದ ಪರಿಕಲ್ಪನೆಯಲ್ಲಿ-ಎಸ್ಟಾಬ್ಲಿಶ್ಮೆಂಟ್ ನಲ್ಲಿ ಕೆಲವು ನ್ಯೂನತೆಗಳು ಕಂಡರೂ ನಾಯಕ ನಟ ಸಂತೋಶ್ (ಗಣಪ) ಅವರ ನಟನೆ ಗಮನ ಸೆಳೆಯುತ್ತದೆ. ಆಕ್ಷನ್ ದೃಶ್ಯಾವಳಿಗಳಲ್ಲೂ ಅಲ್ಲದೆ ಪೋಲಿಸರಿಂದ ಚೆನ್ನಾಗಿ ಒದೆ ತಿಂದರೂ- ಏನೋ ಸುಮಾರಾಗಿ ಹೊಡೆದರಣ್ಣ ಎನ್ನುವ ಗಣಪ ಪೊಲೀಸರಲ್ಲಿಗೆ ಬಂದು ಅಣ್ಣ ಬಿರಿಯಾನಿಯಲ್ಲಿ ಪೀಸೇ ಇರಲಿಲ್ಲ ಎನ್ನುವ ಮುಗ್ಧ ನಟನೆಯಲ್ಲಿ ಕೂಡ ಸಂತೋಶ್ ಹೊಳೆಯುತ್ತಾರೆ. ಬೃಂದಾ ಪಾತ್ರಧಾರಿ (ಪ್ರಿಯಾಂಕ) ಕೂಡ ಚೊಕ್ಕವಾದ ನಟನೆ ನೀಡಿದ್ದಾರೆ. ಉಳಿದ ಪಾತ್ರವರ್ಗದ ನಟನೆ ಕೂಡ ಪಕ್ವವಾಗಿದೆ. ಹಾಡುಗಳ ಸಂಗೀತ ಹಿಂದೆಲ್ಲೋ ಕೇಳಿದಂತೆ ಭಾಸವಾದರೂ ಎರಡು ಹಾಡುಗಳು ಮುದ ನೀಡುವಲ್ಲಿ ಯಶಸ್ವಿಯಾಗಿವೆ. ಹಿನ್ನಲೆ ಸಂಗೀತ ಕೆಲವೊಮ್ಮೆ ವಿಪರೀತ ಕಿರಿಕಿರಿಯುಂಟುಮಾಡುತ್ತದೆ. ನಿಜ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವುದು ಚಲನಚಿತ್ರಕ್ಕೆ ಮೆರುಗು ನೀಡಿದೆ. ಶ್ರೀನಿವಾಸ್ ದೇವಸಂ ಅವರ ಛಾಯಾಗ್ರಹಣ ಮತ್ತು ಜೋನಿ ಹರ್ಷ ಅವರ ಸಂಕಲನ ರೌಡಿಸಂ-ಆಕ್ಷನ್ ಕಮರ್ಷಿಯಲ್ ಸಿನೆಮಾದ ಸೂತ್ರಕ್ಕೆ ಹೊಂದಿಕೊಂಡಂತಿದೆ.

ಒಂದು ಪ್ರತ್ಯೇಕ ಸಿನೆಮಾವಾಗಿ ಈ ಸಿನೆಮಾ ಪ್ರೇಕ್ಷಕನಿಗೆ ಬೇಸರ ಮೂಡಿಸುವುದಿಲ್ಲವಾದರೂ, ಈಗಾಗಲೇ ಇಂತಹ ಸಿನೆಮಾಗಳು ಬಂದು ನೇಪಥ್ಯಕ್ಕೆ ಸರಿದಿರುವಾಗ ಇಂತಹ ಹೆಚ್ಚಿನ ಸಿನೆಮಾಗಳ ಅಗತ್ಯವೇನು? ಮಚ್ಚು-ಲಾಂಗು ಬೀಸಾಟ, ಅತಿಯಾದ ಆಕ್ಷನ್-ಹಿರೋಯಿಸಂ ಇಲ್ಲದೆ ಇದೇ ಕಥೆಯನ್ನು ಹೇಳಲಾಗುವುದಿಲ್ಲವೇ? ಭೂಗತ ಲೋಕದಲ್ಲಿ ಪೊಲೀಸರ ಪಾತ್ರವನ್ನೇ ಕಡೆಗಣಿಸಿದರೆ ಸಿನೆಮಾದ ಖಚಿತತೆಗೆ ಕುಂದಲ್ಲವೇ? ಇಂತಹ ಪ್ರಶ್ನೆಗಳು ಮೂಡಿಬರುವುದಾದರೂ ನೀವು ರೌಡಿಸಂ ಸಿನೆಮಾಗಳನ್ನು ಇಷ್ಟಪಡುವುದೇ ಆದರೆ, ವ್ಯಸನದಂತೆ ಅದು ನಿಮ್ಮನ್ನು ಕಾಡುತ್ತಿದ್ದಲ್ಲಿ ಗಣಪನ ಕಡೆ ತಲೆ ಹಾಕಿ!

ಗುರುಪ್ರಸಾದ್

Write A Comment