ಮುಂಬೈ

ಪತಿಯ ಸಾಲ ತೀರಿಸಲು ಪತ್ನಿಯಿಂದ ಲೈಂಗಿಕ ಸುಖ ಕೇಳಿದ ಜಾತಿ ಪಂಚಾಯತ್‌

Pinterest LinkedIn Tumblr

Sexual Harrasment-700ಮುಂಬಯಿ: ಆರು ಲಕ್ಷ ರೂ.ಗಳ ಸಾಲ ತೀರಿಸಲು ಪತಿ ವಿಫ‌ಲವಾದದ್ದಕ್ಕೆ ಜಾತಿ ಪಂಚಾಯತ್‌ನ ಎಂಟು ಪಂಚರು ಆತನ ಪತ್ನಿಯಿಂದ ಲೈಂಗಿಕ ಸುಖ ಒತ್ತಾಯಿಸಿದ  ಆಘಾತಕಾರಿ ಘಟನೆ ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯಿಂದ ವರದಿಯಾಗಿದೆ.

ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಕರ್ತರೋರ್ವರ ಸಕಾಲಿಕ ಪ್ರವೇಶದಿಂದಾಗಿ ಸಾಲಗಾರನ  ಪತ್ನಿಯ ಮಾನ ಹರಾಜಾಗುವುದು ತಪ್ಪಿದೆಯಲ್ಲದೆ ಈ ದಂಪತಿಯ ಮೇಲೆ ಹೇರಲಾಗಿದ್ದ ಜಾತಿ ಬಹಿಷ್ಕಾರದ ಅಮಾನುಷ ಶಿಕ್ಷೆಯೂ ರದ್ದಾಗಿದೆ. ಮಾತ್ರವಲ್ಲದೆ ಈ ರೀತಿಯ ಅನೈತಿಕ ಕ್ರಮಕ್ಕೆ ಮುಂದಾಗಿದ್ದ ಆ ಜಾತಿ ಪಂಚಾಯತನ್ನೇ ಬರ್ಖಾಸ್ತುಗೊಳಿಸಲಾಗಿದೆ.

ಮರಾಠವಾಡಾ ದ ಪರ್ಭನಿ ಜಿಲ್ಲೆಯ ಸೆಳು ಎಂಬ ಗ್ರಾಮದ ವಾಸಿಗಳಾಗಿರುವ ದಂಪತಿ ದೀಪಕ್‌ ಭೋರೆ ಮತ್ತು ಆತನ ಪತ್ನಿಯೇ ಈ ಅಮಾನುಷ ಕಿರುಕುಳಕ್ಕೆ ಒಳಗಾದವರು. ಇವರು ಗೊಂಧಾಲೀ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ ಸಮುದಾಯದ ಜಾತಿ ಪಂಚಾಯತ್‌ನಿಂದ ದೀಪಕ್‌ ಭೋರೆ 9 ಲಕ್ಷ ರೂ. ಸಾಲ ಪಡೆದಿದ್ದ. ಈ ಪೈಕಿ 2.5 ಲಕ್ಷ ರೂ.ಗಳನ್ನು ಆತ ಮರು ಪಾವತಿಸಿದ್ದ. ಬಾಕಿ ಸಾಲ ತೀರಿಕೆಗಾಗಿ ಆರು ಲಕ್ಷ ರೂ.ಗಳನ್ನು ಏಕಗಂಟಿನಲ್ಲಿ ಕೊಡಬೇಕು ಎಂದು ಜಾತಿ ಪಂಚಾಯತ್‌ನ ಪಂಚರು ಆಗ್ರಹಿಸಿದ್ದರು. ಆದಕ್ಕೆ ದೀಪಕ್‌ ಭೋರೆ ಒಪ್ಪಲಿಲ್ಲ.

