ಮುಂಬೈ: ಖ್ಯಾತ ಕಿರುತೆರೆ ಕಾಮಿಡಿ ಶೋ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮ ಸ್ಥಗಿತಗೊಂಡಾಗ ಸಾಕಷ್ಟು ಅಭಿಮಾನಿಗಳು ನಿರಾಸೆಯಾಗಿದ್ದರು. ಆದರೆ ಇದೀಗ ಕಿರುತೆರೆ ಕಾಮಿಡಿ ಕಿಂಗ್ ಎಂದೇ ಖ್ಯಾತಿಗಳಿಸಿರುವ ಕಪಿಲ್ ಶರ್ಮಾ ನೂತನ ಕಾಮಿಡಿ ಶೋವೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಿರುತೆರೆಯಲ್ಲಿ ಅತ್ಯಧಿಕ ಟಿಆರ್ ಪಿ ಹೊಂದಿದ್ದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮ ಇತ್ತೀಚೆಗೆ ಸ್ಥಗಿತಗೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಕಪಿಲ್ ಅಭಿಮಾನಿಗಳ ನಿರಾಸೆಗೆ ತೆರೆ ಎಳೆದಿರುವ ಸೋನಿ ಟಿವಿ ಕಪಿಲ್ ಶರ್ಮಾ ಮತ್ತು ಅವರ ಕಾಮಿಡಿ ನೈಟ್ಸ್ ವಿತ್ ಕಪಿಲ್ ತಂಡವನ್ನೇ ಬಳಕೆ ಮಾಡಿ ನೂತನ ಕಾಮಿಡಿ ಕಾರ್ಯಕ್ರಮವನ್ನು ತಯಾರಿಸುತ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕಾರ್ಯಕ್ರಮಕ್ಕೆ ಕಾಮಿಡಿ ಸ್ಟೈಲ್ ಎಂದು ನಾಮಕರಣ ಮಾಡಲಾಗಿದ್ದು, ಕಾಮಿಡಿ ನೈಟ್ಸ್ ವಿತ್ ಕಪಿಲ್ ತಂಡವೇ ಈ ಕಾರ್ಯಕ್ರಮದಲ್ಲಿಯೂ ಬಣ್ಣಹಚ್ಚಲಿದೆ ಎಂದು ತಿಳಿದುಬಂದಿದೆ. ಇನ್ನು ಈ ವಿಚಾರಕ್ಕೆ ಇಂಬು ನೀಡುವಂತೆ ನಟ ಸುನಿಲ್ ಗ್ರೋವರ್ ಅವರು ಹೇಳಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ನಾನು ಆದಷ್ಟು ಬೇಗ ಮತ್ತೆ ಮೇಕಪ್ ಹಚ್ಚಲು ಬಯಸುತ್ತಿದ್ದೇನೆ. ಮಾನ್ಸೂನ್ ಗೂ ಮೊದಲು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.