ಮುಂಬೈ

ಶೀನಾ ಕೊಲೆ ತನಿಖೆ ಯಥಾ ಪ್ರಕಾರ ಮುಂದುವರಿಯಲಿದೆ: ಅಹ್ಮದ್ ಜಾವೇದ್

Pinterest LinkedIn Tumblr

ahmed-javedಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎಲ್ಲಾ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂಬ ವರದಿಯನ್ನು ಮುಂಬೈಯ ನೂತನ ಪೊಲೀಸ್ ಆಯುಕ್ತ ಅಹ್ಮದ್ ಜಾವೇದ್ ತಳ್ಳಿ ಹಾಕಿದ್ದಾರೆ.

ಮುಂಬೈ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ವರ್ಗವಾಗುವುದಿಲ್ಲ. ಶೀನಾ ಬೋರಾ ಕೊಲೆ ತನಿಖೆ ಮೊದಲಿನಂತೆಯೇ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇಂದು ಬೆಳಗ್ಗೆ ಆದೇಶ ಹೊರಡಿಸಿದ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ರಾಕೇಶ್ ಮರಿಯಾ ಅವರಿಗೆ ಬಡ್ತಿ ನೀಡಿ ಗೃಹ ಕಾವಲು ಪಡೆಯ ಮಹಾ ನಿರ್ದೇಶಕರಾಗಿ ನೇಮಿಸಿದೆ.

ಶೀನಾ ಕೊಲೆ ಆರೋಪದಲ್ಲಿ ಇಂದ್ರಾಣಿ ಮುಖರ್ಜಿ ಮತ್ತು ಇತರ ಇಬ್ಬರು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಇನ್ನು ಕೆಲವು ವಾರಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವುದರಲ್ಲಿದ್ದರು. ಆಗಲೇ ರಾಕೇಶ್ ಮರಿಯಾ ಅವರನ್ನು ವರ್ಗಾಯಿಸಿದ್ದು ರಾಜ್ಯದ ಇಲಾಖೆಯ ಅಧಿಕಾರಿಗಳಿಗೆ ಅಚ್ಚರಿಯನ್ನುಂಟುಮಾಡಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇಂದು ಜಪಾನ್ ಗೆ ಪ್ರವಾಸಕ್ಕೆ ಹೊರಡುವ ಸ್ವಲ್ಪ ಹೊತ್ತಿಗೆ ಮುಂಚೆ ಆದೇಶ ಹೊರಬಿದ್ದಿದೆ.ರಾಕೇಶ್ ಮರಿಯಾ ಅವರ ವರ್ಗಾವಣೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದೊಂದು ಸಾಮಾನ್ಯ ವರ್ಗಾವಣೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಕೆ.ಪಿ.ಬಕ್ಷಿ ತಿಳಿಸಿದ್ದಾರೆ. ಆದರೆ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಮಹಾರಾಷ್ಟ್ರ ಸರ್ಕಾರಕ್ಕೆ ಇಷ್ಟವಿರಲಿಲ್ಲ ಎಂದು ತಿಳಿದುಬಂದಿದೆ.

Write A Comment