ಕರ್ನಾಟಕ

ಲೋಕಾ ದುರ್ಬಲ ಕ್ರಮಕ್ಕೆ ಆರ್​ಎಸ್​ಎಸ್ ಕಿಡಿ

Pinterest LinkedIn Tumblr

rssಹುಬ್ಬಳ್ಳಿ: ಲೋಕಾಯುಕ್ತ ಸಂಸ್ಥೆ ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಯತ್ನ, ದೆಹಲಿಯ ಜೆಎನ್​ಯುು ಘಟನೆ, ಪುತ್ತೂರಿನ ಮಹಾಬಲೇಶ್ವರ ದೇಗುಲದ ಆಹ್ವಾನ ಪತ್ರಿಕೆ ವಿವಾದ ಮೊದಲಾದ ಸಂಗತಿಗಳು ಬುಧವಾರ ಕೇಶವ ಕುಂಜದಲ್ಲಿ ಆರಂಭವಾದ ಆರ್​ಎಸ್​ಎಸ್​ನ ಸಮನ್ವಯ ಸಮಿತಿಯಲ್ಲಿ ವ್ಯಾಪಕ ಚರ್ಚೆಗೊಳಗಾದವು.

ರಾಜ್ಯಮಟ್ಟದ ಎರಡು ದಿನಗಳ ಸಮನ್ವಯ ಬೈಠಕ್​ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್)ದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖ ಮುಕುಂದ, ಬಿಜೆಪಿ, ಎಬಿವಿಪಿ, ವಿಎಚ್​ಪಿ, ಬಜರಂಗದಳ, ಕಿಸಾನ್ ಸಂಘ, ಮಜ್ದೂರ್ ಸಭಾ ಮುಂತಾದ ಸಂಘ ಪರಿವಾರ ಸಂಘಟನೆಗಳ ರಾಜ್ಯ ನಾಯಕರು ಭಾಗಿಯಾಗಿದ್ದಾರೆ.

ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಸಂಸ್ಥೆ ಮುಚ್ಚುವ ಹುನ್ನಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆ ಹಾಗೂ ಮುಖ್ಯಮಂತ್ರಿ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಕುರಿತಂತೆ ಬಿಜೆಪಿ ವರದಿ ಮಂಡಿಸಿತು.

ಪ್ರಚೋದನೆಗೆ ಅಚ್ಚರಿ: ದೆಹಲಿಯ ಜೆಎನ್​ಯುು ವಿವಾದಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರಮುಖರು ವರದಿ ಮಂಡಿಸಿದರು. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಎಡಪಂಥೀಯ ವಿಚಾರಧಾರೆ ತುಂಬುವ ಮೂಲಕ ದೇಶದ್ರೋಹಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಕುರಿತು ಸಭೆ ಅಚ್ಚರಿ ವ್ಯಕ್ತಪಡಿಸಿತು. ವಿವಿಗಳಲ್ಲಿ ಇಂತಹ ವಿವಾದಕ್ಕೆ ಆಸ್ಪದ ನೀಡದಂತೆ ತುರ್ತು ತಂತ್ರ ರೂಪಿಸಬೇಕೆಂಬ ಒತ್ತಾಸೆ ಸಭೆಯಲ್ಲಿ ಕೇಳಿಬಂತೆಂದು ತಿಳಿದುಬಂದಿದೆ.

ಸಾಮಾಜಿಕ ಸಾಮರಸ್ಯ, ಶಿಕ್ಷಣ ಸಾಮಾನ್ಯರ ಕೈಗೂ ಎಟಕುವುದು ಹಾಗೂ ಸರಳವಾಗಿ ಆರೋಗ್ಯ ದೊರೆಯುವಂತಾಗುವುದು-ಈ ಮೂರೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಆರ್​ಎಸ್​ಎಸ್ ಪ್ರಮುಖರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನ, ಸ್ಮಶಾನ ಹಾಗೂ ನೀರಿನ ವಿಷಯದಲ್ಲಿ ಸಮಾಜದ ಜನತೆಯಲ್ಲಿ ಸಾಮರಸ್ಯ ಮೂಡಿಸುವ ಕಾರ್ಯದ ಕುರಿತು ಸ್ಪಷ್ಟ ಸೂಚನೆ ನೀಡಿದೆ.

ಗುಣಮಟ್ಟದ ಶಿಕ್ಷಣ ಮಾಯವಾಗುತ್ತಿರುವುದಕ್ಕೆ ಸಭೆ ಕಳವಳ ವ್ಯಕ್ತಪಡಿಸಿದೆ. ಇನ್ನು ಆರೋಗ್ಯದ ವಿಚಾರದಲ್ಲಿ ಮಧ್ಯಮ ಕುಟುಂಬದ ವ್ಯಕ್ತಿಯೋರ್ವ ಅನಾರೋಗ್ಯಕ್ಕೆ ತುತ್ತಾದರೆ ಆತನ ಕುಟುಂಬ ಔಷಧ, ಚಿಕಿತ್ಸೆಗಾಗಿ ಸಾಲ ಮಾಡಿ ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಬದಲಾವಣೆ ತರುವ ಕುರಿತು ಚಿಂತನೆ ನಡೆಸಿದೆ.

ಪುತ್ತೂರಿನ ಮಹಾಬಲೇಶ್ವರ ದೇವಸ್ಥಾನದ ಆಹ್ವಾನ ಪತ್ರಿಕೆ ವಿವಾದ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದ್ದು, ಗುರುವಾರವೂ ಸಭೆ ಮುಂದುವರಿಯಲಿದೆ.

ವರಿಷ್ಠರ ಭೇಟಿ ಮಾಡಿದ ಕುಬೇರಪ್ಪ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಚರ್ಚೆ ನಡೆದಿದ್ದು, ಪಕ್ಷೇತರ ಅಭ್ಯರ್ಥಿ ಡಾ.ಆರ್.ಎಂ. ಕುಬೇರಪ್ಪ ಜತೆ ಬುಧವಾರ ಆರ್​ಎಸ್​ಎಸ್ ಚರ್ಚೆ ನಡೆಸಿದ್ದು, ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಡ ಹೇರಿದೆ. ಈಗಾಗಲೇ ಮಾ. ನಾಗರಾಜ ಬಿಜೆಪಿ ಅಭ್ಯರ್ಥಿ ಎಂದು ಅಂತಿಮವಾಗಿದ್ದು, ಅಡ್ಡಿಯಾಗದಂತೆ ಒತ್ತಡ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟಾನುಘಟಿಗಳು ಭಾಗಿ

ಆರ್​ಎಸ್​ಎಸ್​ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖ ಮುಕುಂದಜಿ, ಕ್ಷೇತ್ರೀಯ ಕಾರ್ಯವಾಹ ರಾಮಕೃಷ್ಣಜಿ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಡಾ.ಪ್ರಭಾಕರ ಭಟ್ ಕಲ್ಲಡ್ಕ, ಸುಧೀರ್, ಶ್ರೀಧರ್ ನಾಡಿಗೇರ, ಶಂಕರಾನಂದ, ಗೋಪಾಲ್, ಬಿಜೆಪಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಸಂತೋಷ್, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ, ವಿನಯಕುಮಾರ್ ಸೊರಾನಾ, ಸಿ.ಟಿ. ರವಿ, ಎನ್. ರವಿಕುಮಾರ್ ಮುಂತಾದವರು ಭಾಗವಹಿಸಿದ್ದಾರೆ.

FacebookTwitterGoogle+Google GmailOutlook.com

Write A Comment