ಕರಾವಳಿ

ಆಗುಂಬೆ ಘಾಟಿಯಲ್ಲಿ ತ್ಯಾಜ್ಯ ಸಂಗ್ರಹಿಸಿ ಮಾದರಿಯಾದ ಉಡುಪಿ ಜಿಲ್ಲೆಯ ಅಧಿಕಾರಿಗಳ ತಂಡ

Pinterest LinkedIn Tumblr

ಉಡುಪಿ: ಶನಿವಾರ ಹೆಬ್ರಿ ತಾಲೂಕಿನ ಕಬ್ಬಿನಾಲೆ ಮತ್ತು ನಾಡ್ಪಾಲು ಎಂಬಲ್ಲಿ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿ, ಸೋಮೇಶ್ವರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಅಧಿಕಾರಿಗಳ ತಂಡ, ಬೆಳಗಿನ ವಾಯು ವಿಹಾರ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರೊಂದಿಗೆ ಸೋಮೇಶ್ವರದಿಂದ ಆಗುಂಬೆ ಕಡೆಗೆ ಇಂದು ಬೆಳಗಿನ ವಾಯು ವಿಹಾರ ಹೊರಟ ಅಧಿಕಾರಿಗಳಾದ ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್, ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಹೆಬ್ರಿ ತಹಸೀಲ್ದಾರ್ ಪುರಂದರ ಅವರು , ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು , ಗಾಜಿನ ಬಾಟಲಿಗಳು , ಪ್ಲಾಸ್ಟಿಕ್ ಕವರ್ ಸೇರಿದಂತೆ ಮತ್ತಿತರ ಕಸವನ್ನು ಕಂಡು ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿ, ಆಗುಂಬೆ ಘಾಟ್ ನ 14 ನೇ ತಿರುವಿನಲ್ಲಿ ಸುಮಾರು 200 ಮೀ ವರೆಗಿನ ರಸ್ತೆಯಲ್ಲಿ, ಪ್ರವಾಸಿಗರು ಮತ್ತು ಸಾರ್ವಜನಿಕರು ಎಸೆದಿದ್ದ 5 ಚೀಲಕ್ಕೂ ಹೆಚ್ಚಿನ ಕಸವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಆಗುಂಭೆ ಘಾಟ್ ನಲ್ಲಿ ಪರಿಸರ ಸ್ವಚ್ಛತೆಗೆ ಕಾರಣರಾದರು.

ಪ್ರವಾಸಿಗರು ಮತ್ತು ಸಾರ್ವಜನಿಕರು ಆಗುಂಬೆ ಘಾಟ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತಿತರ ಕಸ ಬಿಸಾಡುವುದರಿಂದ , ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವಾದ ಇಲ್ಲಿ ಮಾಲಿನ್ಯ ಉಂಟಾಗುವುದರ ಜೊತೆಗೆ ವಿವಿಧ ಕಾಡುಪ್ರಾಣಿಗಳ ಆರೋಗ್ಯಕ್ಕೂ ಸಹ ತೊಂದರೆಯಾಗಲಿದ್ದು, ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಿನಂತಿ ಮಾಡಿದ್ದಾರೆ.

Comments are closed.