
ನವದೆಹಲಿ,ಜ.22: ಗಣರಾಜ್ಯೋತ್ಸವ ಆಚರಣೆಗೆ ಉಗ್ರರ ಕರಿನೆರಳು ದಟ್ಟವಾಗಿ ಆವರಿಸಿದೆ. ದೇಶದ ನಾನಾ ಕಡೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆಯಲ್ಲಿ ತೊಡಗಿದ್ದ ಶಂಕಿತ ಉಗ್ರರ ಬೇಟೆ ನಡೆಸಿದ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಮತ್ತು ಮುಂಬೈ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಒಟ್ಟು 25 ಮಂದಿಯನ್ನು ಬಂಧಿಸಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಸಂಪರ್ಕದಲ್ಲಿದ್ದ ಉಗ್ರರು ಅವರ ಸಹಾಯದಿಂದ ದೇಶದ ನಾನಾ ಕಡೆ ಪ್ಯಾರೀಸ್ ಮಾದರಿ ದಾಳಿಗೆ ಸಂಚು ರೂಪಿಸಿದ್ದರು.
ಹೈದರಾಬಾದ್, ಮುಂಬೈ, ಬೆಂಗಳೂರು, ತುಮಕೂರು, ಮಂಗಳೂರು, ದೆಹಲಿ, ಪಾಟ್ನಾ, ನೋಯ್ಡಾ ಸೇರಿದಂತೆ ನಾನಾ ಕಡೆ ಮಿಂಚಿನ ದಾಳಿ ನಡೆಸಿದ ತನಿಖಾಧಿಕಾರಿಗಳು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಸುಧಾರಿತ ಸ್ಫೋಟಕಗಳು, ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ವಶಕ್ಕೆ ಪಡೆದು, ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ತನಿಖಾಧಿಕಾರಿಗಳ ಭರ್ಜರಿ ಬೇಟೆಯ ಪರಿಣಾಮ ದೇಶದಾದ್ಯಂತ ಕಟ್ಟೆಚ್ಚರಿಕೆ ವಹಿಸಲಾಗಿದೆ. ಬಂಧಿತ ಶಂಕಿತ ಉಗ್ರರು ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು. ವಿದ್ಯಾರ್ಥಿಗಳ ಪೂರ್ಣ ಮಾಹಿತಿ ಕಲೆ ಹಾಕಿ ಅವರನ್ನು ಐಸಿಸ್ನತ್ತ ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದರು.
ಸ್ಫೋಟಕಗಳ ತಯಾರಿಯಲ್ಲೂ ತೊಡಗಿದ್ದ ಉಗ್ರರು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ನಾನಾ ಕಡೆಗಳಲ್ಲಿ ಪ್ಯಾರೀಸ್ ಮಾದರಿ ದಾಳಿಗೆ ಸಂಚು ರೂಪಿಸಿದ್ದರು. ವಿದೇಶಿ ಕರೆನ್ಸಿ ವಿನಿಮಯ ಜಾಲವನ್ನು ವಿಸ್ತರಿಸಿದ್ದರು. ವಿದೇಶಗಳಲ್ಲಿನ ವ್ಯಕ್ತಿಗಳನ್ನು ಸಂಪರ್ಕಿಸಿ ದಾಳಿಗೆ ಸಹಾಯ ಕೋರಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಹೈದರಾಬಾದ್ನಲ್ಲಿ ನಾಲ್ವರು, ಬೆಂಗಳೂರಿನಲ್ಲಿ ನಾಲ್ವರು, ತುಮಕೂರು, ಮಂಗಳೂರು, ಬಾಂಬೆಯಲ್ಲಿ ತಲಾ ಒಬ್ಬರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ, ದೇಶಾದ್ಯಂತ ಏಕಕಾಲದಲ್ಲಿ ದಾಳಿ ನಡೆಸುವ ದೊಡ್ಡ ಹುನ್ನಾರ ತನಿಖಾಧಿಕಾರಿಗಳ ಮಿಂಚಿನ ಕಾರ್ಯಾಚರಣೆಯಿಂದಾಗಿ ವಿಫಲವಾಗಿದೆ.
ಸರಿ ಸುಮಾರು 25 ಮಂದಿ ಉಗ್ರರ ಬಂಧನದಿಂದಾಗಿ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು, ಹೈದ್ರಾಬಾದ್, ಮುಂಬೈ, ದೆಹಲಿ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಂಧಿತ ಉಗ್ರರ ಮಾಹಿತಿ ಹಿನ್ನೆಲೆ ಇನ್ನೂ ಐವರು ಉಗ್ರರಿಗಾಗಿ ತನಿಖಾಧಿಕಾರಿಗಳು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.