ಕರ್ನಾಟಕ

ನ್ಯಾಯಾಲಯದ ಮೆಟ್ಟಿಲೇರಿರುವ 6 ಮಂದಿ ಸಚಿವರಿಗೂ ಫೇಕ್ ವಿಡಿಯೋ ಭಯ: ರಾಜುಗೌಡ

Pinterest LinkedIn Tumblr

ಯಾದಗಿರಿ: ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿಬಂದಿರುವ ರಾಸಲೀಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಾಜುಗೌಡ, ಆ್ಯಪ್ ಬಳಕೆ ಮಾಡಿಕೊಂಡು ಯಾರು ಬೇಕಾದರೂ ಎಡಿಟ್ ಮಾಡಿ ನಕಲಿ ವಿಡಿಯೋ ಸೃಷ್ಟಿ ಮಾಡಬಹುದು ಎಂದು ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ರಾಜುಗೌಡ, ಇಂತಹ ಪ್ರಕರಣಗಳನ್ನು ಮೊದಲು ತನಿಖೆಗೆ ಒಳಪಡಿಸಬೇಕು ಹಾಗೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜನರ ಮನಸ್ಸಿನಲ್ಲಿ ಇಂಥಾ ವಿಚಾರಗಳ ಬಗ್ಗೆ ಬೇರೆಯದೇ ರೀತಿಯ ಭಾವನೆ ಇರುತ್ತೆ. ರಾಜಕಾರಣಿಗಳು ಪ್ರಭಾವ ಬಳಸಿ ಇಂತಹ ಕೇಸ್‌ಗಳನ್ನು ತಿರುಚುತ್ತಾರೆ ಎಂದು ಭಾವಿಸಿರುತ್ತಾರೆ ಎಂದು ರಾಜುಗೌಡ ಹೇಳಿದರು.

ಇನ್ನು 6 ಜನ ಸಚಿವರು ತಮ್ಮ ವಿರುದ್ಧದ ವರದಿಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜುಗೌಡ, ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು. ಎಲ್ಲಾ 6 ಜನರಿಗೂ ಫೇಕ್ ವಿಡಿಯೋ ಮಾಡಿ ಬಿಡುವ ಭಯ ಇರಬಹುದು. ಹೀಗಾಗಿ ಕೋರ್ಟ್‌ ಮೆಟ್ಟಿಲು ಹತ್ತಿರಬಹುದು ಎಂದು ಹೇಳಿದರು.

ಇನ್ನೂ ಮೂರು ಸಿಡಿಗಳಿವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಾಜುಗೌಡ, ಸಿಡಿ ಇದ್ರೆ ಕೊಡಲಿ, ಅದನ್ನು ಇಟ್ಟುಕೊಂಡು ಕೂರೋದು ಏಕೆ ಎಂದು ಸವಾಲೆಸೆದರು. ಮಹಿಳೆಯರ ಮೇಲೆ ಯಾರಾದ್ರೂ ದೌರ್ಜನ್ಯ ಮಾಡಿದರೆ ಅವರಿಗೆ ಎಂತಹ ಶಿಕ್ಷೆ ಬೇಕಾದರು ಕೊಡಲಿ ಎಂದು ರಾಜುಗೌಡ ಹೇಳಿದರು.

ಕರ್ನಾಟಕದಲ್ಲಿ ಇತ್ತೀಚೆಗೆ ಸಿಡಿ ರಾಜಕೀಯ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ರಾಜುಗೌಡ, ಉತ್ತರ ಕರ್ನಾಟಕದ ಶಾಸಕರಾದ ನಾವು ಎಲ್ಲರನ್ನೂ ನಂಬುತ್ತೇವೆ. ಹಾಗಾಗಿ ಬೇಗ ಹಳ್ಳಕ್ಕೆ ಬೀಳುತ್ತೇವೆ ಎಂದರು. ದಕ್ಷಿಣ ಕರ್ನಾಟಕ ಭಾಗದ ಶಾಸಕರು ಜನರ ಜೊತೆಗೆ ಮಾತನಾಡಬೇಕಾದ್ರೆ ಎಲ್ಲ ರೀತಿ ಚೆಕ್ ಮಾಡಿ, ಅವರ ಜೊತೆ ಮಾತಾಡ್ತಾರೆ. ಆದ್ರೆ ನಾವು ಹಾಗಲ್ಲ. ಎಲ್ಲರ ಜೊತೆಗೂ ಸಾಮಾನ್ಯವಾಗಿ ಭೇಟಿಯಾಗುತ್ತೇವೆ. ಇದು ನಮ್ಮ ಮುಗ್ಧತೆ ಎಂದರು.

ಇನ್ನು ವಿಡಿಯೋದಲ್ಲಿ ಇರುವ ಯುವತಿ ಈ ಭಾಗದವಳಲ್ಲ ಎಂದ ರಾಜುಗೌಡ, ಆ ಮಹಿಳೆಯ ಧ್ವನಿ ಪರಿಶೀಲನೆ ಮಾಡಬೇಕು ಎಂದರು. ಜಾರಕಿಹೊಳಿ ವಿರುದ್ಧದ ರಾಸಲೀಲೆ ಆರೋಪ ವಿಚಾರದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಅಭಿಪ್ರಾಯಪಟ್ಟ ರಾಜುಗೌಡ, ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದಾಗಿನಿಂದ ಪ್ರೀ ಪ್ಲಾನ್ ಮಾಡಿ ಇದನ್ನು ಮಾಡಿದ್ದಾರೆ ಎಂದು ಹೇಳಿದರು.

Comments are closed.