ಕರ್ನಾಟಕ

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಬಂಧನ

Pinterest LinkedIn Tumblr

ಚಿಕ್ಕಬಳ್ಳಾಪುರ: ಆರು ಮಂದಿಯನ್ನು ಬಲಿ ಪಡೆದ ಚಿಕ್ಕಬಳ್ಳಾಪುರದ ಹಿರೇನಾಗವೇರಿ ಗ್ರಾಮದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಹಾಗೂ ಕ್ವಾರಿ ಮಾಲೀಕ ಜಿಎಸ್ ನಾಗರಾಜ್ ಸೇರಿದಂತೆ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತಮಿಳುನಾಡಿನ ಹೊಸೂರಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಾಗರಾಜ್ ಹಾಗೂ ಮತ್ತೊಬ್ಬ ಆರೋಪಿ ಗಣೇಶ್ ನನ್ನು ಇಂದು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇನ್ನು ಐವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಆರೋಪಿ ನಾಗರಾಜ್ ಸ್ಫೋಟಗೊಂಡ ಕಲ್ಲು ಕ್ವಾರಿಯ ಮಾಲೀಕನಾಗಿದ್ದು, ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡರಾಗಿದ್ದಾರೆ ಎನ್ನಲಾಗಿದೆ. ಎಂಟನೇ ಆರೋಪಿ ಗಣೇಶ್ ಜಿಲೆಟಿನ್ ಸ್ಫೋಟಕಗಳನ್ನ ಸರಬರಾಜು ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ, ಪ್ರವೀಣ್, ರಿಯಾಜ್ ಮತ್ತು ಮಧುಸೂಧನ್ ಎಂಬ ಐವರನ್ನು ಬಂಧಿಸಲಾಗಿತ್ತು. ಇಂದು ಮತ್ತೆ ಇಬ್ಬರನ್ನು ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ಜೆಲ್ಲಿ ಕ್ರಷರ್ ನಲ್ಲಿ ಸೋಮವಾರ ರಾತ್ರಿ 12:30ರ ಸುಮಾರಿಗೆ ದುರಂತ ಸಂಭವಿಸಿದ್ದು, ಘಟನೆಗೆ ಜಿಲೆಟಿನ್ ಕಡ್ಡಿಗಳ ಸ್ಫೋಟವೇ ಕಾರಣ ಎಂದು ತಿಳಿದುಬಂದಿದೆ.

Comments are closed.