ಕರ್ನಾಟಕ

ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ; ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ನೋವಿನ‌‌ ಮಾತು

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಬಲವಂತ, ಆಮಿಷವೊಡ್ಡಿ ಮತಾಂತರ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತಾಂತರ ನಿಷೇಧಕ್ಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಜನರ ಮುಗ್ಧತೆ ಅಥವಾ ಇನ್ನಿತರ ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ಯಾವುದೇ ಸಂಘಟನೆ ಅಥವಾ ಸಂಸ್ಥೆಗಳು ಮತಾಂತರ ಮಾಡುವುದರಿಂದ, ಸಮಾಜದಲ್ಲಿ ಶಾಂತಿ ಕದಡುವ ಸಂಭವವೂ ಇದೆ. ಆಮಿಷ ಒಡ್ಡಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಯಲ್ಲಿ ಒಂದು ವ್ಯವಸ್ಥಿತ ಜಾಲವೇ ಇದ್ದು ಅದನ್ನು ಯಾವರೀತಿ ತಡೆಗಟ್ಟಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕಾನೂನನ್ನು ತರಲಾಗುವುದು ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಮತಾಂತರದ ಪಿಡುಗು ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ವ್ಯಾಪಿಸಿದೆ. ಬೇರೆ ಬೇರೆ ರಾಜ್ಯಗಳು ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆಗಳನ್ನು ತಂದಿವೆ. ನಮ್ಮಲ್ಲೂ ಅಂತಹ ಕಾಯ್ದೆಗಳನ್ನು ಜಾರಿಗೆ ತರಬೇಕು’ ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ಗೂಳಿಹಟ್ಟಿ ಶೇಖರ್‌ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಮಂದಿ ಮತಾಂತರ ಆಗಿದ್ದಾರೆ. ನನ್ನ ತಾಯಿ ಸಹ ಮತಾಂತರಗೊಂಡಿದ್ದಾರೆ. ಕುಂಕುಮ ಇಡಬಾರದು ಹಾಗೂ ದೇವರ ಫೋಟೋ ಇಡಬಾರದು ಎಂದು ಅವರ ಬ್ರೈನ್‌ ವಾಶ್‌ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿವಿಮಾತು ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಇಡೀ ಕುಟುಂಬ ಮುಜುಗರ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

 

Comments are closed.