ಕುಂದಾಪುರ: ತಮ್ಮ ನ್ಯಾಯಯುತವಾದ ಬೇಡಿಕೆ ಮುಂದಿಟ್ಟುಕೊಂಡು ಲಕ್ಷಾಂತರ ಮಂದಿ ರೈತರು ದೆಹಲಿಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಯಾರ್ಯಾರೊ ಮನೆಯ ಮದುವೆ ಸಮಾರಂಭದಲ್ಲಿ ಪಾಲ್ಗೊಳಲು ಪ್ರಧಾನಿಯವರಿಗೆ ಸಮಯವಿದೆ. ಆದರೆ ರೈತರನ್ನು ಮಾತನಾಡಿಸಲು ಸಮಯವಿಲ್ಲ. ಅನ್ನದಾತರು ಇಲ್ಲವಾದರೆ ನಾವಿರಲು ಸಾಧ್ಯವಿಲ್ಲ. ಅವರಿಗೆ ರಕ್ಷಣೆ ಕೊಡಲಾಗಿಲ್ಲವೆಂದರೆ ಈ ಸರ್ಕಾರ ಯಾಕೆ ಇರಬೇಕು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅವರು ಶನಿವಾರ ಮಧ್ಯಾಹ್ನ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ದ ಆರು ದಿನಗಳ ಕಾಲ ಹೆಜಮಾಡಿಯಿಂದ ಬೈಂದೂರಿನ ತನಕ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜನಧ್ವನಿ ಕಾಂಗ್ರೆಸ್ ಕಾರ್ಯಕ್ರಮವಲ್ಲ ಅಥವಾ ಕೆಪಿಸಿಸಿ ಹಾಕಿಕೊಂಡಂತಹ ಕಾರ್ಯಕ್ರಮವಲ್ಲ. ಬದಲಾಗಿ ಜನರು ಏನು ನೋವನ್ನು ಅನುಭವಿಸುತ್ತಿದ್ದಾರೊ ಆ ನೋವಿನ ಸಂಕೇತವಾಗಿ ಈ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ. ಇದನ್ನು ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಮಾಡುತ್ತಿದ್ದಾರೆ ಹೊರತು ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ಹೇಳಲು ಬಯಸುವುದಿಲ್ಲ. ಜನರ ಪ್ರತಿದಿನದ ಬದುಕಿನಲ್ಲಿ, ಅವರ ಕಷ್ಟ ಸುಖದಲ್ಲಿ ಯಾವಾಗಲೂ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ತೋರಿಸುವುದಕ್ಕೆ ಇಂದು ೧೦೮ ಕೀಲೋ ಮೀಟರ್ ದೂರ ಪಾದಯಾತ್ರೆಯ ಮೂಲಕ ಸಾಗಿ ಬಂದಿದ್ದೇವೆ. ಇದೇ ದಿಕ್ಕಿನಲ್ಲಿ ನಮ್ಮ ಮುಖಂಡರೆಲ್ಲರೂ ಸೇರಿ ಒಗ್ಗಟ್ಟಿನಿಂದ ಮತದಾರರ ಭಾವನೆಗಳನ್ನ ಅರಿತು ಕೆಲಸ ಮಾಡಿದರೆ ಈ ಜಿಲ್ಲೆಯಲ್ಲಿ ೬ ಕ್ಕೆ ೫ ಸೀಟು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಬರುತ್ತದೆ ಎನ್ನುವ ಆತ್ಮವಿಶ್ವಾಸವಿದೆ ಎಂದರು.
ಬಿಜೆಪಿ ಜೆಸಿಬಿ ಇದ್ದಂತೆ: ಡಿಕೆಶಿ
ಇಡೀ ರಾಜ್ಯಕ್ಕೆ ದ.ಕ ಜಿಲ್ಲೆ ಅನೇಕ ಬ್ಯಾಂಕ್ಗಳನ್ನು ನೀಡಿ ಆರ್ಥಿಕ ಶಕ್ತಿಯನ್ನು ಕೊಟ್ಟಿತ್ತು. ಇಂದಿರಾ ಗಾಂದಿಯವರ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ರಾತ್ರೋರಾತ್ರಿ ಈ ಎಲ್ಲಾ ಬ್ಯಾಂಕ್ಗಳನ್ನು ರಾಷ್ಟ್ರೀಕೃತ ಮಾಡಿತ್ತು. ಆದರೆ ಬಿಜೆಪಿ ಇವತ್ತು ಕರಾವಳಿಯ ಬ್ಯಾಂಕ್ಗಳನ್ನು ಒಂದೊಂದಾಗಿಯೇ ಮುಚ್ಚುತ್ತಾ ಹೋಗುತ್ತಿದೆ. ದ.ಕದ ಹೆಮ್ಮೆಯ ಬ್ಯಾಂಕ್ಗಳನ್ನು ಮುಚ್ಚುವಾಗ ನಮ್ಮ ಸಂಸದರ ಧ್ವನಿ ಎಲ್ಲಿ ಅಡಗಿತ್ತು. ಮನೆ ಕಟ್ಟುವುದು ಬಹಳ ಕಷ್ಟ. ಆದರೆ ಅದನ್ನು ನಾಶ ಮಾಡಲು ಒಂದು ಜೆಸಿಬಿ ಸಾಕು. ಆ ಜೆಸಿಬಿ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಡಿಕೆಶಿ ಆರೋಪಿಸಿದರು.
