ಮನೋರಂಜನೆ

ಕೈ ಮುಗಿದರೆ ಕೈ ಬಿಡದ ದೇವೀಮಹಾತ್ಮೆ

Pinterest LinkedIn Tumblr

deviಸಾಮಾನ್ಯವಾಗಿ ಭಕ್ತಿಪ್ರಧಾನ ಚಿತ್ರಗಳಲ್ಲಿ ಒಳಿತು ಮತ್ತು ಕೆಡಕು ಎರಡೂ ಇರುತ್ತೆ. ಕೆಡಕು ಬಯಸಿದವರನ್ನು ದೇವರು ಶಿಕ್ಷಿಸುತ್ತಾನೆ. ನಂತರ ಆ ದೇವರನ್ನು ಭಕ್ತಿಯಿಂದ ನಮಿಸಿದರೆ ರಕ್ಷಿಸುತ್ತಾನೆ, ಅಲ್ಲಿಗೆ ಭಕ್ತಪ್ರಧಾನ ಕಥೆಗೆ “ಶುಭಂ’ ಎನ್ನಲಾಗುತ್ತೆ.

ಬಹುತೇಕ ಭಕ್ತಿಪ್ರಧಾನ ಚಿತ್ರಗಳಲ್ಲಿ ಇದಲ್ಲದೆ ಬೇರೇನೂ ಇರೋದಿಲ್ಲ. “ಸಿಗಂಧೂರು ಚೌಡೇಶ್ವರಿ ಮಹಿಮೆ’ ಚಿತ್ರದಲ್ಲೂ ಅಪಾರವಾದ ಭಕ್ತಿ, ನಂಬಿಕೆ ಮತ್ತು ಆರಾಧನೆ ವಿಷಯಗಳೇ ತುಂಬಿವೆ. ಈಗಿನ ಹೊಡಿ, ಬಡಿ, ಕಡಿ, ಕುಣಿ, ಆತ್ಮ, ಪ್ರೇತಾತ್ಮ ಚಿತ್ರಗಳ ನಡುವೆ ಹೀಗೊಂದು ಭಕ್ತಿಪ್ರಧಾನ ಚಿತ್ರ ನೋಡುಗರನ್ನು ಭಕ್ತಿಪರವಶರನ್ನಾಗಿಸುತ್ತೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುತ್ತೆ. ದೇವಿಯ ಮಹಿಮೆ ನೋಡಿ ಹೊರಬಂದವರಿಗೆ ಚೌಡೇಶ್ವರಿ ದೇವಿ ಮೇಲಿನ ಭಕ್ತಿ ಮತ್ತಷ್ಟು ತೀವ್ರಗೊಳ್ಳುತ್ತೆ ಎಂಬ ಮಾತಂತೂ ನಿಜ. ನಿರ್ದೇಶಕ ಶಶಿಕುಮಾರ್‌ ಚಿತ್ರವನ್ನು ಶ್ರದ್ಧೆಯಿಂದ ಕಟ್ಟಿಕೊಟ್ಟಿದ್ದಾರೆ.

