ಕರ್ನಾಟಕ

‘ಸಿಡಿಯಲ್ಲಿರೋ ಯುವತಿ ಗೊತ್ತಿಲ್ಲ, ತಲೆಮರೆಸಿಕೊಂಡಿರೋ ವ್ಯಕ್ತಿಗಳು ಗೊತ್ತಿಲ್ಲ, ದಿನೇಶ್ ಕಲ್ಲಹಳ್ಳಿ ಯಾರೆಂದು ಗೊತ್ತೇ ಇಲ್ಲ’; ಇದು ಎಸ್​ಐಟಿ ಮುಂದೆ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ !

Pinterest LinkedIn Tumblr

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನ ಎಸ್​ಐಟಿ ಚುರುಕುಗೊಳಿಸಿದೆ. ಈ ನಡುವೆ ರಮೇಶ್ ಜಾರಕಿಹೊಳಿಯನ್ನ ಸುದೀರ್ಘ ವಿಚಾರಣೆ ಮಾಡಿರುವ ತನಿಖಾಧಿಕಾರಿ ಮುಂದೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಯುವಕರ ಹುಡುಕಾಟ ಮುಂದುವರೆದಿದ್ದು, ಯುವತಿಯ ಪ್ರಿಯಕರನ ಹೇಳಿಕೆ ದಾಖಲಿಸಲಾಗಿದೆ.

ಮಾಜಿ ವಿಧಾನಸಭಾ ಸದಸ್ಯ ನಾಗರಾಜ್ ಜೊತೆ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸಂಜೆ 5 ಗಂಟೆಯಿಂದ 8:20ರವರೆಗೂ ವಿಚಾರಣೆ ಮಾಡಲಾಗಿತ್ತು. ಐಪಿಎಸ್ ಅಧಿಕಾರಿ ಅನುಚೇತ್ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, 65 ಪ್ರಶ್ನೆಗೆ 10 ಪುಟಗಳ ಉತ್ತರ ನೀಡಿದ್ದಾರೆ. ರಮೇಶ್ ಜಾರಕಿಹೊಳಿಯ ಪ್ರತಿ ಹೇಳಿಕೆಯನ್ನ ಎಸಿಪಿ ಧರ್ಮೇಂದ್ರ ದಾಖಲಿಸಿಕೊಂಡಿದ್ದಾರೆ‌‌.‌ ಈ ನಡುವೆ ಸಿಡಿಯಲ್ಲಿರೋ ಯುವತಿ ಗೊತ್ತಿಲ್ಲ, ತಲೆಮರೆಸಿಕೊಂಡಿರೋ ವ್ಯಕ್ತಿಗಳು ಗೊತ್ತಿಲ್ಲ, ದಿನೇಶ್ ಕಲ್ಲಹಳ್ಳಿ ಯಾರೆಂದು ಗೊತ್ತೇ ಇಲ್ಲ ಎಂದು ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ‌‌.

