ಕರ್ನಾಟಕ

ರಾಜ್ಯದಲ್ಲಿ ಈ ವರ್ಷ 220 ಬಾರಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

Pinterest LinkedIn Tumblr

ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆಯಾಗುತ್ತಿದ್ದು ಈ ವರ್ಷ 220 ಬಾರಿ ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸ್‌ ಇಲಾಖೆ ಕಠಿಣ ನಿಗಾ ಇರಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನಸಭೆ ಕಲಾಪದ ಸಂದರ್ಭ ಶೂನ್ಯವೇಳೆಯಲ್ಲಿ ಶಾಸಕ ಯು.ಟಿ. ಖಾದರ್‌ ವಿಷಯ ಪ್ರಸ್ತಾವಿಸಿದಾಗ ಗೃಹ ಸಚಿವರು ಉತ್ತರಿಸಿದರು.

2020ರಲ್ಲಿ 256 ಮತ್ತು 2021ರಲ್ಲಿ 220 ಸ್ಯಾಟಲೈಟ್‌ ಫೋನ್‌ ಬಳಕೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ಜತೆಗೆ ರಾಜ್ಯದ ಆಂತರಿಕ ಭದ್ರತೆ ವಿಭಾಗಗಳು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿವೆ ಎಂದರು.

ಕರಾವಳಿಯಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ ಸುದ್ದಿ ಆಗಾಗ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮ ವರದಿ ಮಾಡುತ್ತಿವೆ ಮತ್ತು ಕೆಲವೊಮ್ಮೆ ಅಮಾಯಕರ ಹೆಸರು ದುರ್ಬಳಕೆಯಾಗುತ್ತಿದೆ. ಈ ವಿಚಾರವಾಗಿ ದಕ್ಷಿಣ ಕನ್ನಡ ಭಾಗದಲ್ಲಿ ಗೊಂದಲಗಳಿವೆ. ಕರಾವಳಿ ಶಾಂತಿಯಿಂದ ಇರಲು ಸರಕಾರ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಖಾದರ್‌ ಒತ್ತಾಯಿಸಿದರು.

2011ರಲ್ಲಿ ಮುಂಬಯಿಯಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತದಲ್ಲಿ ಮತ್ತು ಭಾರತೀಯ ಸ್ವಾಮ್ಯದ ಸಾಗರ ಪ್ರದೇಶದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ ನಿಷೇಧಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮತ್ತು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯ ವಾದ್ದರಿಂದ ತೀವ್ರ ನಿಗಾ ಇರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಇದರಿಂದ ಗಾಬರಿಪಡುವ ಅಗತ್ಯವಿಲ್ಲ. ಹಲವು ವಿಷಯಗಳನ್ನು ನೇರವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

Comments are closed.