ಮುಂಬೈ

5 ವರ್ಷ ಕಾದರೂ ಬೇಡಿಕೆ ಈಡೇರಿಲ್ಲ; ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಅಣ್ಣಾ ಹಜಾರೆ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ರಾಳೇಗಾನ್​ ಸಿದ್ಧಿಯಲ್ಲಿರುವ ಸಂತ ಯಾದವ ಬಾಬಾ ದೇವಸ್ಥಾನದಲ್ಲಿ ಆ ವೃದ್ಧ ಆಶೀರ್ವಾದ ಪಡೆದು ಧರಣಿಗೆ ಕೂತಿದ್ದಾರೆ. ಹಾಗೆ ಸತ್ಯಾಗ್ರಹಕ್ಕೆ ಕುಳಿತವರು ಬೇರೆ ಯಾರೂ ಅಲ್ಲ; ನಾಲ್ಕೈದು ವರ್ಷಗಳ ಹಿಂದೆ ದೇಶದೆಲ್ಲೆಡೆ ಭಾರೀ ಸುದ್ದಿಯಾಗಿ ಆಧುನಿಕ ಗಾಂಧಿ ಎಂದೇ ಕರೆಸಿಕೊಂಡಿದ್ದ 81 ವರ್ಷದ ಅಣ್ಣಾ ಹಜಾರೆ.

ಭ್ರಷ್ಟ್ಟಾಚಾರಗಳ ನಿಯಂತ್ರಣಕ್ಕಾಗಿ ಲೋಕಪಾಲ್​ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕಗಾಗಿ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇಂದಿನಿಂದ ಮಹಾರಾಷ್ಟ್ರದ ರಾಳೆಗಾನ್ ಸಿದ್ಧಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 32 ಪತ್ರಗಳನ್ನು ಬರೆಯಲಾಗಿದೆ. ಇಂದು ಜಾರಿಯಾಗಬಹುದು, ನಾಳೆ ಜಾರಿಯಾಗಬಹುದು ಎಂದು 5 ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದೇವೆ. ಮತ್ತೊಂದು ಲೋಕಸಭಾ ಚುನಾವಣೆ ಹತ್ತಿರ ಬಂದರೂ ಬೇಡಿಕೆಗಳು ಮಾತ್ರ ಈಡೇರಿಲ್ಲ. ಹೀಗಾಗಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ಅಣ್ಣಾ ಹಜಾರೆ ಹೇಳಿದ್ದಾರೆ.

5 ವರ್ಷಗಳಿಂದ ಲೋಕಪಾಲರ ನೇಮಕ ಮತ್ತು ಕಾಯ್ದೆ ಜಾರಿ ಬಗ್ಗೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳನ್ನು ಒತ್ತಾಯಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ಹೀಗಾಗಿ, ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ತಿಳಿಸಿರುವ ಅವರು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು, ಯುವಜನತೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.

ಮಹಾರಾಷ್ಟ್ರದ ಅಹಮದ್‍ನಗರ್ ಜಿಲ್ಲೆಯ ತಮ್ಮ ಸ್ವಗ್ರಾಮ ರಾಳೆಗಾನ್ ಸಿದ್ಧಿಯಲ್ಲಿರುವ ಪದ್ಮಾವತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಣ್ಣಾ ಹಜಾರೆ ಯಾದವ ಬಾಬಾ ಮಂದಿರದ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಲೋಕಪಾಲ್ ಮೂಲಕ ಪ್ರಧಾನಿ ವಿರುದ್ಧ ದೂರು ಬಂದರೂ ಅದನ್ನು ತನಿಖೆ ನಡೆಸುವ ಅಧಿಕಾರವಿರುತ್ತದೆ. ಲೋಕಾಯುಕ್ತದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕರ ವಿರುದ್ಧ ಸಾಕ್ಷಿಗಳು ಸಿಕ್ಕರೆ ತನಿಖೆ ನಡೆಸುವ ಅಧಿಕಾರ ಇರುತ್ತದೆ. ಆದ್ದರಿಂದಲೇ ಈ ಎರಡೂ ಸಂಸ್ಥೆಗಳನ್ನು ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ. ಹೀಗಾಗಿಯೇ 2013 ರಲ್ಲೇ ಸಂಸತ್​ನಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಿದ್ದರೂ ಲೋಕಪಾಲ್ ನೇಮಕ ಮಾಡಿಲ್ಲ ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ.

ಆರು ವರ್ಷಗಳ ಹಿಂದೆ ಲೋಕಪಾಲ್​ ಮಸೂದೆ ಜಾರಿಗೆ ಆಗ್ರಹಿಸಿ ನಡೆದ ಐತಿಹಾಸಿಕ ಪ್ರತಿಭಟನೆಯ ಮುಂದಾಳತ್ವವನ್ನು ಇದೇ ಅಣ್ಣಾ ಹಜಾರೆ ವಹಿಸಿದ್ದರು. ಕರ್ನಾಟಕದ ನ್ಯಾ. ಸಂತೋಷ್​ ಹೆಗ್ಡೆ, ನಿವೃತ್ತ ಐಪಿಎಸ್​ ಅಧಿಕಾರಿ ಕಿರಣ್​ ಬೇಡಿ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸೇರಿದಂತೆ ಹಲವರು ಆ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದರು. 2014ರ ಆಗಸ್ಟ್​ ತಿಂಗಳಿನಿಂದ ಪ್ರಧಾನಿಗೆ ಪತ್ರ ಬರೆಯುತ್ತಿರುವ ಅಣ್ಣಾ ಹಜಾರೆ ಇದುವರೆಗೂ 32 ಪತ್ರಗಳನ್ನು ಬರೆದಿದ್ದಾರೆ. ಒಂದಕ್ಕೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹಾಗೇ, ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೂ ಪತ್ರ ಬರೆದಿದ್ದರೂ ಯಾವುದೇ ಉಪಯೋಗವಾಗಿಲ್ಲ. ಈ ಹಿನ್ನೆಲೆಯಲ್ಲಿ 81ರ ಇಳಿವಯಸ್ಸಿನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿರುವ ಅಣ್ಣಾ ಹಜಾರೆಯ ಜೊತೆಗೆ ವೈದ್ಯರ ತಂಡವೂ ಬೀಡುಬಿಟ್ಟಿದೆ.

Comments are closed.