ರಾಷ್ಟ್ರೀಯ

ಆರೆಸ್ಸೆಸ್ ನ್ನು ಕಾಯದೆ ಫೆ. 21 ರಾಮಮಂದಿರಕ್ಕೆ ಅಡಿಗಲ್ಲು?

Pinterest LinkedIn Tumblr


ನವದೆಹಲಿ: ಹಿಂದುತ್ವದ ವಿಚಾರದಲ್ಲಿ ಇದೂವರೆಗೂ ಪಾರಮ್ಯ ಅನುಭವಿಸುತ್ತಿದ್ದ ಆರೆಸ್ಸೆಸ್​ಗೆ ಈಗ ಕೆಲ ಹಿಂದೂ ಸಂಘಟನೆಗಳು ಸೆಡ್ಡು ಹೊಡೆದು ನಿಂತಿವೆ. ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮೀನ ಮೇಷ ಎಣಿಸುತ್ತಿದೆ ಎಂದು ಹಿಂದೂ ಸಾಧು ಸಂತರು ಆಕ್ರೋಶಗೊಂಡಿದ್ದಾರೆ. ಮಂದಿರ ನಿರ್ಮಾಣ ವಿಚಾರದಲ್ಲಿ ಆರೆಸ್ಸೆಸ್ ಕೂಡ ಆಸಕ್ತಿ ತೋರುತ್ತಿಲ್ಲವೆಂದು ಇವರು ಅಸಮಾಧಾನಗೊಂಡಿದ್ದಾರೆ. ಇದು ಇವತ್ತು ನಡೆದ ಹಿಂದೂ ಸಾಧು ಸಂತರ ಸಮಾವೇಶವಾದ ಪರಮ ಧರ್ಮ ಸಂಸದ್​ನಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು. ಆರೆಸ್ಸೆಸ್, ಬಿಜೆಪಿಗೆ ಕಾಯದೆ ತಾವೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಈ ಧರ್ಮ ಸಂಸದ್ ನಿರ್ಧರಿಸಿದೆ. ಸ್ವಾಮಿ ಸ್ವರೂಪಾನಂದ ಅವರಿಗೆ ಈ ಹೊಸ ಹೋರಾಟದ ನೇತೃತ್ವ ವಹಿಸಲಾಗಿದೆ. ಸ್ವಾಮಿ ಸ್ವರೂಪಾನಂದ ಅವರು ಫೆಬ್ರವರಿ 21ರಂದು ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.

ಕಳೆದ 3 ದಶಕಗಳಿಂದಲೂ ರಾಮಜನ್ಮಭೂಮಿ ನ್ಯಾಸದ ಜೊತೆ ಕೈಜೋಡಿಸಿ ಆರೆಸ್ಸೆಸ್ ಮತ್ತು ವಿಹಿಂಪ ಸಂಘಟನೆಗಳು ಅಯೋಧ್ಯೆ ರಾಮಜನ್ಮಭೂಮಿ ಹೋರಾಟದ ನೇತೃತ್ವ ವಹಿಸಿಕೊಂಡು ಬಂದಿವೆ. ಹಿಂದೂ ಧರ್ಮದ ಯಾವುದೇ ವಿಚಾರವಾದರೂ ಅದರಲ್ಲಿ ಆರೆಸ್ಸೆಸ್ ಮತ್ತು ವಿಹಿಂಪದ ಪ್ರಭಾವ ಇದ್ದೇ ಇರುತ್ತದೆ. ಆರೆಸ್ಸೆಸ್ ಹೇಳಿದ್ದೇ ಅಂತಿಮ ಎನ್ನುವಂತಹ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಪರಮ್ ಧರ್ಮ ಸಂಸದ್​ನಲ್ಲಿ ಆರೆಸ್ಸೆಸ್​ನ ಅವಗಹಣೆ ಆಗಿರುವುದು ಗಮನಾರ್ಹ ಬೆಳವಣಿಗೆ. ದೇಶಾದ್ಯಂತ ಹಿಂದೂಗಳಿಗೆ ಸ್ವರೂಪಾನಂದ ಅವರೇ ಆಧ್ಯಾತ್ಮಿಕ ನೇತಾರ ಎಂದು ಈ ಸಮಾವೇಶದಲ್ಲಿ ಘಂಟಾಘೋಷವಾಗಿ ತಿಳಿಸಲಾಗಿದೆ.

ಅಯೋಧ್ಯೆಯ ವಿವಾದಿತ ಜಾಗದ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್​ನಲ್ಲಿದೆ. ಆದರೆ, ಅಲಹಾಬಾದ್ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಮಂದಿರ ನಿರ್ಮಾಣ ಕಾರ್ಯ ನಡೆಸಬಹುದು ಎಂಬುದು ಕೆಲ ಹಿಂದೂ ಸಂಘಟನೆಗಳ ಅಭಿಪ್ರಾಯ ಹಾಗೂ ಒತ್ತಾಯವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್​​ನಿಂದ ಅಂತಿಮ ತೀರ್ಪು ಬರುವವರೆಗೂ ಮಂದಿರ ನಿರ್ಮಾಣ ವಿಚಾರದಲ್ಲಿ ಸರಕಾರದಿಂದ ಯಾವುದೇ ನಡೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸದೆ ವಿಳಂಬ ಮಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಚುನಾವಣೆಯ ನಂತರ ಈ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂದಿದೆ. ಇದು ಕೆಲ ಹಿಂದೂ ಸಂಘಟನೆಗಳಿಗೆ ಅಪಥ್ಯವಾಗಿದೆ. ರಾಮ ಮಂದಿರ ನಿರ್ಮಾಣ ವಿಳಂಬವಾದಷ್ಟೂ ಹಿಂದೂಗಳ ಹೋರಾಟ ದುರ್ಬಲಗೊಳ್ಳುತ್ತಾ ಹೋಗುತ್ತದೆ ಎಂಬುದು ಇವರ ವಾದ.

Comments are closed.