ಮೀನುಗಾರಿಕೆಗೆ ಡೀಸೆಲ್ ಸಬ್ಸಿಡಿ ಇಲ್ಲ. ದಿನಬಳಕೆ ವಸ್ತುಗಳ ಬೆಲೆ ದಿನನಿತ್ಯವೆಂಬಂತೆ ಗಗನಕ್ಕೇರುತ್ತಿದೆ. ಕೊರೋನಾ ಬಂದ ಬಳಿಕ ಈ ಸರ್ಕಾರ ಜನರಿಗೆ ಬೆಲೆ ಏರಿಕೆಯ ಮೂಲುಕ ಕಿರುಕುಳ ನೀಡುತ್ತಿದೆ. ಜನರ ರಕ್ಷಣೆ ಮಾಡದ ಮೇಲೆ ಯಡಿಯೂರಪ್ಪ ಸರ್ಕಾರ ಯಾಕೆ ಬೇಕು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ನಮಗೆ ಅಚ್ಛೇ ದಿನ್ ಬೇಡ, ಸಚ್ಛೇ ದಿನ್ ಕೊಡಿ. ಸತ್ಯದ ದಿನಗಳನ್ನು ಕೊಡಿ. ಕೇವಲ ಸುಳ್ಳು ಹೇಳಿ ಜನರನ್ನು ಯಾಮಾರಿಸಬೇಡಿ. ನಾನು ಕನಕಪುರದ ಬಂಡೆ ಅಲ್ಲ, ಆ ಬಂಡೆ ಪ್ರಕೃತಿ, ಅದನ್ನು ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಿಜೆಪಿಯವರು ನಾವು ಹಿಂದೂ ಮುಂದೂ ಎನ್ನುತ್ತಾರೆ. ಆದರೆ ನಾವು ಹಾಗಿಲ್ಲ, ಎಲ್ಲಾ ಧರ್ಮಗಳು ಸೇರಿ ಒಂದು. ನಮಗೆ ಮಾನವ ತತ್ವ ಮುಖ್ಯ. ನಮ್ಮ ರಕ್ತ, ಉಸಿರು, ಬೆವರಿನಲ್ಲಿ ಯಾವುದೇ ಬೇಧ ಇಲ್ಲ. ಇವತ್ತು ನಾವು ಅಧಿಕಾರ ಕಳೆದುಕೊಂಡಿರಬಹುದು. ಆದರೆ ನಮಗೆ ವಿಶ್ವಾಸ, ನಂಬಿಕೆ ಇದೆ. ಮತ್ತೆ ವಿಧಾಸಸೌಧದಲ್ಲಿ ಕಾಂಗ್ರೆಸ್ ಬಾವುಟ ಈ ರಾಜ್ಯದ ಜನ ಹಾರಿಸಲಿದ್ದಾರೆ ಎಂದು ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮವರನ್ನು ಕರೆದುಕೊಂಡು ಸರ್ಕಾರ ಮಾಡಿದ್ದಾರೆ…
ನಮ್ಮ ಜನರನ್ನು ಕರೆದುಕೊಂಡು ಹೋಗಿ ಬಿಜೆಪಿ ಸಕಾರ ರಚಿಸಿದೆ. ಮಾಡಿಕೊಳ್ಳಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆಗೆ ಒಂದಿನಿತು ಲಾಭವಾಗಿಲ್ಲ. ದಿನಬೆಳಗಾದರೆ ಬಿಜೆಪಿಯ ಶಾಸಕರು, ಸಚಿವರು ಒಂದೊಂದು ಹೇಳಿಕೆಗಳನ್ನು ಕೊಡುತ್ತಾರೆ. ಈ ಸರ್ಕಾರವನ್ನು ನಾವೇನು ತೆಗೆಯಬೇಕಿಲ್ಲ. ಬಿಜೆಪಿಯ ನಾಯಕರ ವರ್ತನೆಯೇ ಸಾಕು. ಅವರ ಬೇಜವಾಬ್ದಾರಿ ಆಡಳಿತವೇ ಸಾಕು ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ದ ಲೇವಡಿಯಾಡಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವಾರಾಜ್, ಮಾಜಿ ಶಾಸಕ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ನ ಮಿಥುನ್ ರೈ, ಎಂ ಎ ಗಫೂರ್, ಯುಬಿ ಶೆಟ್ಟಿ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ ಮೊದಲಾದವರು ಇದ್ದರು.
ಅಮಿತ್ ಶಾ ಹೇಳುತ್ತಾರೆ ಬಿಜೆಪಿ ಸರ್ಕಾರ ಜನರನ್ನು ಸೇಫ್ ಆಗಿ ಇಟ್ಟಿದೆ ಎಂದು. ಇಷ್ಟು ವರ್ಷಗಳ ಕಾಲ ನಾವೇನು ಜನರನ್ನು ಸೇಫ್ ಆಗಿ ಇಟ್ಟಿರಲಿಲ್ಲವೇ. ನಾವೇನು ಜನರಿಗೆ ರಕ್ಷಣೆ ಕೊಟ್ಟಿಲ್ಲವೇ. ಇನ್ನೂರು ಮಂದಿ ರೈತರು ಸತ್ತಾಗ ಮಾತನಾಡದ ಬಿಜೆಪಿ ಸರ್ಕಾರ ಈ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ.
-ಡಿಕೆ ಶಿವಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷರು
Comments are closed.