ಕರ್ನಾಟಕ

ತಮಿಳುನಾಡು ಪಂಚಾಂಗ ನೋಡಿದ್ದೇನೆ, 5 ವರ್ಷ ಸರ್ಕಾರ ಭದ್ರ; ರೇವಣ್ಣ

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ಸುಮ್ಮನೆ ಸುಳ್ಳು ಸುದ್ದಿ ಹರಡುತ್ತಿದೆ. ನಾನು ತಮಿಳುನಾಡು ಪಂಚಾಂಗ ನೋಡಿದ್ದೇನೆ. ನಮ್ಮ ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಸಚಿವ ಎಚ್​.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ಯಡಿಯೂರಪ್ಪ ಕೂಡ ತಮಿಳುನಾಡು ಪಂಚಾಂಗ ನೋಡಿ ಸುಮ್ಮನಾಗಿದ್ದಾರೆ. ಇನ್ನೂ 5 ವರ್ಷ ನಾವೇ ಅಧಿಕಾರದಲ್ಲಿರುವುದು ಎಂದು ಅವರಿಗೂ ಗೊತ್ತಾಗಿದೆ. ಫೆ. 8ಕ್ಕೆ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಬಸವರಾಜ ರಾಯರೆಡ್ಡಿಯ ಬಂಡವಾಳ ನನಗೆ ಗೊತ್ತಿಲ್ವಾ? ಅವರಿಂದ ಸಿಎಂ ಕುಮಾರಸ್ವಾಮಿ ಕಲಿಯುವ ಅವಶ್ಯಕತೆಯಿಲ್ಲ. ರಾಯರೆಡ್ಡಿ ತಮ್ಮ ಇಲಾಖೆಯನ್ನು ಹೇಗೆ ನಡೆಸಿದರೆಂದು ಗೊತ್ತಿದೆ. 48 ತಾಲೂಕು ಕೇಂದ್ರದಲ್ಲಿ ಪಿಯು ಕಾಲೇಜುಗಳಿರಲಿಲ್ಲ. ಅವುಗಳನ್ನ ಸಿಎಂ ಕುಮಾರಸ್ವಾಮಿ ಕೊಡಬೇಕಾಯ್ತು. 6 ತಿಂಗಳಲ್ಲಿ ಹೈಸ್ಕೂಲ್, ಕಾಲೇಜಿಗೆ 1,450 ಕೋಟಿ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ ಎಂದು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.

ದೋಸ್ತಿ ಸರ್ಕಾರದ ಸಚಿವರು, ಶಾಸಕರು ಕುಮಾರಸ್ವಾಮಿ ವಿರುದ್ಧವಾಗಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರೇವಣ್ಣ, ಕಳೆದ ಹತ್ತು ವರ್ಷದಿಂದ ನಮ್ಮ ಜನ ನೀರನ್ನು ಭಿಕ್ಷುಕರಂತೆ ಕೇಳುತ್ತಿದ್ದರು. ಅವರ ಸೇವೆ ಮಾಡೋ ಅವಕಾಶವನ್ನು ದೇವರು ಕೊಟ್ಟಿದ್ದಾನೆ. ಕುಮಾರಸ್ವಾಮಿ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ಮಂತ್ರಿಯಾಗಿ ಕಾಂಗ್ರೆಸ್, ದಳ, ಬಿಜೆಪಿ ಎಂದು ನೋಡದೆ ಉತ್ತಮ ಕೆಲಸ ಮಾಡೋದಷ್ಟೇ ನಮ್ಮ ಗುರಿ. ಕುಮಾರಸ್ವಾಮಿ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಎಚ್​.ಡಿ. ರೇವಣ್ಣ ಹೇಳಿದ್ದಾರೆ.

ಇಂದು ಸಿದ್ದರಾಮಯ್ಯನವರ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದ್ದ ವಿಚಾರವಾಗಿ ಮಾತನಾಡಿದ ರೇವಣ್ಣ, ಆ ವಿಚಾರ ನನಗೆ ಗೊತ್ತಿಲ್ಲ. ಕ್ಯಾಬಿನೆಟ್ ಇತ್ತು, ಹಾಗಾಗಿ ಬಂದಿದ್ದೆ. ಅಲ್ಲಿಗೆ ಹೋಗಲು ಆಗಿಲ್ಲ. ಏನು ಹೇಳಿದ್ದಾರೆ ಎಂದು ಕೇಳಿದ ಮೇಲೆ ಹೇಳುತ್ತೇನೆ ಎಂದಿದ್ದಾರೆ.

Comments are closed.