ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 348 ಅಂಶಗಳಷ್ಟು ಭರ್ಜರಿ ಏರಿಕೆ ಕಂಡಿದ್ದು ಮತ್ತೆ 25 ಸಾವಿರದ ಗಡಿ ದಾಟಿದೆ.
ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಮೂಡಿದ್ದು, ಐಟಿ ವಲಯದ ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ದಿನದ ವಹಿವಾಟಿನಲ್ಲಿ ಟಾಟಾ ಸಮೂಹ, ವಿಪ್ರೊ, ಟಿಸಿಎಸ್ ಷೇರುಗಳು ಗರಿಷ್ಠ ಲಾಭ ಮಾಡಿಕೊಂಡವು. ಸೂಚ್ಯಂಕ ಒಂದು ವಾರದ ಗರಿಷ್ಠ ಮಟ್ಟವಾದ 25,022 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 116 ಅಂಶಗಳಷ್ಟು ಏರಿಕೆ ಪಡೆದು 7,671 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
ಫೆಬ್ರುವರಿ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಮಾರ್ಚ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮಂಗಳವಾರ ಪ್ರಕಟಗೊಳ್ಳಲಿದ್ದು, ಈ ಅಂಕಿ ಅಂಶಗಳಿಗಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. ಶುಕ್ರವಾರದಿಂದ ಇನ್ಫೊಸಿಸ್ ಸೇರಿದಂತೆ ವಿವಿಧ ಕಂಪೆನಿಗಳ ನಾಲ್ಕನೆಯ ತ್ರೈಮಾಸಿಕ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದು ಕೂಡ ಷೇರುಪೇಟೆಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಸಾಧ್ಯತೆಗಳಿವೆ.