ಕರ್ನಾಟಕ

ನಕಲಿ ಡಾಕ್ಟರೇಟ್‌ ನೀಡಿದರೆ ಎಫ್‌ಐಆರ್‌: ಸಚಿವ ಅಶ್ವತ್ಥನಾರಾಯಣ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಂಸ್ಥೆಗಳು ನಕಲಿ ಅಥವಾ ಅನಧಿಕೃತ ಪದವಿ, ಗೌರವ ಡಾಕ್ಟರೇಟ್‌ ನೀಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸುವಂತೆ 2021ರ ಫೆಬ್ರವರಿ 26ರಂದು ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಡಾ. ತೇಜಸ್ವಿನಿ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 23 ಸರ್ಕಾರಿ ವಿಶ್ವವಿದ್ಯಾಲಯಗಳಿವೆ. ಅವುಗಳು ಈವರೆಗೆ 1,856 ಜನರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿವೆ. 21 ಖಾಸಗಿ ವಿಶ್ವವಿದ್ಯಾಲಯಗಳಿದ್ದು ಅದರಲ್ಲಿ ಐದು ವಿಶ್ವವಿದ್ಯಾಲಯಗಳು 23 ಮಂದಿಗೆ ಗೌರವ ಡಾಕ್ಟರೇಟ್‌ ನೀಡಿವೆ ಎಂದರು.

ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್‌ ನೀಡುವುದಕ್ಕೆ ನಿಯಮಾವಳಿಗಳಿವೆ. ಅವುಗಳ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ನಡೆಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ. ವಿಶ್ವವಿದ್ಯಾಲಯಗಳು ಶಿಫಾರಸು ಮಾಡುವ ಹೆಸರುಗಳನ್ನು ರಾಜ್ಯಪಾಲರು ನೇಮಿಸುವ ತಜ್ಞರ ಸಮಿತಿಯ ಪರಿಶೀಲನೆಗೂ ಒಳಪಡಿಸಲಾಗುತ್ತದೆ. ಈವರೆಗೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್‌ ನೀಡುವುದರಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಉತ್ತರಿಸಿದರು.

 

Comments are closed.