ಭಕ್ತಿಪ್ರಧಾನ ಚಿತ್ರದಲ್ಲಿ ಕಷ್ಟದಲ್ಲಿರೋ ಭಕ್ತರು, ಆ ಭಕ್ತರನ್ನು ಹಿಂಸಿಸುವ ಜನರು ಇದ್ದೇ ಇರುತ್ತಾರೆ. ಇಲ್ಲೂ ಆಸ್ತಿಕರು, ನಾಸ್ತಿಕರಿದ್ದಾರೆ. ನೈಜ ಕಥೆಯ ಎಳೆ ಇಟ್ಟುಕೊಂಡು ಒಂದಷ್ಟು ಕಾಲ್ಪನಿಕ ವಿಷಯಗಳನ್ನು ಸೇರಿಸಿ ದೃಶ್ಯರೂಪಕವನ್ನಾಗಿಸಿರುವ ನಿರ್ದೇಶಕರು,
ಇಲ್ಲಿ ಪ್ರತಿಯೊಂದು ಪಾತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ದೇವಿಯನ್ನು ನಂಬಿದರೆ ಎಂದೂ ಆಕೆ ಕೈ ಬಿಡುವುದಿಲ್ಲ. ನಂಬದವರನ್ನೂ ಸಹ ನಂಬುವಂತೆ ಮಾಡುವ ಶಕ್ತಿ ಆ ದೇವಿಯಲ್ಲಿದೆ ಎಂಬುದೇ ಚಿತ್ರದ ಸಾರಾಂಶ. ಸಿಗಂಧೂರು ದೇವಿಯನ್ನು
ನಂಬಿದವರಿಗೆ ಭಯವಿಲ್ಲ, ನಂಬದವರಿಗೆ ಬದುಕಿಲ್ಲ ಎಂಬುದು ಚಿತ್ರದ ಮುಖ್ಯ ಸಂದೇಶ. ಚಿತ್ರದಲ್ಲಿ ಒಂದಷ್ಟು ತಪ್ಪುಗಳಿವೆ. ಆದರೆ, ಭಕ್ತಿಪ್ರಧಾನ ಚಿತ್ರವಾದ್ದರಿಂದ ಅವುಗಳನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ. ಆರಂಭದ ವೇಗ ಕೊಂಚ ಮಂದ ಎನಿಸಿದರೂ,
ಚಿತ್ರ ಸಾಗುತ್ತ, ದೇವಿಯ ಪವಾಡಗಳಿಂದಾಗಿ ವೇಗ ಹೆಚ್ಚಿಸಿಕೊಳ್ಳುತ್ತೆ. ದೇವಿಯ ಮಹಿಮೆ ನೋಡಿಸಿಕೊಂಡು ಹೋಗುವುದಕ್ಕೆ ಮತ್ತೂಂದು ಮುಖ್ಯ ಕಾರಣ, ಬರುವ ಕಥೆಗಳು.

ಇಲ್ಲಿ ಮೂರು ಉಪಕಥೆಗಳಿವೆ. ಒಂದೊಂದು ಕಥೆಯಲ್ಲೂ ದೇವಿಯ ಭಕ್ತರು, ಆ ದೇವಿಯನ್ನು ನಿಂದಿಸೋ ಕಟುಕರ ಬಗ್ಗೆ
ಹೇಳಲಾಗಿದೆ. ಇನ್ನೊಂದು ಕಥೆಯಲ್ಲಿ ದೇವಿಯನ್ನು ಕೇವಲವಾಗಿ ಕಂಡರೆ, ಆಗುವ ಸಮಸ್ಯೆಗಳೇನು ಎಂಬುದನ್ನು ತೋರಿಸಲಾಗಿದೆ. ಮೂರು ಕಥೆಗಳಲ್ಲೂ ದೇವಿಯ ಮಹಿಮೆ ಹೊರತಾಗಿ ಬೇರೇನೂ ಇಲ್ಲ. ಹಾಗಾಗಿ, ಇಲ್ಲಿ ಮಾಡಿರುವ ಎಲ್ಲರ ಭಕ್ತಿಪೂರ್ವಕ
ಕೆಲಸ ವ್ಯರ್ಥವಾಗಿಲ್ಲ ಎಂದೇ ಹೇಳಬಹುದು.

ಅಕ್ಷಯ್‌ (ಹರೀಶ್‌ರಾಜ್‌), ಸ್ವಾತಿ (ಶುಭಾಪೂಂಜಾ) ಇಬ್ಬರೂ ದೇವಿಯ ಭಕ್ತರು. ಗೆಳೆಯರೊಂದಿಗೆ ಎಂಜಾಯ್‌ ಮಾಡಲು ಜೋಗಕ್ಕೆ
ಬರುವ ಅವರು, ಮೊದಲು ಸಿಗಂಧೂರು ದೇವಿಯ ದರ್ಶನ ಮಾಡೋಣ ಅಂತ ಹೊರಡುತ್ತಾರೆ. ಆದರೆ, ಜತೆಯಲ್ಲಿರುವ ಗೆಳೆಯರಿಗೆ ದೇವಿಯ ದರ್ಶನ ಇಷ್ಟವಿರಲ್ಲ. ಮೊದಲು ಎಂಜಾಯ್‌ ಮಾಡಿ ಬರೋಣ. ಆ ಬಳಿಕ ನಿಮ್ಮ ದೇವಿಯನ್ನು ನೋಡಿದರಾಯ್ತು ಎಂಬ ಉಡಾಫೆಯ ಮಾತುಗಳಿಂದ ಒಂದಷ್ಟು ಸಮಸ್ಯೆಗೆ ಸಿಲುಕುತ್ತಾರೆ.

