ಮುಂಬೈ

ಆರೋಗ್ಯವಂತರಾಗಿದ್ದ ನಟಿ ಶ್ರೀದೇವಿ ಬಾತ್​ಟಬ್​ನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ ?

Pinterest LinkedIn Tumblr

ಮುಂಬೈ: ಎತ್ತರದ ನಿಲುವಿನ, ದಷ್ಟಪುಷ್ಟ ದೇಹದ ಹಾಗೂ ಆರೋಗ್ಯವಂತರಾಗಿದ್ದ ನಟಿ ಶ್ರೀದೇವಿ ಬಾತ್​ಟಬ್​ನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ ಎಂದು ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ. ಸರೋಜ್ ಶ್ರೀದೇವಿ ನಟಿಸಿದ 22 ಚಿತ್ರಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್, ಶ್ರೀದೇವಿ ಅಕಾಲಿಕ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವುದಲ್ಲದೆ, ಅವರ ಸಾವಿಗೆ ನೀಡಿರುವ ಕಾರಣದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯವಂತರಾಗಿದ್ದ ಶ್ರೀದೇವಿ ಬಾತ್​ಟಬ್​ನಲ್ಲಿ ಮುಳುಗಲು ಹೇಗೆ ಸಾಧ್ಯ ಎಂದು ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಮಗುವಿನಂತೆ ಅತ್ತ ಬೋನಿ: ಪ್ರೀತಿಸಿ ಮದುವೆಯಾಗಿದ್ದ ಮಡದಿ ಶ್ರೀದೇವಿ ನಿಧನರಾಗಿದ್ದನ್ನು ಕಂಡು ಅವರ ಪತಿ ಬೋನಿ ಕಪೂರ್ ಮಗುವಿನಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು ಎಂದು ಪಾಕಿಸ್ತಾನದ ನಟ ಅದ್ನಾನ್ ಸಿದ್ಧಿಕಿ ಹೇಳಿದ್ದಾರೆ. ಶ್ರೀದೇವಿ ಕೊನೆಯ ಚಿತ್ರ ಮಾಮ್ಲ್ಲಿ ನಟಿಸಿರುವ ಸಿದ್ಧಿಕಿ, ‘‘ನಾನು ಕೂಡ ಶ್ರೀದೇವಿ ಸೋದರ ಸಂಬಂಧಿ ಮೋಹಿತ್ ಮರ್ವಾ ಮದುವೆಯಲ್ಲಿ ಪಾಲ್ಗೊಂಡಿದ್ದೆ. ಈ ಸಂದರ್ಭದಲ್ಲಿ ಶ್ರೀದೇವಿ ಅವರನ್ನು ಭೇಟಿಯಾಗಿ ಮಾತನಾಡಿದ್ದೆ. ದುಬೈನಲ್ಲೇ ಇದ್ದ ನಾನು ಬೋನಿ ಕಪೂರ್​ರನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೋಗಿದ್ದೆ. ಆಗ ಅವರು ಎಳೆ ಮಗುವಿನಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು’ ಎಂದು ಹೇಳಿದರು.

ಪಾರ್ಥಿವ ಶರೀರ ಬರಲು ಇನ್ನಷ್ಟು ವಿಳಂಬ: ಶ್ರೀದೇವಿ ಪಾರ್ಥಿವ ಶರೀರ ಮುಂಬೈಗೆ ತರಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಬಾತ್​ಟಬ್​ನಲ್ಲಿ ಮುಳುಗಿ ಸತ್ತಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ದುಬೈ ಪೊಲೀಸರು ತನಿಖೆಯನ್ನು ದುಬೈ ಸಾರ್ವಜನಿಕ ಅಭಿಯೋಜಕರಿಗೆ ಒಪ್ಪಿಸಿದ್ದಾರೆ. ಇವರು ವಿಚಾರಣೆ ಮುಗಿಸಿ, ಸಾವಿಗೆ ಖಚಿತ ಕಾರಣ ತಿಳಿದ ಬಳಿಕ ಪಾರ್ಥಿವ ಶರೀರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಬಗ್ಗೆ ನಿರ್ಧರಿಸಲಿದ್ದಾರೆ.

ಕರ್ನಾಟಕದ 150 ಜನರ ತಂಡ: ಶ್ರೀದೇವಿ ಅಂತಿಮ ದರ್ಶನ ಪಡೆಯಲು ಮುಂಬೈ ಲೋಖಂಡವಾಲಾದ ಶ್ರೀದೇವಿ ಅವರ ಅಪಾರ್ಟ್​ವೆುಂಟ್​ಗೆ ಕರ್ನಾಟಕದ 150 ಅಭಿಮಾನಿಗಳ ತಂಡ ಆಗಮಿಸಿದೆ. ಅಂತೆಯೇ ತೆಲಂಗಾಣ, ರಾಜಸ್ಥಾನ ಸೇರಿ ವಿವಿಧ ರಾಜ್ಯಗಳ ಅಭಿಮಾನಿಗಳು ಇಲ್ಲಿ ಜಮಾಯಿಸಿದ್ದಾರೆ.

Comments are closed.