ತಿರುವನಂತಪುರ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ವಿರುದ್ಧ ಪ್ರಾಣಿದಯಾ ಸಂಘದಿಂದ ದೂರು ದಾಖಲಾಗಿದೆ.
ಪ್ರಾಣಿಗಳ ಹಕ್ಕು ಹೋರಾಟಗಾರ ಮತ್ತು ಸಂರಕ್ಷಿತ ಪ್ರಾಣಿಗಳ ಟಾಸ್ಕ್ ಫೋರ್ಸ್ ಸಂಸ್ಥೆಯ ವತಿಯಿಂದ ಬಾಹುಬಲಿ-2 ನಿರ್ದೇಶಕ ಎಸ್ ಎಸ್ ರಾಜಮೌಳಿ ಸೇರಿದಂತೆ ಚಿತ್ರತಂಡದ ಹಲವರ ವಿರುದ್ಧ ದೂರುದಾಖಲಿಸಲಾಗಿದೆ. ಚಿತ್ರದ ಚಿತ್ರೀಕರಣಕ್ಕೆ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ಅನುಮತಿಯನ್ನು ಪಡೆಯದೇ ಚಿತ್ರೀಕರಣಕ್ಕೆ ಆನೆಯನ್ನು ಬಳಸಿಕೊಳ್ಳಲಾಗಿದೆ. ಆ ಮೂಲಕ ಚಿತ್ರತಂಡ ಕಾನೂನನ್ನು ಮುರಿದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ಸರ್ಕಾರದ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಚಿತ್ರೀಕರಣದಲ್ಲಿ ಆನೆಯನ್ನು ಬಳಕೆ ಮಾಡುವ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಅಲ್ಲದೆ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪತ್ರವನ್ನೂ ಕೂಡ ಚಿತ್ರ ತಂಡ ಪಡೆದಿಲ್ಲ. ಕೇರಳದ ತ್ರಿಶೂರ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಆನೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಲೈಟ್ ಗಳನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಪದೇ ಪದೇ ಹೈಬೀಮ್ ಲೈಟ್ ಗಳನ್ನು ಹಾಕುವ ಮೂಲಕ ಆನೆಗೆ ತೊಂದರೆ ನೀಡಲಾಗಿದೆ. ಇನ್ನು ಚಿತ್ರೀಕರಣದ ವೇಳೆ ಆನೆ ಅಲುಗಾಡದಿರಲಿ ಎಂದು ಹೇಳಿ ಆನೆಯ ಮಾವುತನ ಕೈಗೆ ಅಂಕುಶ ನೀಡಿ ಆನೆ ಅಲುಗಾಡಿದಾಗಲೆಲ್ಲಾ ಅದರಿಂದ ಆನೆಗೆ ಭಯಪಡಿಸಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನು ಅನಿಮಲ್ ಚಾಸ್ಕ್ ಫೋರ್ಸ್ ಇಲಾಖೆಯ ಕಾರ್ಯದರ್ಶಿ ವಿಕೆ ವೆಂಕಟಾಚಲಂ ಅವರು ಹೇಳಿದಂತೆ, ಗ್ರಾಫಿಕ್ಸ್ ಉದ್ದೇಶಕ್ಕಾಗಿ ಚಿತ್ರದಲ್ಲಿ ಆನೆಯನ್ನು ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿ ಬಂದಿದೆ. ಚಿತ್ರೀಕರಣದ ವೇಳೆ ಸಂಬಂಧ ಪಟ್ಟ ಅಧಿಕಾರಿ ಸ್ಥಳದಲ್ಲಿರಲಿಲ್ಲ. ಹೀಗಾಗಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಚಿತ್ರತಂಡದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಮಾಡಿದ್ದಾರೆ.
ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಸಾಧಿಸಿದ ಬಾಹುಬಲಿ ಚಿತ್ರದ ಸೀಕ್ವೆಲ್ ಚಿತ್ರವೇ ಬಾಹುಬಲಿ-2 ಚಿತ್ರವಾಗಿದ್ದು, ಚಿತ್ರವನ್ನು ಎಸ್ ಎಸ್ ರಾಜಮೌಳಿ ನಿರ್ದೇಶಿಸುತ್ತಿದ್ದಾರೆ.