ಕರ್ನಾಟಕ

ಕೊಡಗು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಸಾವು !

Pinterest LinkedIn Tumblr

ಕೊಡಗು: ಕೊಡಗು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. 16 ಸೋಂಕಿತರು ಮೃತಟ್ಟಿರುವುದನ್ನು ಸ್ವತಃ ಜಿಲ್ಲಾಡಳಿತವೇ ಸ್ಪಷ್ಟಪಡಿಸುತ್ತಿದೆ. ಆದರೂ 16 ಸೋಂಕಿತರು ಮೃತಪಟ್ಟಿದ್ದಾದರೂ ಯಾಕೆ ಎನ್ನೋದನ್ನು ಮಾತ್ರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೀನ್ ಆಗಲಿ, ಸರ್ಜನ್ ಆಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಷ್ಟಪಡಿಸುತ್ತಿಲ್ಲ. ಆದರೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೃತ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನಾಲ್ವರು ವೈದ್ಯರನ್ನು ಕರೆದು ತುರ್ತು ಸಭೆ ನಡೆಸಿದ್ದಾರೆ.

ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕರೆದು ತುರ್ತು ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು, ಮೃತರೆಲ್ಲರೂ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎನ್ನುತ್ತಿದ್ದಾರೆ.

ಕೊಡಗಿನಲ್ಲಿ ಕಳೆದ ಎರಡು ವಾರಗಳಿಂದ ಸೋಂಕಿತರು ಸಂಖ್ಯೆ ಜಾಸ್ತಿಯಾಗುತ್ತಿದೆ. ಜೊತೆಗೆ ಸೋಂಕಿನಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆಯಾದರೂ ಪ್ರತೀ ದಿನ ಐದರಿಂದ ಆರು ಸೋಂಕಿತರು ಸಾವನ್ನಪ್ಪುತ್ತಿದ್ದರು. ಆದರೆ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ ಅಂದರೆ 24 ಗಂಟೆಯಲ್ಲಿ 16 ಜನರು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮತ್ತೊಂದೆಡೆ ಕೊಡಗಿನಲ್ಲಿ ಕೋವಿಡ್ ಹರಡದಂತೆ ಜನರನ್ನು ನಿಯಂತ್ರಿಸಲು ಹಗಲು ರಾತ್ರಿ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ 55 ಪೊಲೀಸರಿಗೆ ಕೋವಿಡ್ ದೃಢಪಟ್ಟಿದೆ. ಆದರೆ ಎಲ್ಲರೂ ಆರೋಗ್ಯವಾಗಿದ್ದು, ಸದ್ಯ ಎಲ್ಲರೂ ಅವರವರ ಮನೆಯಲ್ಲಿ ಹೋಂ ಕ್ವಾರಂಟೈನ್ ಇದ್ದಾರೆ ಎಂದು ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕು ಸ್ಫೋಟಗೊಳ್ಳುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಲಾಕ್ ಡೌನ್ ಮೊರೆ ಹೋಗಿದೆ. ಮಂಗಳವಾರ ಮಧ್ಯಾಹ್ನದಿಂದ ಕಂಪ್ಲೀಟ್ ಲಾಕ್ ಡೌನ್ ಜಾರಿಯಾಗಿದೆ. ರಾಜ್ಯ ಸರ್ಕಾರ ಕರ್ಫ್ಯೂ ಜಾರಿ ಮಾಡಿರುವ ದಿನದವರೆಗೆ ಕೊಡಗಿನಲ್ಲಿ ಲಾಕ್ ಡೌನ್ ಮುಂದುವರೆಯಲಿದೆ. ಆದರೆ ಅಗತ್ಯ ವಸ್ತುಗಳು ಖರೀದಿಗಾಗಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಅವಕಾಶ ನೀಡಲಾಗಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆಯ ನಂತರ ಸಂಫೂರ್ಣ ಲಾಕ್ ಡೌನ್ ಆಗುತಿದ್ದ ಹಿನ್ನೆಲೆ ಮಡಿಕೇರಿಯಲ್ಲಿ ಸಾವಿರಾರು ವಾಹನಗಳು ಅಗತ್ಯ ವಸ್ತುಗಳ ಖರೀದಿಗೆ ತಮ್ಮ ವಾಹನಗಳಲ್ಲಿ ಹೊರಗೆ ಬಂದಿದ್ದರು. ಹೀಗಾಗಿ ಮಡಿಕೇರಿಯ ಪ್ರಮುಖವಾದ ರಸ್ತೆಗಳೆಲ್ಲಾ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರಿಗೆ ಟ್ರಾಫಿಕ್ ಫ್ರೀ ಮಾಡೋದೆ ರಿಸ್ಕ್ ಆಗಿ ಹೋಗಿತ್ತು. ಜನರು ಕೂಡ ಸಾಮಾಜಿಕ ಅಂತರ ಮರೆತು ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದರು. ಇನ್ನೂ ಕೆಲವೆಡೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ಅಗತ್ಯ ವಸ್ತುಗಳ ಖರೀದಿಸಿದ್ದರು.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಒಂದೆಡೆ ಸೋಂಕು ಮಿತಿಮೀರಿ ಸಾವಿನ ನರ್ತನವಾಡುತ್ತಿದ್ದರೆ, ಜಿಲ್ಲಾಡಳಿತ ಲಾಕ್ ಡೌನ್ ಮೊರೆಹೋಗಿದೆ. ಸೋಂಕು ನಿಯಂತ್ರಿಸುವಲ್ಲಿ ಇದು ಎಷ್ಟರ ಮಟ್ಟಿಗೆ ಪೂರಕವಾಗಲಿದೆ ನೋಡಬೇಕಾಗಿದೆ.

Comments are closed.