ಕರ್ನಾಟಕ

ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ 2,100 ಕೋಟಿ ಸಂಗ್ರಹ: ಪೇಜಾವರ ಸ್ವಾಮೀಜಿ

Pinterest LinkedIn Tumblr

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದರ ದೇವಾಲಯಕ್ಕೆ ನಿಧಿಸಂಗ್ರಹ ಅಭಿಯಾನದ ಟೀಕೆಗೆ ಗುರಿಯಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಟ್ರಸ್ಟ್ ದೇಶಾದ್ಯಂತ 2,100 ಕೋಟಿ ರೂ. ಸಂಗ್ರಹಿಸಿದೆ, ಆದರೆ ಅಭಿಯಾನ ಚಾಲನೆಯಲ್ಲಿರುವಾಗ ಖಚಿತ ಮಾಹಿತಿ ನೀಡಲಾಗದು ಎಂದು ಶನಿವಾರ ಹೇಳಿದ್ದಾರೆ.

ರಾಷ್ಟ್ರಧರ್ಮ ಸಂಸ್ಥೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಲಾಲ್‌ಬಾಗ್ ವೆಸ್ಟ್ ಗೇಟ್ ಮುಂದೆ ರಾಮ ಮಂದಿರ ಮತ್ತು ಭಗವಂತ ರಾಮನ ಬೃಹತ್ ಕಲಾಕೃತಿಗಳ ಪ್ರದರ್ಶನ ಮಾಡಿದ್ದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹದ ಅಭಿಯಾನದ ಅಂಗವಾಗಿ ಮೂರು ದಿನಗಳ ಸಾರ್ವಜನಿಕ ಪ್ರದರ್ಶನವನ್ನು ರಾಷ್ಟ್ರಧರ್ಮ ಸಂಸ್ಥೆ ಆಯೋಜಿಸಿದೆ.

ಈ ಕಲಾಕೃತಿ 30 ಅಡಿ ಎತ್ತರ ಮತ್ತು 35 ಅಡಿ ಅಗಲವಿದೆ, ಇದನ್ನು ಆರು ಚಿತ್ರಕಲಾ ಪರಿಷತ್ ವಿದ್ಯಾರ್ಥಿಗಳಾದ ರಘು ಒಡೆಯಾರ್‌, ಮಂಜುನಾಥ್ ಎಲ್, ಫಯಾಜ್, ಜಿಲಾಲ್, ಸುಯಶ್ ಮತ್ತು ಪುನೀತ್ ಅವರು ಸುಮಾರು 35,000 ಐದು ರೂಪಾಯಿ ನಾಣ್ಯಗಳು ಮತ್ತು 25,000 ಒಂದು ರೂಪಾಯಿ ನಾಣ್ಯಗಳನ್ನು ಬಳಸಿ ರಚಿಸಿದ್ದಾರೆ. ಈ ಕಲಾವಿದರು ಅದನ್ನು ಪೂರ್ಣಗೊಳಿಸಲು 10 ದಿನಗಳನ್ನು ತೆಗೆದುಕೊಂಡರು ಎಂದು ತಿಳಿಸಿದ್ದಾರೆ.

ನಾವು ಇಲ್ಲಿಯವರೆಗೆ ದೇವಾಲಯಕ್ಕಾಗಿ 2,100 ಕೋಟಿ ರೂ. ಸಂಗ್ರಹಿಸಿದ್ದು ಈ ಸಂಗ್ರಹವು 2,500 ಕೋಟಿ ರೂ.ಗಳವರೆಗೆ ತಲುಪಬಹುದೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಈಗಲೇ ಖಚಿತ ಲೆಕ್ಕ ನೀಡಲಾಗುವುದಿಲ್ಲ ಎಂದು ಶ್ರೀಗಳು ಹೇಳಿದರು.

ನಿಧಿಸಂಗ್ರಹಿಸುವ ಕಾರ್ಯವನ್ನು ಲೂಟಿ ಎಂದಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವಾಲಯಗಳಿಗೆ ದೇಣಿಗೆ ನೀಡಿದ ಹಣವನ್ನು ಯಾರಾದರೂ ಕದಿಯುವಾಗ ಲೂಟಿ ಎನ್ನಬಹುದು. ಆದರೆ ದೇವಾಲಯದ ನಿರ್ಮಾಣದ ಉದಾತ್ತ ಕಾರಣಕ್ಕಾಗಿ ಹಣವನ್ನು ಸಂಗ್ರಹಿಸುವಾಗ ಅದು ಲೂಟಿ ಆಗದು ಎಂದರು.

ದೇಣಿಗೆ ನೀಡದ ಮನೆಗಳಿಗೆ ಗುರುತು ಮಾಡಲಾಗುತ್ತಿದೆ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಧಿ ಸಂಗ್ರಹದ ಪುಸ್ತಕ ಖಾಲಿಯಾದಾಗ ದೇಣಿಗೆ ಸ್ವೀಕರಿಸುವ ತಂಡವು ನಿಧಿ ಸಂಗ್ರಹಿಸಿದ ಮನೆಗಳಿಗೆ ಗುರುತು ಹಾಕಿದೆ. ಅಲ್ಲಿ ಇನ್ನಷ್ಟೇ ಸಂಗ್ರಹ ಮಾಡಬೇಕಾಗಿದೆ ಎಂಬ ನೆನಪಿಗಷ್ಟೇ ಆ ಗುರುತಾಗಿದೆ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದರು.

ಬೃಹತ್ ಕಲೆಯ ಮುಖ್ಯ ವಿನ್ಯಾಸಕ ರಘು ಒಡೆಯಾರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಭಗವಂತ ರಾಮ ದೇವಾಲಯವನ್ನು ನಿರ್ಮಿಸಲು ದೇಶಾದ್ಯಂತ ಜನರು ಹೇಗೆ ಒಗ್ಗೂಡಿದ್ದಾರೆ ಎಂಬುದನ್ನು ತೋರಿಸುವುದು ಈ ಕಲೆಯ ಹಿಂದಿನ ಮುಖ್ಯ ಆಲೋಚನೆ. ಈ ಕಲೆಯಲ್ಲಿನ ನಾಣ್ಯಗಳು ನಮ್ಮ ದೇಶದ ಜನರು ನೀಡಿದ ಕೊಡುಗೆಗಳನ್ನು ಚಿತ್ರಿಸುತ್ತದೆ ಎಂದು ಹೇಳಿದರು.

ರಾಷ್ಟ್ರಧರ್ಮ ಸಂಸ್ಥೆಯ ಖಜಾಂಚಿ ಸಂತೋಷ್, ರಾಮ ಮಂದಿರ ಚಳವಳಿಯ ಸಮಯದಲ್ಲಿ ನಾವು ಈ ಸಂಘಟನೆಯನ್ನು ರಚಿಸಿದಾಗ, ನಮ್ಮ ಕನಸು ಇಷ್ಟು ಬೇಗ ಸಾಕಾರಗೊಳುತ್ತದೆ ಎಂದು ಭಾವಿಸಿರಲಿಲ್ಲ ಎಂದಿದ್ದಾರೆ.

 

Comments are closed.