
ಮುಂಬೈ,ಜ.22: ದಿನದ ವ್ಯವಹಾರ ಮುಗಿಸಿ ರಾತ್ರಿಯಾದ ಮೇಲೆ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಕಾರು ಹರಿದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಮುಂಬೈನ ಟ್ರಾಫರ್ಡ್ ಮಾರುಕಟ್ಟೆ ಬಳಿ ಕಳೆದ ರಾತ್ರಿ ನಡೆದಿದೆ.
ಮರ್ಸಿಡಿಸಿ ಬೆಂಜ್ ಕಾರು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಟೊಯೊಟಾ ಕಾರಿಗೆ ಹೋಗಿ ಡಿಕ್ಕಿ ಹೊಡೆದಿದೆ. ನಂತರ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಕಾರು ಹರಿದಿದೆ. ಕಾರು ಮುಂಬೈ ಮಹಾನಗರ ಪಾಲಿಕೆ ಗುತ್ತಿಗೆದಾರ ಅಮೀನ್ ಯೂಸಫ್ ಖಾನ್‍ಗೆ ಸೇರಿದ್ದಾಗಿದೆ. ಚಾಲಕ ಮದ್ಯಪಾನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಕೂಡಲೇ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ತನಿಖೆ ನಡೆಸುತ್ತಿದ್ದೇವೆ. ಕಾರಿನ ಒಳಗೆ ಎಷ್ಟು ಜನರಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಸಂಪೂರ್ಣ ತನಿಖೆ ನಡೆಸಿದ ನಂತರವಷ್ಟೇ ಘಟನೆ ಬಗ್ಗೆ ನಿಖರ ಮಾಹಿತಿ ತಿಳಿದು ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ದುದ್ದೆ ತಿಳಿಸಿದ್ದಾರೆ.