ಸಿಟ್ಟಿಗೆದ್ದ ಪಂಚರು ದೀಪಕ್‌ ಭೋರೆ ಇಲ್ಲದಿದ್ದಾಗ ಆತನ ಮನೆಗೆ ನುಗ್ಗಿ ಆತನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದರು. ಪತಿಯ ಸಾಲ ತೀರಿಸಲು ನೀನು ನಮಗೆ ಲೈಂಗಿಕ ಸುಖ ಕೊಡಬೇಕು ಎಂದವರು ಒತ್ತಾಯಸಿದರು. ಈ ದಂಪತಿಯ ಮೇಲೆ ಜಾತಿ ಬಹಿಷ್ಕಾರ ಹಾಕಿರುವುದರ ಸಂಕೇತವಾಗಿ ಪಂಚನೊಬ್ಬ ತನ್ನ ಚಪ್ಪಲಿಯನ್ನು ದೀಪಕ್‌ ಭೋರೆ ಮನೆ ಬಾಗಿಲಿಗೆ ಕಟ್ಟಿದ.

ಸಾಲ ತೀರಿಸಲು ದೀಪಕ್‌ ಭೋರೆಗೆ ಸಮುದಾಯದ ಯಾರೂ ನೆರವಾಗಬಾರದು; ಆತನ ಕುಟುಂಬದೊಂದಿಗೆ ಯಾವುದೇ ಸಂಬಂಧ ಹೊಂದಕೂಡದು; ಆತನ ಕುಟುಂಬಕ್ಕೆ ಜಾತಿ ಬಹಿಷ್ಕಾರ ಹೇರಲಾಗಿದೆ ಎಂದು ಪಂಚರು ಗೋಂಧಾಲಿ ಸಮುದಾಯದವರಿಗೆಲ್ಲ ಅಪ್ಪಣೆ ಕೊಡಿಸಿದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಭವಿಷ್ಯದಲ್ಲಿನ ಅಪಾಯವನ್ನು ಗ್ರಹಿಸಿದ ದೀಪಕ್‌ ಭೋರೆ ಮತ್ತು ಆತನ ಪತ್ನಿ ಒಡನೆಯೇ ನಾಶಿಕ್‌ಗೆ ತೆರಳಿದರು. ಅಲ್ಲಿ ಭೋರೆ ತನ್ನ ತಾಯಿಯ ಅಣ್ಣ ಸುಭಾಶ್‌ ಉಗಳೆ ಅವರನ್ನು ಕಂಡು ವಿಷಯ ತಿಳಿಸಿದ. ಅವರು ಕೂಡಲೇ ಎಂಎಎನ್‌ಎಸ್‌ ಕಾರ್ಯಕರ್ತ ಕಷ್ಣ ಚಾಂದ್‌ ಗುಡೆ ಅವರನ್ನು ಭೇಟಿಯಾದರು. ಚಾಂದ್‌ ಗುಡೆ ಕೂಡಲೇ ಕಾರ್ಯೋನ್ಮುಖರಾಗಿ ದಂಪತಿಯ ರಕ್ಷಣೆಗೆ ಮುಂದಾದರು.

ಪರಿಣಾವಾಗಿ ದೀಪಕ್‌ ಭೋರೆಯ ಜಾತಿ ಪಂಚಾಯತ್‌ ನ ಎಲ್ಲ 8 ಪಂಚರು ರಾಜೀನಾಮೆ ನೀಡಿದ್ದಲ್ಲದೆ ಇಡಿಯ ಪಂಚಾಯತನ್ನೇ ಬರ್ಖಾಸ್ತುಗೊಳಿಸಿದರು.

ಸಾಲ ಮರುಪಾವತಿಗಾಗಿ ಅಮಾಯಕ ವಿವಾಹಿತ ಮಹಿಳೆಯಿಂದ ಲೈಂಗಿಕ ಸುಖ ಅಪೇಕ್ಷಿಸುವುದು, ಜಾತಿ ಬಹಿಷ್ಕಾರ ಹಾಕುವುದು ಅತ್ಯಂತ ಅಮಾನುಷ, ಅನೈತಿಕ ಕ್ರಮವೆಂದು ಪಂಚರಿಗೆ ಮನದಟ್ಟು ಮಾಡಿಕೊಟ್ಟು ಪ್ರಕರಣಕ್ಕೆ ಸುಖಾಂತ್ಯ ಕಾಣಿಸಲಾಯಿತು.
-ಉದಯವಾಣಿ

Write A Comment