ಕರಾವಳಿ

ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ

Pinterest LinkedIn Tumblr

ಉಡುಪಿ: ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಸರಕಾರಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಶನಿವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಮೃತರನ್ನು ಸಾಲಿಗ್ರಾಮದ ಪಾರಂಪಳ್ಳಿ ನಿವಾಸಿ ಶ್ರೀಕಾಂತ್ ಎಂಬವರ ಪತ್ನಿ ಹಾಗೂ ಮಣೂರು ಪಡುಕೆರೆಯ ಜಲಜ ಮತ್ತು ಬಾಬು ದಂಪತಿ ಪುತ್ರಿ ಉಷಾ (26) ಎಂದು ಗುರುತಿಸಲಾಗಿದೆ.

ಇವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಉಷಾ ಸ್ಥಳೀಯ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದಳು. ಗರ್ಭಿಣಿ ಯಾಗಿದ್ದ ಉಷಾ ಅವರ ಹೆರಿಗೆ ದಿನಾಂಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಕೆ, ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೆ.23ರಂದು ದಾಖಲಾಗಿದ್ದರು. ಇಂದು ಬೆಳಗ್ಗೆ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದರು. ಗಂಡು ಮಗುವಿಗೆ ಜನ್ಮ ನೀಡಿದ ಉಷಾ ಅವರಲ್ಲಿ ಫೀಡ್ಸ್ ಕಾಣಿಸಿಕೊಂಡಿತ್ತೆ ನ್ನಲಾಗಿದೆ. ಈ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಉಷಾ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಟುಂಬಸ್ಥರು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ ದಿಂದ ಉಷಾ ಮೃತಪಟ್ಟಿರುವುದಾಗಿ ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಜನ್ ಡಾ. ಮದುಸೂದನ್ ನಾಯಕ್, ಡಿಎಚ್‌ಓ ಡಾ.ನಾಗಭೂಷಣ ಉಡುಪ, ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ‘ಆಸ್ಪತ್ರೆ ದಾಖಲಾದ ಗರ್ಭಿಣಿಯಲ್ಲಿ ಹೆರಿಗೆ ನೋವು ಕಾಣಿಸಿ ಕೊಳ್ಳದ ಹಿನ್ನೆಲೆಯಲ್ಲಿ ವೈದ್ಯರು ಎರಡು ಬಾರಿ ಇಂಜೆಕ್ಷನ್ ನೀಡಿದ್ದರು. ಈ ಮಧ್ಯೆ ಮಗುವಿನ ಹೃದಯ ಬಡಿತದಲ್ಲಿ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ಆರೋಗ್ಯ ವಾಗಿದ್ದ ತಾಯಿಯಲ್ಲಿ ತಕ್ಷಣ ಫೀಡ್ಸ್ ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಆಕೆ ಮೃತಪಟ್ಟಿದ್ದಾಳೆ. ಮಗು ಆರೋಗ್ಯವಂತವಾಗಿದೆ’ ಎಂದು ಡಾ.ಮಧುಸೂದನ್ ನಾಯಕ್ ತಿಳಿಸಿದರು.

ಆದರೆ ಪಟ್ಟು ಬಿಡದ ಪ್ರತಿಭಟನಕಾರರು, ಚಿಕಿತ್ಸೆ ನೀಡಿದ ವೈದ್ಯರನ್ನು ಸ್ಥಳಕ್ಕೆ ಕರೆಸಬೇಕು ಹಾಗೂ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಕಾರರು ಸಂಜೆಯವರೆಗೂ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ.

‘ಕುಟುಂಬದವರಿಗೆ ಸಾವಿನಲ್ಲಿ ಸಂಶಯ ಇದ್ದರೆ ಪೊಲೀಸರಿಗೆ ದೂರು ನೀಡಲಿ. ಅದರಂತೆ ತಹಶೀಲ್ದಾರ್ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಲಿದ್ದಾರೆ. ಆ ವರದಿ ಆಧಾರದಲ್ಲಿ ಸರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ’
-ಡಾ.ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್

Comments are closed.