ಮಲಗಿದರೂ ಕೂಡ ಕೊಲ್ಲುವಂತಹ ಕೆಟ್ಟ ಕನಸುಗಳು ಅವರಿಗೆ ಬೀಳುತ್ತವೆ. ಕೊನೆಗೆ ದೇವಿ ಬಗ್ಗೆ ಕೇವಲವಾಗಿ ಮಾತಾಡಿದ್ದಕ್ಕೇ ಹೀಗಾಗುತ್ತಿದೆ ಎಂಬ ಅರಿವಾದಾಗ, ದೇವಿರ ಮೊರೆ ಹೋಗಿ, ಸಮಸ್ಯೆಯಿಂದ ಹೊರಬರುತ್ತಾರೆ. ಇನ್ನೊಂದು ಕಥೆಯಲ್ಲಿ ಕುಡುಕ
ಮಗನನ್ನು ಸರಿಪಡಿಸಬೇಕು ಎಂದು ಒದ್ದಾಡುವ ತಾಯಿ ಮತ್ತು ಸೊಸೆ ಇಬ್ಬರನ್ನೂ ನಿಂದಿಸಿ, ಅವರು ಆರಾಧಿಸುವ ಚೌಡೇಶ್ವರಿ ಭಾವಚಿತ್ರವನ್ನೇ ಕಿತ್ತೂಸೆಯುವ ಅವನಿಗೆ ಕೈ ಕಾಲುಗಳು ಸ್ವಾಧೀನ ಇಲ್ಲದಂತಾಗುತ್ತವೆ. ಅವನ ತಪ್ಪು ಅರಿವಾಗಿ ದೇವಿ ಮೊರೆ ಹೋದಾಗ, ಎಲ್ಲವೂ ಸರಿಹೋಗುತ್ತವೆ. ಹೀಗೆ ಮೂರು ಕಥೆಯಲ್ಲೂ ದೇವಿಯ ಶಕ್ತಿ ಮತ್ತು ನಂಬಿಕೆಯೇ ಜೀವಾಳವಾಗಿದೆ. ಇಲ್ಲಿ ಮೂರು ಕಥೆಗಳಿದ್ದರೂ ಅವುಗಳನ್ನು ಒಂದೊಂದಾಗಿಯೇ ತೋರಿಸಿರುವ ರೀತಿ ನೋಡುಗರಿಗೆ ಎಲ್ಲೂ ಕಿರಿಕಿರಿಯಾಗುವುದಿಲ್ಲ. ಅಂತಿಮವಾಗಿ ಸಿನಿಮಾ ಮುಗಿಯೋ ಹೊತ್ತಿಗೆ ಸಿಗಂಧೂರು ಚೌಡೇಶ್ವರಿ ದೇವಿ ಬಂದು ನೆಲೆಸಿದ್ದು, ಹೇಗೆ, ಆಕೆಯ ಪವಾಡಗಳೇನು
ಇತ್ಯಾದಿ ವಿಷಯಗಳು ತಿಳಿಯುತ್ತವೆ. ದೇವಿಯ ಮಹಿಮೆ ಮತ್ತು ಶಕ್ತಿ ಅರಿಯಬೇಕಾದರೆ, ಒಮ್ಮೆ ನೋಡಿಬರಲ್ಲಡ್ಡಿಯಿಲ್ಲ.

ಹರೀಶ್‌ರಾಜ್‌, ಶುಭಾಪೂಂಜಾ ಭಕ್ತಿ ಇಲ್ಲಿ ಹೆಚ್ಚಾಗಿದೆ. ರಾಜೇಶ್‌ ಧ್ರುವ, ಸಂಜನಾನಾಯ್ಡು, ಗಿರಿಜಾಲೋಕೇಶ್‌, ಟೆನ್ನಿಸ್‌ಕೃಷ್ಣ, ರಮೇಶ್‌ಭಟ್‌ ದೇವಿಯ ಭಕ್ತರಾಗಿ ಇಷ್ಟವಾಗುತ್ತಾರೆ. ಚೈತನ್ಯ ಅವರ ಸಂಗೀತದಲ್ಲಿ ಹೇಳವಂತಹ ಪವಾಡವಿಲ್ಲ. ಮೋಹನ್‌
ಕ್ಯಾಮೆರಾ ಕೈಚಳಕ ಪರವಾಗಿಲ್ಲ.

-ವಿಜಯ್‌ ಭರಮಸಾಗರ
-ಉದಯವಾಣಿ

Write A Comment