ಮುಂಬೈ: ಬಿಸಿಸಿಐ ನ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಶ್ರೀನಿವಾಸನ್ ಅವರ ಉಪಸ್ಥಿತಿ ಇದ್ದ ಕಾರಣ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಕಾರ್ಯಕಾರಿಣಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಬಿಸಿಸಿಐ ನ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರ ಸ್ಥಾನಮಾನದ ಬಗ್ಗೆ ಕಾನೂನಾತ್ಮಕ ಸ್ಪಷ್ಟತೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಜಗಮೋಹನ್ ದಾಲ್ಮಿಯಾ ಸಭೆಯನ್ನು ಮುಂದೂಡಿದ್ದಾರೆ. ಶ್ರೀನಿವಾಸನ್ ಅವರು ತಮಿಳುನಾಡು ಕ್ರಿಕೆಟ್ ಸಮಿತಿಯ ಪ್ರತಿನಿಧಿಯಾಗಿ ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಲು ನಿರ್ಧರಿಸಿದ ನಂತರ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.
ಐಪಿಎಲ್ ಹಗರಣದ ಬಗ್ಗೆ ತೀರ್ಪು ನೀಡಿದ್ದ ಜಸ್ಟೀಸ್ ಲೋಧಾ ಸಮಿತಿ ಚೆನ್ನೈ ಸುಪ್ಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಿತ್ತು. ಎರಡು ತಂಡಗಳ ಅನುಪಸ್ಥಿತಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ ನಾಲ್ಕು ಸದಸ್ಯರ ಸಮಿತಿ ನೀಡಿದ್ದ ವರದಿ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಬೇಕಿತ್ತು. ಆದರೆ ಶ್ರೀನಿವಾಸನ್ ಉಪಸ್ಥಿತಿಯಿಂದಾಗಿ ಜಗಮೋಹನ್ ದಾಲ್ಮಿಯಾ ಸಭೆಯನ್ನು ರದ್ದುಗೊಳಿಸಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅವರ ಹೆಸರು ಕೇಳಿಬಂದಿದರಿಂದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಶ್ರೀನಿವಾಸನ್ ಅವರ ಉಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.