ಮುಂಬೈ

ಬಿಎಸ್‌ಇ: ಒಂದೇ ದಿನದಲ್ಲಿ ಇನ್ಫೊಸಿಸ್‌ ಷೇರು ಮೌಲ್ಯ ಶೇ 5.7 ಏರಿಕೆ

Pinterest LinkedIn Tumblr

bsewebಮುಂಬೈ (ಪಿಟಿಐ): ವಾಡಿಕೆಗಿಂತ ಈ ಬಾರಿ ಉತ್ತಮ ಮಳೆ ಲಭಿಸಲಿದೆ ಮತ್ತು ಹಣದುಬ್ಬರ ಇಳಿಯಲಿದೆ ಎಂಬ ಮುನ್ನೋಟದಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಸತತ ಏರಿಕೆ ಕಾಣುತ್ತಿದೆ. ಸೋಮವಾರವೂ 190 ಅಂಶಗಳಷ್ಟು ಜಿಗಿತ ಕಂಡಿದ್ದು, 25,816 ಅಂಶಗಳನ್ನು ತಲುಪುವ ಮೂಲಕ ಮೂರೂವರೆ ತಿಂಗಳ ಗರಿಷ್ಠ ಮಟ್ಟ ತಲುಪಿದೆ.
ದಿನದ ವಹಿವಾಟಿನಲ್ಲಿ ಇನ್ಫೊಸಿಸ್‌ ಷೇರು ಮೌಲ್ಯ ಶೇ 5.70ರಷ್ಟು ಏರಿಕೆ ಕಂಡಿದೆ. ಇನ್ಫೊಸಿಸ್‌ ಷೇರು ಒಂದೇ ದಿನದಲ್ಲಿ ₹64.45ರಷ್ಟು ಏರಿಕೆ ಕಂಡಿದ್ದು ₹1,238 ತಲುಪಿದೆ. ಇದು ಕಳೆದ 52 ವಾರಗಳಲ್ಲಿ ದಾಖಲಾಗಿರುವ ಗರಿಷ್ಠ ಮೌಲ್ಯ. ಸಂಸ್ಥೆಯು ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ₹3,597 ಕೋಟಿ ನಿವ್ವಳ ಲಾಭ ದಾಖಲಿಸಿರುವುದೇ ಈ ಏರಿಕೆಗೆ ಕಾರಣ.
64 ಅಂಶಗಳ ಏರಿಕೆಯೊಂದಿಗೆ ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 7,900 ಅಂಶಗಳನ್ನು ದಾಟಿ 7,914 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
ಐಟಿ, ರಿಯಲ್‌ ಎಸ್ಟೇಟ್‌, ಎಫ್‌ಎಂಸಿಜಿ ವಲಯದ ಷೇರುಗಳು ದಿನದ ವಹಿವಾಟಿನಲ್ಲಿ ಗರಿಷ್ಠ ಲಾಭ ಮಾಡಿಕೊಂಡವು. ಉತ್ತಮ ಮಳೆ ಲಭಿಸಿ, ಹಣದುಬ್ಬರ ಇಳಿದರೆ, ಆರ್‌ಬಿಐ ಬಡ್ಡಿ ದರ ಕಡಿತ ಮಾಡಲಿದೆ ಎಂಬ ಸಂಗತಿ ಕೂಡ ಷೇರುಪೇಟೆಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದೆ.

Write A Comment