ಕರಾವಳಿ

ಬಸವ ಜನ್ಮ ಭೂಮಿ ಪ್ರತಿಷ್ಠಾನದ ದಶಮಾನೋತ್ಸವ ಮತ್ತು ವಚನ ವೈಭವ :ರಾಜ್ಯ ಮತ್ತು ರಾಷ್ಟೀಯ ಪ್ರಶಸ್ತಿ ಪ್ರದಾನ ಸಮಾರಂಭ

Pinterest LinkedIn Tumblr

ಮಂಗಳೂರು : ವಚನ ಎನ್ನುವುದು ಪವಿತ್ರ ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆ.ಅಂತಹ ಪ್ರಜಾ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಅನಾವರಣ ಗೊಳಿಸಿದ ಬಸವಣ್ಣನವರ ಜನ್ಮ ಸ್ಥಳ ಬಸವನ ಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯವಾಗಿದೆ ಎಂದು ಖ್ಯಾತ ಸಂಶೋದಕರಾದ ಡಾ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ಹೇಳಿದರು.

ನಗರದ ಬೆಂಗಳೂರು ರೆಸ್ಟೋರೆಂಟ್ ಸಭಾಂಗಣದಲ್ಲಿ ಬಸವನ ಬಾಗೇವಾಡಿಯ ಬಸವ ಜನ್ಮ ಭೂಮಿ ಪ್ರತಿಷ್ಠಾನದ ದಶಮಾನೋತ್ಸವ,ವಚನ ವೈಭವ ಮತ್ತು ರಾಷ್ಟೀಯ ಬಸವ ವಿಭೂಷಣ ರಾಜ್ಯ ಬಸವ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲನೆಗೈದು ಮಾತನಾಡಿದ ಅವರು, ಪ್ರತಿಷ್ಠಾನವು ವಿವಿಧ ಕ್ಷೇತ್ರದಲ್ಲಿ ಕೃಷಿಗೈಯುತ್ತಿರುವ ರಾಜ್ಯ ಮತ್ತು ಅಂತರಾಜ್ಯದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಮಹತ್ವದ ಕಾರ್ಯ ಮಾಡಿದೆ.ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ನಾವು ಸಮಾಜ ಮುಖಿಯಾದಾಗ ಗೌರವಾದರಗಳು ತನ್ನಷ್ಟಕ್ಕೆ ತಾನೇ ಹುಡುಕಿಕೊಂಡು ಬರುತ್ತವೆ ಎಂದರು.

ಮುಖ್ಯ ಅತಿಥಿಯಾಗಿರುವ ಚಲನ ಚಿತ್ರನಟ ಡಾ ಆಡುಗೋಡಿ ಶ್ರೀನಿವಾಸ ಮಾತನಾಡಿ ಜೀವನದಲ್ಲಿ ಸಾಧಿಸಬೇಕಾದರೆ ಪ್ರತಿಯೊಬ್ಬರಲ್ಲಿ ಸಾಧಿಸುವ ಛಲವಿರಬೇಕು.ಕಠಿಣ ಪರಿಶ್ರಮದಿಂದ ಬೆವರು ಸುರಿಸಿದಾಗ ಬಲ ಬರುತ್ತದೆ.ಸತ್ಯ ಹಾಗೂ ಸನ್ಮಾರ್ಗದೆಡೆಗೆ ಸಾಗಿದಾಗ ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತದೆ. ಆಗ ಪ್ರಶಸ್ತಿ ಸನ್ಮಾನ ದೊರಕಿ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.

ಬಾಗಲಕೋಟೆಯ ಸಾಹಿತಿ ಡಾ ಪ್ರಕಾಶ ಕಾಡೆ ಅವರು ಮಾತನಾಡಿ ಸಾಧನೆಗೆ ಅಡಿಪಾಯ ಹಾಕುವುದು ಕಷ್ಟವೇ ಹೊರತು ಸುಲಭವಲ್ಲ. ಯಾವ ಸಾಧಕನೂ ಒಮ್ಮೆಲೆ ಉತ್ತಂಗಕ್ಕೇರಲಾರನು.ಅಂತಹವರು ಕಷ್ಟದ ಹಾದಿಯನ್ನು ಸವೆದು ಒಳ್ಳೆಯ ಹೆಸರು ಗಳಿಸುತ್ತಾರೆ. ಕಾಯಕ ಮಾಡುತ್ತ ಕೈಲಾಸ ಕಂಡಾಗ ಭಾಗ್ಯದ ಬಾಗಿಲು ತೆರೆದು ಕೊಳ್ಳುತ್ತದೆ.ಆಗ ಅವರ ಕೀರ್ತಿ ಬಾನಗಲ ಹರಡಿ ಹೆಸರು ಸ್ಥಿರ ಸ್ಥಾಯಿಗೊಳಿಸುತ್ತದೆ. ಅಂತಹ ಮಾದರಿ ಬದುಕು ನಮ್ಮದಾದರೆ ನಾವು ಭಾಗ್ಯ ಶಾಲಿಗಳೇ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಬಲೇಶ್ವರ ಬೃಹನ್ಮಠದ ಡಾ ಮಹದೇವ ಶಿವಾಚಾರ್ಯರು ಮಾತನಾಡುತ್ತ ಪ್ರಶಸ್ತಿಗಳು ಪ್ರತಿಭೆಯ ಮಾನದಂಡ ಹಾಗೂ ಪ್ರೇರಣೆಯ ಪ್ರತೀಕ.ಅಲ್ಲದೇ ಸಾಂಸ್ಕೃತಿಕ ಸಾಧನೆಗೆ ಸಲ್ಲುವ ಪ್ರಶಸ್ತಿ ಎಂಬುದು ಗೌರವದ ಸಂಕೇತ.

