ಮುಂಬೈ

ಹೆಡ್ಲಿಯ ಪಾಕ್ ಭೇಟಿ ಪ್ರಾಯೋಜಿಸಿತ್ತು ಅಮೆರಿಕ!

Pinterest LinkedIn Tumblr

heಮುಂಬೈ: ಉಗ್ರ ದಾಳಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಉಗ್ರ ಡೇವಿಡ್ ಹೆಡ್ಲಿಯ 2ನೇ ಹಂತದ ವಿಚಾರಣೆ ಬುಧವಾರ ಆರಂಭವಾಗಿದ್ದು, ಅಮೆರಿಕದ ರಹಸ್ಯ ಸ್ಥಳದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಮುಂಬೈ ಕೋರ್ಟ್​ಗೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಒಮ್ಮೆ ಅಮೆರಿಕವೇ ಪಾಕಿಸ್ತಾನ ಭೇಟಿ ಪ್ರಾಯೋಜಿಸಿತ್ತು ಹಾಗೂ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗೆ ತಾನೇ ದೇಣಿಗೆ ನೀಡಿದ್ದೆ ಎಂದು ಪಾಕ್ ಮೂಲದ ಅಮೆರಿಕನ್ ಉಗ್ರ ಹೇಳಿಕೆ ನೀಡಿದ್ದಾನೆ.

ವಿಶೇಷ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕ್ಕಂ ಪ್ರಯತ್ನದ ಹಿನ್ನೆಲೆಯಲ್ಲಿ ಮುಂಬೈ ಸೆಶನ್ಸ್ ಕೋರ್ಟ್​ಗೆ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದ ಹೆಡ್ಲಿ, ಮೊದಲ ಹಂತದಲ್ಲಿ ಫೆ.13ರಿಂದ ವಾರ ಕಾಲ ವಿಚಾರಣೆ ಎದುರಿಸಿದ್ದ. ಮುಂಬೈ ದಾಳಿಯ ಮತ್ತೊಬ್ಬ ಪ್ರಮುಖ ಸಂಚುಕೋರ ಅಬು ಜುಂದಾಲ್ ಪರ ವಕೀಲ ಅಬ್ದುಲ್ ವಾಹಬ್ ಖಾನ್ ಇದೀಗ 2ನೇ ಹಂತದ ವಿಚಾರಣೆ ವೇಳೆ ಹೆಡ್ಲಿಯಿಂದ ಪ್ರತಿ ಹೇಳಿಕೆ ಪಡೆಯುತ್ತಿದ್ದು, ಇನ್ನಷ್ಟು ವಿಚಾರ ಬಹಿರಂಗವಾಗಿವೆ. 1998ರಲ್ಲಿ ಸೆರೆ ಸಿಕ್ಕ ಬಳಿಕ ಅಮೆರಿಕದ ಡ್ರಗ್ ಎನ್​ಫೋರ್ಸ್​ಮೆಂಟ್ ಅಥಾರಿಟಿ (ಡಿಇಎ) ನನ್ನ ಪಾಕ್ ಭೇಟಿಯನ್ನು ಪ್ರಾಯೋಜಿಸಿತ್ತು. ಆದರೆ, 1988ರಿಂದ 1998ರವರೆಗೆ ನಾನು ಡಿಇಎಯ ಮಾಹಿತಿದಾರನಾಗಿದ್ದೆ ಎಂಬುದು ನಿಜವಲ್ಲ ಎಂದು ಹೆಡ್ಲಿ ಹೇಳಿದ್ದಾನೆ. ತನ್ನ ಪಾಕ್ ಪ್ರವಾಸವನ್ನು ಡಿಇಎ ಪ್ರಾಯೋಜಿಸಿದ್ದೇಕೆ ಎಂಬ ನಿಖರ ಮಾಹಿತಿಯನ್ನು ಹೆಡ್ಲಿ ನೀಡಿಲ್ಲ ಎನ್ನಲಾಗಿದೆ.

ಎಲ್​ಇಟಿಯಿಂದ ಹಣ ಪಡೆದಿಲ್ಲ

26/11 ದಾಳಿ ಸಂಬಂಧಿಸಿ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹೆಡ್ಲಿ, ತಾನು ಎಲ್​ಇಟಿ ನಂಟು ಹೊಂದಿದ್ದಕ್ಕೆ ಪುರಾವೆಯಾಗಿ ಇನ್ನಷ್ಟು ಮಾಹಿತಿ ನೀಡಿದ್ದಾನೆ. ಉಗ್ರ ಸಂಘಟನೆಯಿಂದ ನಾನು ಹಣ ಪಡೆದು ಕೊಂಡಿಲ್ಲ. ನ್ಯೂಯಾರ್ಕ್​ನಲ್ಲಿನ ನನ್ನ ಸಂಸ್ಥೆಯಿಂದ ಎಲ್​ಇಟಿಗೆ 60ರಿಂದ 70 ಲಕ್ಷ ರೂ. ದೇಣಿಗೆ ನೀಡಿದ್ದೇನೆ. 2006ರಲ್ಲಿ ಕೊನೆಯಬಾರಿ ದೇಣಿಗೆ ನೀಡಿದ್ದು, ಆಗ 2008ರ ಮುಂಬೈ ದಾಳಿ ಸಂಚು ಸಿದ್ಧವಾಗಿರಲಿಲ್ಲ ಎಂದಿದ್ದಾನೆ. ಅಲ್ಲದೆ ಶಿಕಾಗೋದಲ್ಲಿ ವಲಸೆ ಬಿಜಿನೆಸ್ ನಡೆಸುತ್ತಿದ್ದ ಎಲ್​ಇಟಿ ಉಗ್ರ ತಹಾವುರ್ ರಾಣಾಗೆ ನಾನು ಎಲ್​ಇಟಿ ನಂಟು ಹೊಂದಿದ್ದ ವಿಚಾರ ತಿಳಿದಿತ್ತು ಎಂದೂ ಹೇಳಿದ್ದಾನೆ.

ಪತ್ನಿ ಬಗ್ಗೆ ಏನೂ ಕೇಳಬೇಡಿ

ಪತ್ನಿ ಶಾಜಿಯಾ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಹೆಡ್ಲಿ, ಆಕೆಯ ಬಗ್ಗೆ ಏನನ್ನೂ ಕೇಳಬೇಡಿ ಎಂದಿದ್ದಾನೆ. ‘ನಾನು ಕಾನೂನಾತ್ಮಕವಾಗಿ ವಿವಾಹವಾದವಳು ಶಾಜಿಯಾ. ಆಕೆ ಈಗ ಎಲ್ಲಿದ್ದಾಳೆ ಎಂಬುದೂ ಸೇರಿ ಆಕೆಯ ಕುರಿತ ಮಾಹಿತಿ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ನಾನು ಎಲ್​ಇಟಿ ಜತೆ ನಂಟು ಹೊಂದಿದ್ದ ವಿಚಾರವನ್ನು ಪಾಕಿಸ್ತಾನದವಳಾದ ಆಕೆಗೆ ತಿಳಿಸಿದ್ದೆ. ಆದರೆ, ಭಾರತಕ್ಕೆ ಶಾಜಿಯಾ ಭೇಟಿ ನೀಡಿದ್ದಳು ಎಂಬ ವರದಿ ಸುಳ್ಳು’ ಎಂದಿದ್ದಾನೆ.

Write A Comment