ಬಹುತೇಕ‌ ಪ್ರಶ್ನೆಗೆ ಗೊತ್ತಿಲ್ಲ ಎಂದಿರುವ ರಮೇಶ್ ಜಾರಕಿಹೊಳಿ, ಕೆಲ ಪ್ರಶ್ನೆಗಳಿಗೆ ವಕೀಲರೊಂದಿಗೆ ಚರ್ಚಿಸಿ ಹೇಳಿಕೆ ಕೊಡುವುದಾಗಿ ಹೇಳಿದ್ದಾರೆ. ಇನ್ನು ಸಿಡಿ ಗ್ಯಾಂಗ್​ನವರಾರೂ ನನ್ನನ್ನು ಭೇಟಿ ಮಾಡಿಲ್ಲ. ನಾನು ಯಾರಿಗೂ ಹಣವನ್ನೇ ನೀಡಿಲ್ಲ. ಪ್ರಕರಣದಲ್ಲಿ ಯಾವ ಮಹಾ ನಾಯಕನ‌ ಪಾತ್ರದ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ರಮೇಶ್ ಜಾರಕಿಹೊಳಿಯ ಪ್ರತಿ ಹೇಳಿಕೆಯನ್ನೂ ಸಹ ತನಿಖಾಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಚಾರಣೆಗೆ ಕರೆದರೆ ಮತ್ತೆ ಬರಬೇಕೆಂದು ತನಿಖಾಧಿಕಾರಿ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ದಿನೇಶ್ ಕಲ್ಲಹಳ್ಳಿಗೆ ನೋಟೀಸ್ ನೀಡಲು ಎಸ್​ಐಟಿ ಸಿದ್ದತೆ ನಡೆಸಿದೆ. ಇದರ ನಡುವೆ ಸಿಆರ್​ಪಿಸಿ 164 ಅಡಿ ಮ್ಯಾಜಿಸ್ಟ್ರೇಟ್ ಮುಂದೆ ಸಿಡಿಯಲ್ಲಿರೋ ಯುವತಿಯ ಪ್ರಿಯಕರನ ಹೇಳಿಕೆಯನ್ನ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ತಿಂಗಳಿಂದ ಯುವತಿ ಜೊತೆ ಕೆಲ ಯುವಕರು ಓಡಾಡ್ತಿದ್ದು, ತನ್ನ ಗೆಳತಿ ಜೊತೆ ಕೆಲ ಯುವಕರ ಒಡನಾಟ ಹಾಗೂ ಜೊತೆಯಲ್ಲಿರುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಸಿಡಿ ಗ್ಯಾಂಗ್ ಜೊತೆ ಪ್ರಿಯಕರನ ಸಂಪರ್ಕ ಇಲ್ಲ ಎಂಬುದು ವಿಚಾರಣೆ ವೇಳೆ ಸಾಬೀತಾಗಿದೆ. ಸಿಡಿ ವಿಚಾರ ಪ್ರಿಯಕರನಿಗೆ ತಿಳಿಯದ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ತಲೆಮರೆಸಿಕೊಂಡಿರೋ ವ್ಯಕ್ತಿಗಳ ಬ್ಯಾಂಕ್ ಅಕೌಂಟ್ ಗಳ ಮೇಲೂ ಎಸ್​ಐಟಿ ನಿಗಾ ವಹಿಸಿದೆ. ಈಗಾಗಲೇ ಅವರ ಅಕೌಂಟ್ ಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿರೋ ಎಸ್​ಐಟಿ, ಯಾವುದೇ ರೀತಿಯ ನಗದು ವ್ಯವಹಾರ ನಡೆಸದಂತೆ ಫ್ರೀಜ್ ಮಾಡಿದೆ. ಮಾರ್ಚ್ 7ರಿಂದ ಇಲ್ಲಿವರೆಗೂ ಯಾವುದೇ ವಹಿವಾಟು ಆಗಿಲ್ಲ. ಆನ್​ಲೈನ್ ಟ್ರಾನ್ಸಾಕ್ಷನ್ ನಡೆಸಿದರೆ ಸ್ಥಳ ಪತ್ತೆಯಾಗುವ ಆತಂಕ ಇದ್ದು, ಮೊಬೈಲ್ ಟವರ್ ಲೊಕೇಷನ್ ಪತ್ತೆಯಾಗುತ್ತೆ ಅನ್ನೋ ಭೀತಿ ಇದೆ. ಹೀಗಾಗಿ ಆನ್​ಲೈನ್ ವ್ಯವಹಾರ ಹಾಗೂ ಎಟಿಎಂಗೂ ಹೋಗದೆ ತಾಂತ್ರಿಕ ಉಪಾಯ ಬಳಸುತ್ತಿದ್ದಾರೆ.

ಯುವತಿಯೂ ಸಹ ಹಣ ಟ್ರಾನ್ಸಾಕ್ಷನ್ ನಡೆಸುತ್ತಿಲ್ಲ. ಯಾರ ಸುಳಿವೂ ಸಿಗದೆ ಎಸ್​ಐಟಿಯಿಂದ ಶೋಧ ಮುಂದುವರೆಸಿದೆ. ಹೀಗೆ ತಲೆಮರೆಸಿಕೊಂಡಿರುವ ಯುವಕನ ಅಣ್ಣನ ವಿಚಾರವಾಗಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ ಆಗಿದೆ. ಜೊತೆಗೆ ಸಂಪರ್ಕಿತ ವ್ಯಕ್ತಿಗಳ ವಿಚಾರಣೆ ಮುಂದುವರೆದಿದ್ದು, ಕೆಲ ಅಧಿಕೃತ ಸಾಕ್ಷಿಗಳಿಗಾಗಿ ಪರಿಶೀಲನೆ‌ ನಡೆಸಲಾಗುತ್ತಿದೆ.

Comments are closed.