ಜಗತ್ತಿನ ಮೊದಲ ಸಮಾಜವಾದಿ ವಿಶ್ವಗುರು ಬಸವೇಶ್ವರರ ಹೆಸರಿನ ಪ್ರಶಸ್ತಿ ಪಡೆಯುವುದೇ ಮಹಾಭಾಗ್ಯ.ಈ ಮಾತಿಗೆ ಹೋಲಿಕೆಯಾಗುವಂತೆ ಬಸವನ ಬಾಗೇವಾಡಿಯ ಬಸವ ಜನ್ಮ ಭೂಮಿ ಪ್ರತಿಷ್ಠಾನವು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ದಶಮಾನೋತ್ಸವ ಸಂಭ್ರಮವನ್ನು ಆಚರಿಸುವುದರ ಜೊತೆಗೆ ಸಾರ್ಥಕತೆ ಪಡೆದುಕೊಂಡಿದೆ. ಮುಳವಾಡದ ಹಿರಿಯ ಸಾಹಿತಿ ಪ.ಗು ಸಿದ್ದಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಕೋರಿದರು.

ವಿಜಯಪುರದಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಗುರು ಗಚ್ಚಿನ ಮಠ ಅವರು ಅತಿಥಿಯಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ನೆಲೆಯಲ್ಲಿ ಸಾಧನೆಗೈದ ವಿಜಯಪುರದ ಡಾ ಕೃಷ್ಣ ಕೋಲ್ಹಾರ ಕುಲಕರ್ಣಿ (ಸಂಶೋಧನೆ) ಬೆಂಗಳೂರಿನ ಡಾ ಆಡುಗೋಡಿ ಶ್ರೀನಿವಾಸ (ಚಲನ ಚಿತ್ರ) ವಿಜಯಪೂರದ ಗುರು ಗಚ್ಚಿನ ಮಠ (ಸಮಾಜ) ಧರ್ಮಸ್ಥಳದ ಶಶಿಧರ ಆಚಾರ್ಯ (ಶಿಲ್ಪಕಲೆ) ಶಂಕರಗೌಡ ಬಿರಾದಾರ (ವೈಧ್ಯಕೀಯ) ಇವರಿಗೆಲ್ಲರಿಗೂ ‘ಬಸವ ವಿಭೂಷಣ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಾಗೆಯೇ ಕುಮಾರಿ ಬಬಲೇಶ್ವರದ ಪೂರ್ವಿ ಪತ್ತಾರ (ಬಾಲ ಪ್ರತಿಭೆ) ಆನೇಕಲ್ ನ ಡಾ ನಾಗರಾಜು (ಸಮಾಜ) ಬೆಂಗಳೂರಿನ ಎಸ್.ಚೆಲುವರಾಜು (ಕ್ರೀಡೆ) ನಿಡೋಣಿಯ ಪ್ರವೀಣ ಪತ್ತಾರ (ಶಿಕ್ಷಣ) ನಾರಾಯಣ ಬಾಬಾನಗರ (ವಿಜ್ಞಾನ) ಇವರಿಗೆಲ್ಲರಿಗೂ ಬಸವ ಭೂಷಣ ರಾಜ್ಯ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಅಂತಹ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ 173 ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿರುವ ಕನ್ನಡ ಮಾಧ್ಯಮದ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಿದೆ.

ಅಂತಹ ರಾತ್ರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಬಡಿಗೇರ ಅವರ ಅನುಪಮ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಅವರಿಗೆ ‘ಬಸವ ವಿಭೂಷಣ’ ರಾಷ್ಟೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪ್ರಿಯ ಶಿಕ್ಷಕರಾಗಿರುವ ಅವರು ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗ ವಹಿಸಲು ಅವರಿಗೆ ವಿಶೇಷ ಪ್ರೋತ್ಸಾಹ ನೀಡಿ ಅವರ ಯಶಸ್ವಿಗೆ ಕಾರಣರಾಗುತ್ತಾರೆ.

ಒಳನಾಡ ಮತ್ತು ಹೊರನಾಡ ಪತ್ರಿಕೆಗಳಲ್ಲಿ ಇವರು ರಚಿಸಿದ ಲೇಖನ,ಕವಿತೆಗಳು ಪ್ರಕಟಗೊಂಡು ಪ್ರಸಾರಗೊಂಡಿವೆ.ಶಿಕ್ಷಕರಾಗಿ,ಕವಿಯಾಗಿ,ಲೇಖಕರಾಗಿ ಸೇವೆ ಗೈಯುತ್ತಿರುವ ಮಲ್ಲಿಕಾರ್ಜುನ ಬಡಿಗೇರ ಅವರು ಕನ್ನಡ ಪರಿಚಾರಿಕೆಯಲ್ಲಿ ಗುರುತಿಸಿ ಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಕಿ ಪೂರ್ವಿ ಪತ್ತಾರ ಪ್ರಾರ್ಥನೆ ಮಾಡಿದರು.ಪ್ರತಿಷ್ಠಾನದ ಸಂಚಾಲಕರಾದ ಡಾ ಮುರುಗೇಶ ಸಂಗಮ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.ಪ್ರೊ ಮಹಾದೇವ ರೆಬಿನಾಳರು ನಿರೂಪಣೆಗೈದರು. ಶಿವಾಜಿ ಮೋರೆ ಅವರು ವಂದಿಸಿದರು.

ವರದಿ : ಈಶ್ವರ್ ಎಂ ಐ ಎಲ್

Comments are closed.