ರಾಷ್ಟ್ರೀಯ

ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬ ಪ್ರಧಾನಿ: ಅಮಿತ್ ಶಾ

Pinterest LinkedIn Tumblr


ನವದೆಹಲಿ: ಬಿಜೆಪಿ ನೇತೃತ್ವದ ಸರ್ಕಾರವನ್ನು ಮಣಿಸಲು ವಿರೋಧ ಪಕ್ಷಗಳು ಮಾಡಿಕೊಂಡಿರುವ ಮಾಹಾ ಮೈತ್ರಿಕೂಟವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾ ಮೈತ್ರಿಕೂಟ ಅಧಿಕಾರಕ್ಕೇರಿದರೆ ವಾರದಲ್ಲಿ ಪ್ರತಿ ದಿನ ಒಬ್ಬೊಬ್ಬ ಪ್ರಧಾನಿ ಇರಲಿದ್ದಾರೆ ಎಂದು ಅಮಿತ್​ ಶಾ ಲೇವಡಿ ಮಾಡಿದರು.

ಕಾನ್ಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾ ಮೈತ್ರಿಕೂಟ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು. ಇಲ್ಲದಿದ್ದರೆ ಸೋಮವಾರ ಮಾಯಾವತಿ, ಮಂಗಳವಾರ ಅಖೀಲೇಶ್‌, ಬುಧವಾರ ಮಮತಾ ಬ್ಯಾನರ್ಜಿ, ಗುರುವಾರ ಶರದ್‌ ಪವಾರ್‌, ಶುಕ್ರವಾರ ದೇವೇಗೌಡ, ಶನಿವಾರ ಎಂ ಕೆ ಸ್ಟಾಲಿನ್‌ ಪ್ರಧಾನಿ ಆಗಿರುತ್ತಾರೆ. ಹಾಗೆಯೇ ಭಾನುವಾರ ದಿನ ಪ್ರಧಾನಿ ಪದವಿಗೆ ರಜಾ ಇರಲಿದೆ ಎಂದು ಲೇವಡಿ ಮಾಡಿದರು.

ಇದೇ ವೇಳೆ ವಿರೋಧ ಪಕ್ಷಗಳು ದೇಶದಲ್ಲಿ ಬದಲಾವಣೆ ತರಲು ಬಯಸಿದ್ದಾರೆ. ಆದರೆ ಅವರಲ್ಲಿ ಇನ್ನೂ ಕೂಡ ಪ್ರಧಾನಿ ಅಭ್ಯರ್ಥಿ ನಿರ್ಧಾರವಾಗಿಲ್ಲ. ನಮ್ಮ ಪಕ್ಷದ ಸಿದ್ಧಾಂತದಲ್ಲಿ ನಾಲ್ಕು ‘B’ಗಳಿದ್ದರೆ, ವಿರೋಧ ಪಕ್ಷದಲ್ಲೂ ನಾಲ್ಕು B ಗಳಿವೆ. ಆದರೆ ವ್ಯತ್ಯಾಸವೆಂದರೆ ನಮ್ಮದು ಬಡ್ತಾ ಭಾರತ್‌, ಬನ್‌ತಾ ಭಾರತ್‌ ನೀತಿಯಾಗಿದೆ. ಇದೇ ವಿರೋಧ ಪಕ್ಷಗಳಲ್ಲಿ ಬುವಾ( ಆಂಟಿ), ಭತೀಜಾ (ಸೋದರಳಿಯ), ಭಾಯಿ (ಸಹೋದರ), ಬೆಹನ್(ಸಹೋದರಿ)​ ಎಂದು ಅಮಿತ್ ಶಾ ಅಪಹಾಸ್ಯ ಮಾಡಿದರು.

ಮಹಾ ಮೈತ್ರಿ ಮೂಲಕ ವಿರೋಧ ಪಕ್ಷಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬಯಸುತ್ತಿದ್ದಾರೆ. ಅಂತಹದೊಂದು ಭಾರತವನ್ನು ನಿರ್ಮಿಸಲು ಮೋದಿ ಅವರಿಗೆ ಮಾತ್ರ ಸಾಧ್ಯ. ಮಹಾ ಮೈತ್ರಿಕೂಟಕ್ಕೆ ಅಧಿಕಾರ ನೀಡಿದರೆ ಅಸಹಾಯಕ ಸರ್ಕಾರ ರಚನೆಯಾಗುತ್ತದೆ. ಆದರೆ ಮೋದಿ ಪ್ರಧಾನಿಯಾದರೆ ಸದೃಢ ಭಾರತ ನಿರ್ಮಾಣವಾಗಲಿದೆ ಎಂದು ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದರು.

ಇದೇ ವೇಳೆ ರಾಮ ಜನ್ಮಭೂಮಿ ವಿವಾದವನ್ನು ಉಲ್ಲೇಖಿಸಿದ ಅಮಿತ್ ಶಾ, ಕಾಂಗ್ರೆಸ್​ ನಾಯಕರಿಂದ ಅಯೋಧ್ಯಾ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನಾವು ಈಗಲೂ ರಾಮಮಂದಿರ ನಿರ್ಮಾಣಕ್ಕೆ ಬದ್ಧವಾಗಿದ್ದು, ಈ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ಅಯೋಧ್ಯೆಯ ಹೆಚ್ಚುವರಿ ಜಾಗವನ್ನು ಬಿಟ್ಟು ಕೊಡುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 73 ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಿದ್ದೀರಿ. ಈ ಬಾರಿ ಪ್ರತಿ ಮತಗಟ್ಟೆಯಲ್ಲೂ ಶೇ. 50 ರಷ್ಟು ಮತಗಳ ಖಚಿತಪಡಿಸಿಕೊಳ್ಳಲು ಹಗಲಿರುಳು ಶ್ರಮಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಉತ್ತರ ಪ್ರದೇಶದಿಂದ 74 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂದು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅಮಿತ್​ ಶಾ ಇದೇ ವೇಳೆ ಕರೆ ನೀಡಿದರು.

Comments are closed.